ಜೆನೆರಿಕ್ ಔಷಧಿಗಳನ್ನು ಸೂಚಿಸುವುದು ವೈದ್ಯರಿಗೆ ಕಡ್ಡಾಯ: ಪ್ರಧಾನಿ ಸುಳಿವು
ಸೂರತ್,ಎ.17: ವೈದ್ಯರು ರೋಗಿಗಳಿಗೆ ಬ್ರಾಂಡೆಡ್ ಔಷಧಿಗಳಿಗಿಂತ ಅಗ್ಗ ವಾಗಿರುವ ಸಮಾನ ಜೆನೆರಿಕ್ ಔಷಧಿಗಳನ್ನು ಸೂಚಿಸುವುದನ್ನು ಕಡ್ಡಾಯಗೊಳಿಸಲು ತನ್ನ ಸರಕಾರವು ಶಾಸನಾತ್ಮಕ ನಿಯಮಾವಳಿಗಳನ್ನು ತರಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಇಲ್ಲಿ ಸುಳಿವು ನೀಡಿದರು. 15 ವರ್ಷಗಳ ನಂತರ ತನ್ನ ಸರಕಾರವು ಇತ್ತೀಚಿಗೆ ಆರೋಗ್ಯ ನೀತಿಯೊಂದನ್ನು ತಂದಿದೆ ಮತ್ತು ಔಷಧಿಗಳು ಹಾಗೂ ಸ್ಟೆಂಟ್‌ಗಳ ಬೆಲೆಗಳ ಮೇಲೆ ಮಿತಿಯನ್ನು ವಿಧಿಸಿದೆ. ಇದು ಕೆಲವು ಔಷಧಿ ತಯಾರಿಕೆ ಕಂಪನಿಗಳ ಸಿಟ್ಟಿಗೆ ಕಾರಣವಾಗಿದೆ ಎಂದು ಅವರು ಹೇಳಿದರು.
ಧರ್ಮಾರ್ಥ ಆಸ್ಪತ್ರೆಯೊಂದರ ಉದ್ಘಾಟನಾ ಸಂದರ್ಭದಲ್ಲಿ ಮಾತನಾಡುತ್ತಿದ್ದ ಅವರು, ಅಗತ್ಯವುಳ್ಳ ಜನರ ಆರೋಗ್ಯ ರಕ್ಷಣೆಗಾಗಿ ಶ್ರೀಮಂತರು ಮುಂದೆ ಬಂದು ದೇಣಿಗೆಗಳನ್ನು ನೀಡಬೇಕು ಎಂದು ಒತ್ತಿ ಹೇಳಿದರು.
ವೈದ್ಯರು ಬರೆದು ಕೊಡುವ ಮದ್ದಿನ ಚೀಟಿಗಳನ್ನು ಓದಲು ಬಡವರಿಗೆ ಸಾಧ್ಯವಾಗುವುದಿಲ್ಲ ಮತ್ತು ಅವರು ಅಧಿಕ ಬೆಲೆಗಳನ್ನು ತೆತ್ತು ಖಾಸಗಿ ಆಸ್ಪತ್ರೆಗಳಿಂದ ಖರೀದಿಸಬೇಕಾಗುತ್ತದೆ ಎಂದ ಅವರು, ವೈದ್ಯರು ಇಂತಹ ಚೀಟಿಗಳಲ್ಲಿ ರೋಗಿಗಳು ಜೆನೆರಿಕ್ ಔಷಧಿಗಳನ್ನು ಖರೀದಿಸಿದರೆ ಸಾಕು ಮತ್ತು ಅವರು ಬೇರೆ ಯಾವುದೇ ಔಷಧಿಯನ್ನು ಖರೀದಿಸುವ ಅಗತ್ಯವಿಲ್ಲ ಎಂದು ನಮೂದಿಸುವಂತೆ ಶಾಸನಾತ್ಮಕ ನಿಯಮಾವಳಿಗಳನ್ನು ತರುತ್ತೇವೆ ಎಂದರು.
ಪ್ರತಿಯೊಬ್ಬರಿಗೂ ಕನಿಷ್ಠ ಬೆಲೆಯಲ್ಲಿ ಆರೋಗ್ಯ ಸೇವೆಯನ್ನು ಸಾಧ್ಯವಾಗಿಸುವುದು ಸರಕಾರದ ಜವಾಬ್ದಾರಿಯಾಗಿದೆ ಎಂದು ಮೋದಿ ನುಡಿದರು.