ಡಬ್ಬಾವಾಲಾರಿಗೆ ರಜೆಯ ಸಂಭ್ರಮ, ‘ಅಚ್ಛೇದಿನ್’ ನಿರೀಕ್ಷೆಯಲ್ಲಿ ಬೆಸ್ಟ್ ಬಸ್!

Update: 2017-04-17 18:57 GMT

ಮುಂಬೈ ನಗರದಲ್ಲಿ ಕಚೇರಿ, ಅಂಗಡಿಗಳಲ್ಲಿ ದುಡಿಯುವವರಿಗೆ ಅವರವರ ಮನೆ ಊಟವನ್ನು ತಲುಪಿಸುವ ವಿಶ್ವವಿಖ್ಯಾತಿಯ ಡಬ್ಬಾವಾಲಾರಿಗೆ ಒಂದು ವಾರ ರಜೆ!

ಪ್ರತೀದಿನ ಮನೆ ಊಟವನ್ನೇ ಮಾಡುವ ಮುಂಬೈಕರ್‌ಗೆ ಈ ಒಂದು ವಾರ ಹೋಟೆಲ್‌ನಲ್ಲಿ ಊಟ ಮಾಡುವ ಸ್ಥಿತಿ. ಹೌದು, ಎಪ್ರಿಲ್ 10 ರಿಂದ ಎಪ್ರಿಲ್ 15 ರ ತನಕ ಮುಂಬೈಯ ಡಬ್ಬಾವಾಲಾರು ತಮ್ಮ ತಮ್ಮ ಊರಿನ ಕುಲದೇವರ ಜಾತ್ರೆಗೆ ತೆರಳಿದರು. ಅವರೆಲ್ಲ ಒಂದು ವಾರದ ರಜೆ ಪಡೆದಿದ್ದರು. ಮುಂಬೈಯ ಡಬ್ಬಾವಾಲಾರ ಸಂಘಟನೆಯ ವಕ್ತಾರ ಸುಭಾಷ್ ತಲೇಕರ್ ಅವರು ಹೇಳಿದಂತೆ ‘‘ಡಬ್ಬಾವಾಲಾರ ಕುಲದೇವತೆಯ ಜಾತ್ರೆಯ ಸಮಯ ಮೇಳಾ ಆಯೋಜಿಸಲಾಗುತ್ತದೆ. ಈ ಸಂದರ್ಭದಲ್ಲಿ ಮುಂಬೈಯ ಡಬ್ಬಾವಾಲಾರು ತಮ್ಮ ತಮ್ಮ ಊರುಗಳಿಗೆ ರಜೆ ಪಡೆದು ತೆರಳುತ್ತಾರೆ.’’

ಮುಂಬೈಯಲ್ಲಿನ ಡಬ್ಬಾವಾಲಾರಲ್ಲಿ ಹೆಚ್ಚಿನವರು ಪುಣೆ, ಅಹ್ಮದ್‌ನಗರ, ಅಕೋಲಾ, ಸಂಗಮ್‌ನೇರ್..... ಮೊದಲಾದ ಊರುಗಳಿಂದ ಬಂದವರು. ಈ ಎಲ್ಲಾ ಡಬ್ಬಾವಾಲಾರ ಊರುಗಳಲ್ಲಿ ಕುಲದೇವತೆಯ ಜಾತ್ರೆ-ಮೇಳಾ ನಡೆಯುತ್ತದೆ. ಡಬ್ಬಾವಾಲಾರೆಲ್ಲ ತಮ್ಮ ಊರುಗಳಿಗೆ ತೆರಳುವುದರಿಂದಾಗಿ ಮನೆ ಊಟ ಮಾಡುವವರಿಗೆ ಒಂದು ವಾರ ಕಾಲ ತೊಂದರೆ ಆಗುತ್ತಿರುವ ಬಗ್ಗೆ ಸಂಘಟನೆಯವರು ಮೊದಲೇ ವಿಷಾದಿಸಿದ್ದರು.

