ಉದ್ಯೋಗ ಮತ್ತು ಶಿಕ್ಷಣದಲ್ಲಿ ಮುಸ್ಲಿಮರಿಗೆ ಮೀಸಲಾತಿಯನ್ನುಶೇ.4ರಿಂದ ಶೇ.12ಕ್ಕೆ ಹೆಚ್ಚಿಸಿದ ತೆಲಂಗಾಣ

Update: 2017-04-16 15:28 GMT

ಹೈದರಾಬಾದ್,ಎ.16: ತೆಲಂಗಾಣದ ಕೆ.ಚಂದ್ರಶೇಖರ ರಾವ್ ಸರಕಾರವು ಉದ್ಯೋಗ ಮತ್ತು ಶಿಕ್ಷಣದಲ್ಲಿ ಮುಸ್ಲಿಮರಿಗೆ ಮೀಸಲಾತಿಯನ್ನು ಶೇ.4ರಿಂದ 12ಕ್ಕೆ ಹೆಚ್ಚಿಸುವ ಮೂಲಕ ತನ್ನ ಚುನಾವಣಾ ಭರವಸೆಯನ್ನು ಈಡೇರಿಸಿದೆ. ಈ ಕ್ರಮವನ್ನು ವಿರೋಧಿಸಿರುವ ಬಿಜೆಪಿ ಇದು ‘ಕೋಮು ರಾಜಕೀಯ ’ ಎಂದು ಬಣ್ಣಿಸಿದೆ. ರಾಜ್ಯ ವಿಧಾನಸಭೆಯಲ್ಲಿ ಕೇವಲ ಐವರು ಬಿಜೆಪಿ ಶಾಸಕರಿದ್ದು, ಕಲಾಪಕ್ಕೆ ತಡೆಯೊಡ್ಡಲು ಪ್ರಯತ್ನಿಸಿದ ಬಳಿಕ ಅವರನ್ನು ಸದನದಿಂದ ಅಮಾನತುಗೊಳಿಸಲಾಯಿತು.

ರವಿವಾರ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಈ ಸಂಬಂಧ ಮಸೂದೆಯನ್ನು ಅಂಗೀಕರಿಸಲಾಗಿದ್ದು, ಪರಿಶಿಷ್ಟ ಪಂಗಡಗಳ ಕೋಟಾವನ್ನೂ ಶೇ.6ರಿಂದ ಶೇ.10ಕ್ಕೆ ಹೆಚ್ಚಿಸಲಾಗಿದೆ. ಇದರೊಂದಿಗೆ ತೆಲಂಗಾಣದಲ್ಲಿ ಒಟ್ಟು ಮೀಸಲಾತಿ ಈಗಿನ ಶೇ.50ರಿಂದ ಶೇ.62ಕ್ಕೆ ಏರಿಕೆಯಾಗಲಿದೆ.

ಮುಸ್ಲಿಮರಿಗೆ ಕೋಟಾ ಏರಿಕೆಯು ಭಾರತದಲಿ ‘ಮಿನಿ ಪಾಕಿಸ್ತಾನ ’ಕ್ಕೆ ಕಾರಣ ವಾಗುತ್ತದೆ, ಆದ್ದರಿಂದ ಇದಕ್ಕೆ ಅವಕಾಶ ನೀಡುವಂತಿಲ್ಲ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ವೆಂಕಯ್ಯ ನಾಯ್ಡು ಅವರನ್ನು ಉಲ್ಲೇಖಿಸಿ ವರದಿಯೊಂದು ತಿಳಿಸಿದೆ.

