ಉದ್ಯಮಿ ಬಿ.ಆರ್.ಶೆಟ್ಟಿಯವರಿಂದ ದೇಶದ ಇತಿಹಾಸದಲ್ಲೇ ‘ಮಹಾ’ ಸಿನಿಮಾ

Update: 2017-04-17 18:55 GMT

►ಮಹಾಭಾರತದ ಕತೆಯನ್ನು ವಸ್ತುವಾಗಿಟ್ಟುಕೊಂಡ ಸಾವಿರ ಕೋಟಿ ಬಜೆಟ್ ಚಿತ್ರ.

►ಎಂ. ಟಿ. ವಾಸುದೇವ ನಾಯರ್‌ರವರ ‘ರಂಡಾಂಮೂಲಂ’ ಕಾದಂಬರಿ ಆಧಾರಿತ ಚಿತ್ರ.

► 100 ಭಾಷೆಗಳಲ್ಲಿ ರಿಮೇಕ್ ಆಗಲಿದೆ ಈ ಚಿತ್ರ

► ಚಿತ್ರ ತಂಡದಲ್ಲಿ ಹಾಲಿವುಡ್ ದಿಗ್ಗಜರು

ದೇಶದ ಇತಿಹಾಸದಲ್ಲೇ ಅತ್ಯಂತ ದುಬಾರಿ ಚಿತ್ರ ಎಂಬ ಖ್ಯಾತಿಯ ‘ಬಾಹುಬಲಿ’ ಎರಡನೆ ಭಾಗ ಬಿಡುಗಡೆಯ ಸಿದ್ಧತೆಯಲ್ಲಿರುವಾಗಲೇ ಕನ್ನಡಿಗರ ಪಾಲಿಗೆ ಹೆಮ್ಮೆ ಪಡುವಂತಹ ಸುದ್ದಿಯೊಂದು ಹೊರಬಿದ್ದಿದೆ. ದೇಶದ ಇತಿಹಾಸ ಕಂಡರಿಯದ ಒಂದು ಮಹಾ ಸಿನಿಮಾವೊಂದು ಸಿದ್ಧಗೊಳ್ಳುತ್ತಿದೆ. ಮತ್ತು ಆ ಸಿನಿಮಾದ ನಿರ್ಮಾಪಕ ಒಬ್ಬ ಕನ್ನಡಿಗ. ಆವರು ಇನ್ನಾರೂ ಅಲ್ಲ, ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ, ಅಬುಧಾಬಿಯ ಪ್ರತಿಷ್ಠಿತ ಎನ್ ಎಂ ಸಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಬಿ. ಆರ್. ಶೆಟ್ಟಿ. ಸಾವಿರ ಕೋಟಿ ರೂಪಾಯಿ ಬಜೆಟ್‌ನ ಈ ಚಿತ್ರ ಮಹಾಭಾರತದ ಕತೆಯನ್ನು ಆಧರಿಸಿದೆ ಎನ್ನುವುದು ಇನ್ನೊಂದು ವಿಶೇಷವಾಗಿದೆ.

ಮಹಾಭಾರತ ಕತೆ ಈ ಹಿಂದೆಯೂ ಚಿತ್ರವಾಗಿ, ಟಿವಿ ಧಾರಾವಾಹಿಯಾಗಿ ಬೆಳಕು ಕಂಡಿವೆ. ಆದರೆ ಈ ಬಾರಿಯ ವಿಶೇಷವೇನೆಂದರೆ, ಈ ಚಿತ್ರ ಹಾಲಿವುಡ್ ಮಟ್ಟದಲ್ಲಿ ತಯಾರಾಗಲಿದೆ. ಹಾಲಿವುಡ್ ಮತ್ತು ಬಾಲಿವುಡ್‌ನ ದಿಗ್ಗಜರು ಜೊತೆ ಸೇರಿ ಈ ಚಿತ್ರವನ್ನು ಹೊರತರುತ್ತಿದ್ದಾರೆ. ‘ಟ್ರಾಯ್’ನಂತ ಹಾಲಿವುಡ್ ಚಿತ್ರಗಳಿಗೆ ಈ ಸಿನಿಮಾ ಸರಿಗಟ್ಟಲಿದೆ ಎನ್ನುವುದು ಸದ್ಯಕ್ಕೆ ಚರ್ಚೆಯಲ್ಲಿರುವ ವಿಷಯ.

