×
Ad

11ರ ಹರೆಯದಲ್ಲೇ ಪಿಯುಸಿ ತೇರ್ಗಡೆ, 17ರ ಹರೆಯದಲ್ಲಿ ಪಿಎಚ್‌ಡಿಗೆ ನೋಂದಣಿ

Update: 2017-04-16 19:06 IST

ಹೈದರಾಬಾದ್, ಎ.16: ಹನ್ನೊಂದರ ಹರೆಯದಲ್ಲೇ ಪಿಯುಸಿ ತೇರ್ಗಡೆಯಾಗುವ ಮೂಲಕ ಹೈದರಾಬಾದ್‌ನ ಆಗಸ್ತ್ಯ ಜೈಸ್ವಾಲ್ ಹೊಸ ದಾಖಲೆಯೊಂದನ್ನು ಬರೆದಿದ್ದಾನೆ. ಪಿಯುಸಿ ತೇರ್ಗಡೆಯಾದ ತೆಲಂಗಾಣದ ಅತ್ಯಂತ ಕಿರಿಯ ಬಾಲಕ ಎಂಬ ಹೆಗ್ಗಳಿಕೆ ಈತನದ್ದಾಗಿದೆ. ಈತನ ಸೋದರಿ ಈತನಿಗಿಂತಲೂ ಒಂದು ಕೈ ಮೇಲೆನಿಸಿದ್ದಾಳೆ. 10ರ ಹರೆಯದಲ್ಲೇ ಪಿಯುಸಿ ಮುಗಿಸಿ, ಇದೀಗ 17ರ ಹರೆಯದಲ್ಲಿ ಪಿಎಚ್‌ಡಿ ಅಧ್ಯಯನಕ್ಕೆ ನೋಂದಾಯಿಸಿಕೊಂಡಿದ್ದಾಳೆ.

ಯೂಸುಫ್‌ಗುಡದಲ್ಲಿರುವ ಸೈಂಟ್ ಮೇರೀಸ್ ಜೂನಿಯರ್ ಕಾಲೇಜಿನ ವಿದ್ಯಾರ್ಥಿಯಾಗಿರುವ ಆಗಸ್ತ್ಯ ವಾಣಿಜ್ಯಶಾಸ್ತ್ರ, ಅರ್ಥಶಾಸ್ತ್ರ ಮತ್ತು ಪೌರನೀತಿ - ಇವನ್ನು ಪ್ರಧಾನ ವಿಷಯವಾಗಿ ಆರಿಸಿಕೊಂಡು ಶೇ.63ರಷ್ಟು ಅಂಕಗಳೊಂದಿಗೆ ಪಿಯುಸಿ ತೇರ್ಗಡೆಯಾಗಿದ್ದಾನೆ. ವಾಣಿಜ್ಯಶಾಸ್ತ್ರ(ಕಾಮರ್ಸ್)ನಲ್ಲಿ ಪದವಿ ಪಡೆಯುವುದು ನನ್ನ ಇಚ್ಚೆ. ಆದರೆ ಡಾಕ್ಟರ್ ಆಗುವುದು ನನ್ನ ಪ್ರಧಾನ ಗುರಿಯಾಗಿದೆ ಎಂದು ಪಿಯುಸಿ ಫಲಿತಾಂಶ ಹೊರಬಿದ್ದ ಬಳಿಕ ಆಗಸ್ತ್ಯ ಹೇಳಿದ್ದಾನೆ.

ಕಾಮರ್ಸ್ ಪದವೀಧರ ಮತ್ತು ಡಾಕ್ಟರ್..! ಒಂದಕ್ಕೊಂದು ಸಂಬಂಧವೆಲ್ಲಿ ಎಂದು ಆಶ್ಚರ್ಯ ಪಡುವವರಿಗೆ ಆಗಸ್ತ್ಯ ತನ್ನ ಗುರಿ ಸಾಧನೆಯ ಮಾರ್ಗವನ್ನು ಹೀಗೆ ವಿವರಿಸುತ್ತಾನೆ. ಬಿ.ಕಾಂ ಮುಗಿಸಿದ ಬಳಿಕ ಮತ್ತೆ ಇಂಟರ್‌ಮೀಡಿಯೇಟ್ ಪರೀಕ್ಷೆ ಬರೆಯುವುದು. ಬಯಾಲಜಿ, ಫಿಸಿಕ್ಸ್ ಮತ್ತು ಕೆಮಿಸ್ಟ್ರಿ ವಿಷಯಗಳೊಂದಿಗೆ ಇಂಟರ್‌ಮೀಡಿಯೇಟ್ ಪರೀಕ್ಷೆಯಲ್ಲಿ ಪಾಸಾಗಿ ವೈದ್ಯಕೀಯ ಪದವಿಯ ಪ್ರವೇಶ ಪರೀಕ್ಷೆ ಬರೆಯುವುದು. ಇದರಲ್ಲಿ ತೇರ್ಗಡೆಯಾಗಿ ಎಂಬಿಬಿಎಸ್ ಕೋರ್ಸ್‌ಗೆ ಅರ್ಹತೆ ಪಡೆಯುವುದು..

