ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮುಸ್ಲಿಮರಲ್ಲಿ ಹಿಂದುಳಿದವರ ಪರವಾಗಿ ಮಾತನಾಡಿದ ಪ್ರಧಾನಿ ಮೋದಿ

Update: 2017-04-16 14:37 GMT

ಭುವನೇಶ್ವರ,ಎ.16: ರವಿವಾರ ಇಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಹಿಂದುಳಿದ ವರ್ಗಗಳ ಆಯೋಗ ಕುರಿತು ಚರ್ಚೆಯಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಮುಸ್ಲಿಂ ಸಮುದಾಯದಲ್ಲಿ ಹಿಂದುಳಿದವರಿಗೆ ಸೌಲಭ್ಯಗಳ ಬಗ್ಗೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ ಎಂದು ಹೇಳಿದರು. 1993ರಲ್ಲಿ ಕಾನೂನಿನ ಮೂಲಕ ರಚಿಸಲಾಗಿದ್ದ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಬದಲಾಗಿ ಅಸ್ತಿತ್ವಕ್ಕೆ ಬರಲಿರುವ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿ ಕ ಸ್ಥಾನಮಾನವನ್ನು ನೀಡುವ ಹೊಸ ಮಸೂದೆ ಕುರಿತ ಬೈಠಕ್‌ನಲ್ಲಿ ಅವರು ಮಾತನಾಡಿ ದರು.

ಬಹಳಷ್ಟು ಪ್ರದೇಶಗಳಲ್ಲಿ ಹಿಂದುಳಿದಿರುವ ಮುಸ್ಲಿಮರಿದ್ದಾರೆ. ಹೊಸ ರೂಪದ ಹಿಂದುಳಿದ ವರ್ಗಗಳ ಆಯೋಗದಿಂದ ಅವರಿಗೆ ಲಾಭವಾಗುವಂತೆ ಪಕ್ಷ ಮತ್ತು ಸರಕಾರಗಳು ನೋಡಿಕೊಳ್ಳಬೇಕು ಎಂದು ಪ್ರಧಾನಿ ನುಡಿದರು.

ಮಸೂದೆಯಲ್ಲಿ ಯಾವುದೇ ಸಮುದಾಯವನ್ನು ಹಿಂದುಳಿದ ವರ್ಗಗಳಲ್ಲಿ ಸೇರಿಸುವ ಮುಕ್ತಸ್ವಾತಂತ್ರವನ್ನು ಸಂಸತ್ತಿಗೂ ನೀಡಲಾಗಿದೆ. ಹಾಲಿ ಪದ್ಧತಿಯಂತೆ ಈ ಬಗ್ಗೆ ಆಯೋಗವೇ ಅಂತಿಮ ನಿರ್ಧಾರವನ್ನು ಕೈಗೊಳ್ಳುತ್ತದೆ.

ಆದರೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿರುವ ಮಸೂದೆಯು ಪ್ರತಿಪಕ್ಷಗಳ ಬಹುಮತವಿರುವ ರಾಜ್ಯಸಭೆಯಲ್ಲಿ ತಡೆಯಲ್ಪಟ್ಟಿದೆ. ಈ ಕುರಿತು ಹೆಚ್ಚಿನ ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷವು ಮಸೂದೆಯನ್ನು ಆಯ್ಕೆ ಸಮಿತಿಗೆ ಮರಳಿಸಿದೆ.

ಮಸೂದೆಯನ್ನು ತಡೆಹಿಡಿದಿರುವುದಕ್ಕಾಗಿ ಇಂದಿನ ಕಾರ್ಯಕಾರಿಣಿ ಸಭೆಯಲ್ಲಿ ಪ್ರತಿಪಕ್ಷದ ವಿರುದ್ಧ ತೀವ್ರ ಟೀಕೆಗಳೂ ವ್ಯಕ್ತವಾದವು.

ಹಲವರ ಹುಬ್ಬುಗಳನ್ನೇರಿಸಬಹುದಾದ ಬೆಳವಣಿಗೆಯೊಂದರಲ್ಲಿ ಮೋದಿ ಅವರು, ದೇಶದಲ್ಲಿಯ ಪ್ರತಿಯೊಂದು ಜಿಲ್ಲೆಗೂ ತೆರಳಿ ತ್ರಿವಳಿ ತಲಾಖ್‌ನ ಬಲಿಪಶುಗಳನ್ನು ಭೇಟಿಯಾಗುವಂತೆ ಬಿಜೆಪಿ ಮಹಿಳಾ ಘಟಕದ ಸದಸ್ಯೆಯರಿಗೆ ಸೂಚಿಸಿದರು. ಈ ಮಹಿಳೆಯರನ್ನು ಭೇಟಿಯಾಗುವ ಅಗತ್ಯವಿದೆ, ಆದರೆ ಅವರನ್ನು ಪ್ರಚೋದಿಸಬೇಡಿ ಅಥವಾ ಅವರ ಧರ್ಮದ ವಿರುದ್ಧ ಹೋಗಬೇಡಿ ಎಂದು ಕಿವಿಮಾತು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News