×
Ad

ನೀವು ತಂಗುವ ಹೋಟೆಲ್‌ಗೆ ಗಂಟೆ ಲೆಕ್ಕದಲ್ಲಿ ಪಾವತಿಸಿ

Update: 2017-04-17 09:36 IST

ಚೆನ್ನೈ, ಎ.17: ನೀವು ಹೋಟೆಲ್‌ಗಳಲ್ಲಿ ಅಲ್ಪ ಅವಧಿಗೆ ತಂಗಿದರೂ ಇಡೀ ದಿನದ ಬಾಡಿಗೆ ಪಾವತಿಸಬೇಕಾಗುತ್ತದೆ. ಆದರೆ ಕೆಲ ಹೋಟೆಲ್ ಸಮೂಹಗಳು ಇದನ್ನು ಬದಲಿಸಿ, ಅಲ್ಪಾವಧಿಗೆ ಇಡೀ ದಿನದ ಬಾಡಿಗೆಯ ಒಂದು ಪಾಲನ್ನು ಮಾತ್ರ ಪಾವತಿಸುವಂಥ ಆಫರ್‌ಗಳನ್ನು ನೀಡುತ್ತಿವೆ.

ಸಾಮಾನ್ಯವಾಗಿ ತೀರ್ಥಯಾತ್ರೆ ಅಥವಾ ಪ್ರವಾಸ ಕೈಗೊಳ್ಳುವ ವ್ಯಕ್ತಿಗಳು ಕೆಲ ಗಂಟೆಗಳ ಕಾಲ ಹೋಟೆಲ್ ಕೊಠಡಿಗಳಲ್ಲಿ ತಂಗಿ ತಮ್ಮ ಪ್ರಯಾಣ ಮುಂದುವರಿಸುತ್ತಾರೆ. ಉದಾಹರಣೆಗೆ ಫೋರ್ಟೆಲ್ಸ್.ಕಾಂ ಮೂಲಕ ಹೋಟೆಲ್ ಕಾಯ್ದಿರಿಸಿದರೆ, ಮುಂಬೈನ ಅಂಧೇರಿ ಇಂಪೀರಿಯಲ್ ಪ್ಯಾಲೇಸ್‌ನಲ್ಲಿ ಎರಡು ಗಂಟೆಯ ಪ್ಯಾಕೇಜ್ ಲಭ್ಯವಿದೆ. ಇಲ್ಲಿ ಇಡೀ ದಿನಕ್ಕೆ 2,637 ರೂಪಾಯಿ ಬಾಡಿಗೆ ಇದ್ದರೆ, ಎರಡು ಗಂಟೆಗೆ ಕೇವಲ 630 ರೂಪಾಯಿ ಪಾವತಿಸಿದರೆ ಸಾಕಾಗುತ್ತದೆ.

ವಿಮಾನ ನಿಲ್ದಾಣ, ರೈಲು ನಿಲ್ದಾಣ ಹಾಗೂ ಪ್ರವಾಸಿ ತಾಣಗಳ ಮಿತವ್ಯಯದ ಹೋಟೆಲ್‌ಗಳು ಹಾಗೂ ಬ್ರಾಂಡ್ ಹೋಟೆಲ್‌ಗಳು ಕೂಡಾ ಅಲ್ಪಾವಧಿ ತಂಗುವ ಪದ್ಧತಿಯತ್ತ ಹೊರಳುತ್ತಿವೆ. ಲೆಮನ್ ಟ್ರೀ ಸರಣಿ ಹೋಟೆಲ್ ಈ ವರ್ಷಾರಂಭದಲ್ಲಿ ಈ ಸೇವೆ ಆರಂಭಿಸಿದೆ. ನಮ್ಮ ಬಹುತೇಕ ಬ್ಯುಸಿನೆಸ್ ಹೋಟೆಲ್‌ಗಳಲ್ಲಿ ಶೇಕಡ 60ರಿಂದ 70ರಷ್ಟು ಕೊಠಡಿಗಳು ಮುಂಜಾನೆ ಬೇಗ ಖಾಲಿಯಾಗುತ್ತವೆ. ಅಂತೆಯೇ ಬರುವವರು ಸಂಜೆ ಬರುತ್ತಾರೆ. ಆದ್ದರಿಂದ ಈ ತಂತ್ರ ಅನುಸರಿಸಲಾಗುತ್ತದೆ ಎಂದು ಪ್ರಧಾನ ವ್ಯವಸ್ಥಾಪಕ ದೇವೇಂದ್ರ ಕುಮಾರ್ ವಿವರಿಸಿದರು.

ಅಲ್ಪಾವಧಿ ತಂಗುವ ಸಲುವಾಗಿ ಫ್ರೆಷ್‌ಅಪ್ ಎಂಬ ಆತಿಥ್ಯಕ್ಷೇತ್ರದ ಸ್ಟಾರ್ಟ್‌ಅಪ್ ಕಂಪೆನಿ, ತಿರುಪತಿಯಲ್ಲಿ ಈ ಸೇವೆ ಆರಂಭಿಸುತ್ತಿದೆ. ಕೇವಲ 299 ರೂಪಾಯಿಯಲ್ಲಿ 2-3 ಗಂಟೆ ತಂಗಲು ಅವಕಾಶ ನೀಡುತ್ತೇವೆ ಎಂದು ಫ್ರೆಷ್ ಅಪ್ ಸಂಸ್ಥಾಪಕ ವಿನಿಲ್ ರೆಡ್ಡಿ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News