×
Ad

ತನ್ನನ್ನು ಪಾಕ್ ಬೆಂಬಲಿಗ ಎಂದ ಅಭಿಜಿತ್ ಗೆ ತಕ್ಕ ತಿರುಗೇಟು ನೀಡಿದ ಖ್ಯಾತ ಸೇನಾಧಿಕಾರಿ !

Update: 2017-04-17 20:13 IST

ಹೊಸದಿಲ್ಲಿ,ಎ.17:ಕಾಶ್ಮೀರಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಎರಡು ವೀಡಿಯೊಗಳು ಭಾರೀ ಸುದ್ದಿಯಾಗಿವೆ. ಭಾರತೀಯ ಸೇನೆಯ ಜೀಪಿಗೆ ಕಾಶ್ಮೀರಿ ಯುವಕನನ್ನು ಕಟ್ಟಿ ಆತನನ್ನು ಕಲ್ಲುತೂರಾಟಗಾರರ ವಿರುದ್ಧ ಮಾನವ ಗುರಾಣಿಯಾಗಿ ಬಳಸಿಕೊಂಡು ಹಲವಾರು ಗಾಮಗಳಲ್ಲಿ ಪರೇಡ್ ಮಾಡಿಸಿದ ದೃಶ್ಯವುಳ್ಳ ವಿಡಿಯೋ ಆಕ್ರೋಶವನ್ನು ಸೃಷ್ಟಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಇದನ್ನೂ ಟೀಕಿಸಿದ್ದಾರಾದರೂ ಕೆಲವರು ಇದನ್ನು ಸಮರ್ಥಿಸಿಕೊಂಡಿದ್ದಾರೆ. ಕಾಶ್ಮೀರದಲ್ಲಿ ಸೇನೆಯು ಹಿಂಸೆಯನ್ನು ಎದುರಿಸುತ್ತಿದೆ, ಆದರೂ ಅದು ಸಹನೆ ಕಾಯ್ದುಕೊಂಡಿದೆ ಎನ್ನುವುದು ಅವರ ವಾದ. ಕಾಶ್ಮೀರಿ ಯುವಕರು ಸಿಪಿಆರ್‌ಎಫ್ ಯೋಧರನ್ನು ಥಳಿಸುತ್ತಿರುವ ಮತ್ತು ಕೈಯಲ್ಲಿ ಬಂದೂಕಿದ್ದರೂ ಪ್ರತಿದಾಳಿಗೆ ಯೋಧರು ಮುಂದಾಗದ ಇನ್ನೊಂದು ವೀಡಿಯೊ ಈ ವಾದಕ್ಕೆ ಸಾಕಷ್ಟು ಪುಷ್ಟಿ ನೀಡುತ್ತದೆ.

ಸೇನೆಯ ಜೀಪಿಗೆ ಯುವಕನನ್ನು ಕಟ್ಟಿ ಸಾಗಿಸಿದ್ದನ್ನು ತರಾಟೆಗೆತ್ತಿಕೊಂಡಿರುವವರಲ್ಲಿ ಲೆಜ ಹರಚರಣಜಿತ್ ಸಿಂಗ್ ಪನಾಗ್ ಅವರೂ ಒಬ್ಬರು. ‘ಮಾನವ ಗುರಾಣಿ ’ಯಾಗಿ ‘ಕಲ್ಲು ತೂರಾಟಗಾರ ’ನನ್ನು ಜೀಪಿನ ಎದುರು ಕಟ್ಟಿ ಪರೇಡ್ ಮಾಡಿಸಿರುವ ಈ ಚಿತ್ರವೂ ಸದಾಕಾಲವೂ ಭಾರತೀಯ ಸೇನೆಯನ್ನು ಮತ್ತು ದೇಶವನ್ನು ಕಾಡಲಿದೆ ಎಂದು ಭಾರತೀಯ ಸೇನೆಯ ನಾರ್ದರ್ನ್ ಮತ್ತು ಸೆಂಟ್ರಲ್ ಕಮಾಂಡ್‌ನ ಮಾಜಿ ಕಮಾಂಡಿಂಗ್ ಆಫೀಸರ್ ಆಗಿರುವ ಅವರು ಟ್ವೀಟಿಸಿದ್ದರು.