  ಎಂ. ಟಿ ವಾಸುದೇವ ನಾಯರ್ ಅವರ ಕಾದಂಬರಿ ‘ರಂಡಾಂ ಮೂಲಂ’ ಕಾದಂಬರಿಯನ್ನು ಆಧರಿಸಿ ಈ ಸಿನಿಮಾವನ್ನು ಮಲಯಾಳಂನ ವಿ. ಎ. ಶ್ರೀಕುಮಾರ್ ಮೆನನ್ ನಿರ್ದೇಶಿಸಲಿದ್ದಾರೆ. ಮಹಾಭಾರತದ ದೈತ್ಯ ಪಾತ್ರ ಭೀಮನನ್ನೇ ಕೇಂದ್ರವಾಗಿಸಿಕೊಂಡು ಚಿತ್ರಕತೆಯನ್ನು ಸಿದ್ಧಪಡಿಸಲಾಗಿದೆ. ಅಂದ ಹಾಗೆ, ಭೀಮನ ಪಾತ್ರದಲ್ಲಿ ಮೋಹನ್‌ಲಾಲ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಇನ್ನೊಂದು ಸುದ್ದಿ. ಸೆಪ್ಟಂಬರ್ 2017ರಲ್ಲಿ ಮೊದಲ ಭಾಗ ಸೆಟ್ಟೇರಲಿದ್ದು 2020ರ ಪ್ರಾರಂಭದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಮೊದಲ ಭಾಗ ಬಿಡುಗಡೆಯ ಮೂರು ತಿಂಗಳೊಳಗೆ ಎರಡನೆ ಭಾಗ ಬಿಡುಗಡೆ ಮಾಡುವ ಯೋಜನೆ ನಿರ್ಮಾಪಕರದ್ದು. ಚಿತ್ರ ಇಂಗ್ಲಿಷ್, ಹಿಂದಿ, ಮಲಯಾಳಂ, ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗಲಿದ್ದು ಬಳಿಕ ಹಲವಾರು ಭಾರತೀಯ ಹಾಗೂ ವಿದೇಶಿ ಭಾಷೆಗಳಲ್ಲಿ ಡಬ್ ಆಗಲಿದೆ ಎಂದು ಶೆಟ್ಟಿ ಅವರ ಸಂಸ್ಥೆ ಪಿಟಿಐಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದೆ. ‘‘ಈ ಚಿತ್ರ ನೂರಕ್ಕೂ ಹೆಚ್ಚು ಭಾಷೆಗಳಲ್ಲಿ ರಿಮೇಕ್ ಆಗಿ ಜಗತ್ತಿನಾದ್ಯಂತ ಮೂರು ಬಿಲಿಯನ್ ಗೂ ಹೆಚ್ಚು ಜನರನ್ನು ತಲುಪಲಿದೆ ಎಂದು ನನಗೆ ನಂಬಿಕೆ ಇದೆ’’ ಎನ್ನುತ್ತಾರೆ ಬಿ. ಆರ್. ಶೆಟ್ಟಿ. ‘‘ಚಿತ್ರಕ್ಕಾಗಿ ತಮ್ಮ ತಂಡ ಕೆಲವು ವರ್ಷಗಳಿಂದ ಕೆಲಸ ಮಾಡುತ್ತಿದೆ. ಚಿತ್ರ ನಿರ್ಮಾಣದ ಪ್ರತಿಯೊಂದು ವಿಭಾಗಗಳಲ್ಲೂ ಉತ್ಕೃಷ್ಟ ಗುಣಮಟ್ಟ ನೀಡುವುದು ನಮ್ಮ ಗುರಿ. ಅದಕ್ಕಾಗಿ ನಮ್ಮ ಚಿತ್ರ ತಂಡ ಸಂಪೂರ್ಣ ಸನ್ನದ್ಧವಾಗಿದೆ ಎಂದು ನಿರ್ದೇಶಕ ಶ್ರೀಕುಮಾರ್ ಮೆನನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News