ಅಲ್ಲದೆ, ಮೆಡಿಕಲ್ ಕಾಲೇಜಿಗೆ ಪ್ರವೇಶ ದೊರಕಬೇಕಾದರೆ ವಿದ್ಯಾರ್ಥಿಗೆ ಕನಿಷ್ಟ 17 ವರ್ಷ ಆಗಿರಬೇಕು ಎಂಬ ನಿಯಮವೂ ಇದೆ. ಆದ್ದರಿಂದ ಸಮಯ ವ್ಯರ್ಥವಾಗಬಾರದು ಎಂಬ ಕಾರಣಕ್ಕೆ ಆಗಸ್ತ್ಯ ಪದವಿ ಪೂರೈಸಲು ನಿರ್ಧರಿಸಿದ್ದಾನೆ. ತನ್ನ ಎಂಟನೇ ವರ್ಷಕ್ಕೆ ಎಸ್ಸೆಸ್ಸೆಲ್ಸಿ ತೇರ್ಗಡೆಯಾಗಿದ್ದ ಈತ ಒಂದು ವರ್ಷದ ಬಳಿಕ ಪಿಯುಸಿಗೆ ಸೇರ್ಪಡೆಗೊಂಡಿದ್ದ.

ಅರ್ಥಶಾಸ್ತ್ರ ಮತ್ತು ವಾಣಿಜ್ಯಶಾಸ್ತ್ರ ಕಲಿಯಲು ಕಷ್ಟವಾಗುವುದಿಲ್ಲವೇ ಎಂದು ಕೇಳಿದರೆ, ನನಗೆ ಯಾವುದೇ ವಿಷಯವನ್ನೂ ಬಾಯಿಪಾಠ ಮಾಡುವ ಅಭ್ಯಾಸವಿಲ್ಲ. ವಿಷಯವನ್ನು ತಿಳಿದುಕೊಂಡು ಉತ್ತರಿಸುವುದು ನನ್ನ ವಿಧಾನ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾನೆ.

ಈ ಬಾಲಕನ ಕುಟುಂಬದ ವೈಶಿಷ್ಟವೆಂದರೆ, ಈತನ ಸೋದರಿ ನೈನಾ ಕೂಡಾ 17ರ ಹರೆಯದಲ್ಲೇ ಪಿಎಚ್‌ಡಿ ಅಧ್ಯಯನ ಮಾಡಲು ನೋಂದಾಯಿಸಿಕೊಂಡಿದ್ದಳು. ಸಬ್-ಜ್ಯೂನಿಯರ್ ಹಂತದಲ್ಲಿ ಅಂತರಾಷ್ಟ್ರೀಯ ಮಟ್ಟದ ಟೇಬಲ್ ಟೆನಿಸ್ ಆಟಗಾರ್ತಿಯಾಗಿರುವ ನೈನಾ, ಎಂಟರ ಹರೆಯದಲ್ಲೇ ಎಸ್‌ಎಸ್‌ಎಲ್‌ಸಿ ಮತ್ತು ಹತ್ತರ ಹರೆಯದಲ್ಲೇ ಇಂಟರ್‌ಮೀಡಿಯೇಟ್ ಪರೀಕ್ಷೆ ಪಾಸಾಗುವ ಮೂಲಕ ಇಂತಹ ಸಾಧನೆ ಮಾಡಿರುವ ಏಶ್ಯಾದ ಪ್ರಥಮ ಬಾಲಕಿ ಎಂಬ ದಾಖಲೆಗೆ ಪಾತ್ರಳಾಗಿದ್ದಾಳೆ.

13ರ ಹರೆಯದಲ್ಲೇ ಪತ್ರಿಕೋದ್ಯಮದಲ್ಲಿ ಪದವಿ ಪಡೆಯುವ ಮೂಲಕ , ಪತ್ರಿಕೋದ್ಯಮ ಪದವಿ ಪಡೆದ ದೇಶದ ಅತೀ ಕಿರಿಯ ಸಾಧಕಿ ಎಂಬ ಹಿರಿಮೆ ಇವಳದ್ದು. ಬಳಿಕ ನೈನಾ ಒಸ್ಮಾನಿಯಾ ವಿವಿಯಿಂದ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಳು.

ತನ್ನ ಪಿಎಚ್‌ಡಿ ಅಧ್ಯಯನಕ್ಕಾಗಿ ಆಂಧ್ರಪ್ರದೇಶದ ರಾಜಾಮಂಡ್ರಿಯಲ್ಲಿರುವ ಆದಿಕವಿ ನನ್ನಯ್ಯ ವಿಶ್ವವಿದ್ಯಾನಿಲಯವನ್ನು ಆಯ್ಕೆ ಮಾಡಿಕೊಂಡಿರುವ ನೈನಾ, ಕ್ರೀಡಾ ನಿರ್ವಹಣೆ ಎಂಬ ವಿಷಯವನ್ನು ಪಿಎಚ್‌ಡಿ ಅಧ್ಯಯನಕ್ಕೆ ಆರಿಸಿಕೊಂಡಿದ್ದಾಳೆ. ವಿವಿಯ ಉಪಕುಲಪತಿ ಎಂ.ಮುತ್ಯಾಲ ನಾಯ್ಡು ಈಕೆಗೆ ಮಾರ್ಗದರ್ಶಕರಾಗಿರುತ್ತಾರೆ.

ಈಕೆಯ ತಂದೆ ಅಶ್ವನಿ ಕುಮಾರ್ ವಕೀಲರಾಗಿದ್ದಾರೆ. ಇಬ್ಬರೂ ಮಕ್ಕಳು ಹುಟ್ಟು ಪ್ರತಿಭಾವಂತರು. ಅವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡಿದ್ದೇನೆ ಎಂದವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News