 ಇದನ್ನು ಹಲವರು ಒಪ್ಪಿಕೊಂಡಿರಲಿಲ್ಲ. ತನ್ನ ನಿಂದಾತ್ಮಕ ಟ್ವೀಟ್‌ಗಳಿಗಾಗಿ ಈ ಹಿಂದೆ ಬಂಧನಭಾಗ್ಯವನ್ನು ಅನುಭವಿಸಿದ್ದ ಬಾಲಿವುಡ್ ಗಾಯಕ ಅಭಿಜಿತ್ ಅವರಂತೂ ಒಂದು ಹೆಜ್ಜೆ ಮಂದೆಯೇ ಹೋಗಿ ಲೆಜಪನಾಗ್‌ರನ್ನು ಪಾಕಿಸ್ತಾನಿ ಬೆಂಬಲಿಗ ಎಂದು ಆರೋಪಿಸಿದ್ದರು.‘‘ನೀವು ಪಾಕಿಸ್ತಾನಿ ಬೆಂಬಲಿಗ. ನಿಮ್ಮನ್ನು ಕಾಶ್ಮೀರದ ಬೀದಿಗಳಲ್ಲಿ ಒದ್ದಿದ್ದರೆ, ಥಳಿಸಿದ್ದರೆ ಮತ್ತು ಅವಮಾನಿಸಿದ್ದರೆ ಆಗ ನಿಮ್ಮ ಪ್ರತಿಕ್ರಿಯೆ ಗೊತ್ತಾಗುತ್ತಿತ್ತು ’ಎಂದು ಅವರು ಟ್ವೀಟಿಸಿದ್ದರು.

ಇದಕ್ಕೆ ಸರಿಯಾಗಿಯೇ ತಿರುಗೇಟು ನೀಡಿದ್ದ ಪನಾಗ್, ‘ಈ ವಯಸ್ಸಿನಲ್ಲಿಯೂ ಭಯೋತ್ಪಾದಕನಿಗೆ ಮಾತ್ರವಲ್ಲ,‘ದುರಹಂಕಾರಿ ಅಶಿಷ್ಟ ’ನಿಗೂ ತಕ್ಕ ಪಾಠ ಕಲಿಸಬಲ್ಲೆ ’ಎಂದು ಟ್ವೀಟಿಸಿದ್ದಾರೆ. ತನ್ಮೂಲಕ ಸೇನೆಯಲ್ಲಿ ಅತ್ಯುತ್ತಮ ಸೇವೆಗಾಗಿ ಹಲವಾರು ಪದಕಗಳಿಂದ ಪುರಸ್ಕೃತ ಪನಾಗ್ ವಿರುದ್ಧದ ಟೀಕೆಗಾಗಿ ಅಭಿಜಿತ್ ಭಾರೀ ಹಿನ್ನಡೆ ಅನುಭವಿಸುವಂತಾಗಿದೆ.

ಆದರೆ ಪನಾಗ್ ನಿಲುವನ್ನು ಖಂಡಿಸಿದ್ದು ಅಭಿಜಿತ್ ಮಾತ್ರವಲ್ಲ. ಮೋದಿ ಸರಕಾರದಿಂದ ಕೇಂದ್ರೀಯ ಸೆನ್ಸಾರ್ ಮಂಡಳಿಯ ಸದಸ್ಯರಾಗಿ ನೇಮಕಗೊಂಡಿರುವ ಅಶೋಕ ಪಂಡಿತ್ ಕೂಡ ಪನಾಗ್‌ರನ್ನು ಖಂಡಿಸಿದ್ದರು. ಅವರು ‘ಪಾಕಿಸ್ತಾನಿ ಬೆಂಬಲಿಗ ‘ಶಬ್ದವನು ಬಿಟ್ಟು ಅಭಿಜಿತ್‌ರ ಟ್ವೀಟ್‌ನಲ್ಲಿಯ ಇತರ ಶಬ್ದಗಳನ್ನು ಯಥಾವತ್ ಬಳಸಿದ್ದರು.

 ಇವರಿಬ್ಬರ ಟ್ವೀಟ್‌ಗಳ ನಡುವಿನ ಹೋಲಿಕೆಯೂ ಈಗ ಟ್ವಿಟರ್‌ನಲ್ಲಿ ಚರ್ಚೆಯ ವಿಷಯವಾಗಿದೆ. ಈ ಇಬ್ಬರು ಬಲಪಂಥೀಯ ಪ್ರತಿಪಾದಕರಲ್ಲಿ ಯಾರೋ ಒಬ್ಬರು ಇನ್ನೊಬ್ಬರ ಶಬ್ದಗಳನ್ನು ನಕಲು ಮಾಡಿದ್ದಾರೆ ಎನ್ನುವುದು ಜನರ ಅಭಿಪ್ರಾಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News