ಮುಂಬೈಯಲ್ಲಿ ಜನರಿಗೆ ಮನೆ ಊಟವನ್ನು ತಲುಪಿಸುವುದಕ್ಕಾಗಿ ದೂರದ ಉಪನಗರಗಳಿಂದ ಲೋಕಲ್ ರೈಲುಗಳಲ್ಲಿ ಈ ಡಬ್ಬಾವಾಲಾರು ಅವರವರ ಮನೆಯ ಬುತ್ತಿಯನ್ನು ಹೊತ್ತು ಪ್ರಯಾಣಿಸುತ್ತಾರೆ. ರೈಲು ಪ್ರಯಾಣವೇ ಕಷ್ಟ. ಹಾಗಿರುವಾಗ ಬುತ್ತಿಯ ಬಾಕ್ಸ್ ಸಾಗಾಟವೆಂದರೆ ಇನ್ನೂ ಕಷ್ಟ. ಅದಕ್ಕಾಗಿ ಬೆಳಗ್ಗಿನ ಜಾವದ ಲಗೇಜ್ ಕಂಪಾರ್ಟ್‌ಮೆಂಟ್ ಡಬ್ಬಾವಾಲಾರಿಗೇ ಮೀಸಲು. ಯಾವ ಲಗೇಜ್ ಬೋಗಿಯಲ್ಲಿ ಊಟದ ಡಬ್ಬಾಗಳ ಬಾಕ್ಸ್ ಇರುವುದೋ ಅದರಲ್ಲಿ ಇತರ ಪ್ರಯಾಣಿಕರನ್ನು ಹತ್ತಲು ಬಿಡಲಾರರು. ಯಾರು ಮನೆ ಊಟದ ಬುತ್ತಿ ಡಬ್ಬಾವಾಲಾರಿಂದ ತರಿಸಿಕೊಳ್ಳುತ್ತಾರೋ ಅವರಿಗೆ ಡಬ್ಬಾವಾಲಾ ಮಾಮಾ ಮನೆಗೆ ಬಂದು ಬುತ್ತಿ ಒಯ್ಯುವ ಸಮಯ ತಿಳಿಸಿರುತ್ತಾನೆ. ಆ ಸಮಯಕ್ಕೆ ಮೊದಲೇ ಊಟದ ಬುತ್ತಿ ಮನೆಯಲ್ಲಿ ರೆಡಿ ಇರಿಸಬೇಕು. ಊಟದ ಡಬ್ಬ ಹಿಡಿದು ಪ್ರಯಾಣ ಮಾಡುವುದು ಬಹಳ ಕಷ್ಟವೆಂದೇ ಅನೇಕರು ಡಬ್ಬಾವಾಲಾರಿಗೆ ಆ ಜವಾಬ್ದಾರಿ ಬಿಟ್ಟುಕೊಡುತ್ತಾರೆ. ಸಂಜೆಗೆ ಅದೇ ಖಾಲಿ ಬುತ್ತಿಯನ್ನು ವಾಪಸ್ ಅವರವರ ಮನೆಯಲ್ಲಿ ಕೊಟ್ಟು ಹೋಗುತ್ತಾರೆ.

ಮುಂಬೈಯಲ್ಲಿ ಸುಮಾರು ಐದು ಸಾವಿರ ಡಬ್ಬಾವಾಲಾರು ಪ್ರತೀದಿನ ಎರಡು ಲಕ್ಷದಷ್ಟು ಟಿಫಿನ್ ಬಾಕ್ಸ್ (ಊಟದ ಡಬ್ಬ) ಡೆಲಿವರಿ ಮಾಡುತ್ತಾರೆ. ಈ ಸೇವೆಯ ಬಹುದೊಡ್ಡ ಮೆಚ್ಚುಗೆ ಎಂದರೆ ಸಮಯಕ್ಕೆ ಸರಿಯಾದ ವಿತರಣೆ. ಡಬ್ಬಾವಾಲಾರು ಎಂದೂ ತಡ ಮಾಡಲಾರರು. ಸಮಯಕ್ಕೆ ಅವರು ಬಹಳ ಮಹತ್ವ ನೀಡುತ್ತಾರೆ. ಬುತ್ತಿಯನ್ನು ಗುರುತಿಸುವಲ್ಲಿ ಎಂದೂ ಅವರು ವಿಫಲರಾಗಿಲ್ಲ. ಯಾಕೆಂದರೆ ಪ್ರತೀ ಊಟದ ಡಬ್ಬಾದಲ್ಲಿ ಕೋಡಿಂಗ್ ಇರುತ್ತದೆ. ಹೀಗಾಗಿ ಯಾರಿಗೆ ಆ ಡಬ್ಬಾ ಸೇರಬೇಕೋ ಅವರಿಗೇ ಸಲ್ಲುತ್ತದೆ.