ಮಸೂದೆಯನ್ನು ‘ಅಸಾಂವಿಧಾನಿಕ ’ಎಂದು ಬಣ್ಣಿಸಿದ ರಾಜ್ಯ ಬಿಜೆಪಿ ನಾಯಕ ಜಿ.ಕಿಶನ್ ರೆಡ್ಡಿ ಅವರು, ಅದು ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ ಎಂದರು. ಧರ್ಮದ ಆಧಾರದಲ್ಲಿ ಮೀಸಲಾತಿಯನ್ನು ಪಕ್ಷವು ಬಲವಾಗಿ ವಿರೋಧಿಸುತ್ತದೆ ಮತ್ತು ಬಿಸಿ(ಇ) ವರ್ಗದಲ್ಲಿ ಮುಸ್ಲಿಮರನ್ನು ಸೇರ್ಪಡೆಗೊಳಿಸುವ ಮೂಲಕ ಹಿಂದುಳಿದ ವರ್ಗಗಳಿಗೆ ಅನ್ಯಾಯವನ್ನು ಮಾಡಲಾಗಿದೆ ಎಂದು ಹೇಳಿದರು.

ಸಾಮಾಜಕ-ಆರ್ಥಿಕ ಹಿಂದುಳಿದಿರುವಿಕೆಯನ್ನು ಆಧರಿಸಿ ಮೀಸಲಾತಿಗಳನ್ನು ಒದಗಿಸ ಲಾಗುತ್ತಿದೆಯೇ ಹೊರತು ಜನರನ್ನು ದಾರಿ ತಪ್ಪಿಸುವ ಪ್ರಯತ್ನವಾಗಿ ಕೆಲವು ಪಕ್ಷಗಳು ಹೇಳಿರುವಂತೆ ಧರ್ಮ ಅಥವಾ ಜಾತಿಯ ಆಧಾರದಲ್ಲಿ ಅಲ್ಲ ಎಂದು ಮಸೂದೆಯನ್ನು ಮಂಡಿಸಿದ್ದ ಮುಖ್ಯಮಂತ್ರಿ ಚಂದ್ರಶೇಖರ ರಾವ್ ತಿಳಿಸಿದರು. ಪರಿಶಿಷ್ಟ ಪಂಗಡಗಳನ್ನು ಉದಾಹರಿಸಿದ ಅವರು, 2011ರ ಜನಗಣತಿಯಂತೆ ಅವರ ಜನಸಂಖ್ಯೆ ಶೇ.9.8ರಷ್ಟಿ ದ್ದರೂ ಹಾಲಿ ಅವರಿಗೆ ಶೇ.6 ಮೀಸಲಾತಿಯಿದೆ ಎಂದರು. ಆಂಧ್ರಪ್ರದೇಶದ ವಿಭಜನೆಯ ಬಳಿಕ ತೆಲಂಗಾಣದಲ್ಲಿ ಮುಸ್ಲಿಮರ ಶೇಕಡಾವಾರು ಪ್ರಮಾಣ ಹೆಚ್ಚಾಗಿದೆ ಎಂದು ಅವರ ಪಕ್ಷ ಟಿಆರ್‌ಎಸ್ ಹಿಂದೆ ಹೇಳಿತ್ತು.

ಶೇ.50ಕ್ಕೂ ಹೆಚ್ಚಿನ ಮೀಸಲಾತಿಯನ್ನು ಒದಗಿಸಲು ಸಾಂವಿಧಾನಿಕವಾಗಿ ಯಾವುದೇ ನಿರ್ಬಂಧವಿಲ್ಲ ಮತ್ತು ತಮಿಳುನಾಡು ಹಾಗೂ ಜಾರ್ಖಂಡ್ ಈಗಾಗಲೇ ಶೇ.50ಕ್ಕೂ ಹೆಚ್ಚು ಮೀಸಲಾತಿಯನ್ನು ಒದಗಿಸಿವೆ. ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಹಾಗೂ ಅಲ್ಪಸಂಖ್ಯಾತರು ತೆಲಂಗಾಣದ ಜನಸಂಖ್ಯೆಯ ಶೇ.90ರಷ್ಟಿರುವುದರಿಂದ ರಾಜ್ಯಕ್ಕೆ ಖಂಡಿತವಾಗಿಯೂ ಶೇ.50ಕ್ಕಿಂತ ಹೆಚ್ಚಿನ ಮೀಸಲಾತಿಯ ಅಗತ್ಯವಿದೆ ಎಂದು ರಾವ್ ಪ್ರತಿಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News