ಮುಂಬೈಯ ಈ ಡಬ್ಬಾವಾಲಾರು ಪ್ರಾಮಾಣಿಕರು, ಶ್ರಮಜೀವಿಗಳು. ಬೆಳಗ್ಗೆ ಮನೆಮನೆಗೆ ಹೋಗಿ ಟಿಫಿನ್ ಬಾಕ್ಸ್ ಒಟ್ಟುಗೂಡಿಸುತ್ತಾರೆ. ಅವುಗಳನ್ನು ರೈಲ್ವೆ ಸ್ಟೇಷನ್‌ಗೆ ತರುತ್ತಾರೆ. ಆನಂತರ ಮರದ ಬಾಕ್ಸ್‌ಗಳಲ್ಲಿ ಆ ಬುತ್ತಿಗಳನ್ನು ಇರಿಸುತ್ತಾರೆ. (ಒಂದು ಮರದ ಬಾಕ್ಸ್‌ನಲ್ಲಿ 30-40 ಬುತ್ತಿಗಳಿರುತ್ತವೆ.) ನಂತರ ಮುಂದಿನ ರೈಲ್ವೆ ಸ್ಟೇಷನ್‌ಗಳಲ್ಲಿ ಆ ಡಬ್ಬಾಗಳ ಬಾಕ್ಸ್ ಇಳಿಸುತ್ತಾರೆ. ಅಲ್ಲಿಂದ ಸೈಕಲ್‌ಗಳಲ್ಲಿ, ಕಾಲುನಡಿಗೆಯಲ್ಲಿ ಅವರವರ ಕಚೇರಿ, ಅಂಗಡಿಗಳಿಗೆ ತಲುಪಿಸುತ್ತಾರೆ. ಸಂಜೆ ಅದೇ ರಸ್ತೆಯಲ್ಲಿ ಆ ಖಾಲಿ ಊಟದ ಡಬ್ಬಗಳನ್ನು ಅವರವರ ಮನೆಗೆ ತಲುಪಿಸುತ್ತಾರೆ. ಈ ಪ್ರಕ್ರಿಯೆ ರಿಲೇ ತರಹ ಇರುತ್ತದೆ. ಒಂದು ಕಡೆ ತಪ್ಪಾದರೆ ಎಲ್ಲವೂ ಅಸ್ತವ್ಯಸ್ತವಾಗಬಹುದು. ಆದರೆ ಅದು ಎಂದಿಗೂ ಆಗಿಲ್ಲ. ಕಳೆದ 132 ವರ್ಷಗಳಿಂದ ತನ್ನ ಇತಿಹಾಸದಲ್ಲಿ ಡಬ್ಬಾವಾಲಾರು ತಮ್ಮ ಗ್ರಾಹಕರ ದೂರುಗಳನ್ನು ಕೇಳಿಸಿಕೊಳ್ಳಲೇ ಇಲ್ಲ.

ಇಲ್ಲಿ ಇನ್ನೊಂದು ವಿಶೇಷವೂ ಹಲವೆಡೆ ಕಂಡು ಬರುತ್ತದೆ. ಕಚೇರಿಗೆ ತೆರಳುವವರು ಲೋಕಲ್ ರೈಲಿನ ಭೀಕರ ನೂಕುನುಗ್ಗಲಿಗೆ ಹೆದರಿ ತಮ್ಮ ಜೊತೆ ಅಮೂಲ್ಯ ವಸ್ತುಗಳನ್ನು (ಉದಾ: ಮೊಬೈಲ್, ಪರ್ಸ್.... ಇತ್ಯಾದಿ) ಒಯ್ಯಲು ಹಿಂದೇಟು ಹಾಕುತ್ತಾರೆ. ಅಂತಹವರಲ್ಲಿ ಕೆಲವರು ತಮ್ಮ ಊಟದ ಬುತ್ತಿಯ ಜೊತೆ ಅವುಗಳನ್ನು ಇರಿಸುವುದಿದೆ. ಆ ವಸ್ತುಗಳು ಯಾವುದೇ ತೊಂದರೆ ಇಲ್ಲದೆ ಕಚೇರಿ ತಲುಪುತ್ತದೆ. ಕೆಲವು ಜನರು ತಮ್ಮ ಖಾಲಿ ಊಟದ ಬುತ್ತಿಯೊಳಗೆ ಸಂಬಳವನ್ನೂ ಇರಿಸುವುದಿದೆ. ಅದೂ ಕಳ್ಳತನವಾಗದೆ ಅವರ ಮನೆಗೆ ಸಂಜೆ ಸೇರುತ್ತದೆ. ಹೀಗಾಗಿಯೇ ಡಬ್ಬಾವಾಲಾರ ಪ್ರಾಮಾಣಿಕತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ.
* * *

ಪಶ್ಚಿಮ ರೈಲ್ವೆಗೆ 150 ವರ್ಷ
ಪಶ್ಚಿಮ ರೈಲ್ವೆಯ ಮೊದಲ ಲೋಕಲ್ ರೈಲು ಪ್ರಯಾಣಿಕರನ್ನು ಒಯ್ದ ದೃಶ್ಯಕ್ಕೆ 150 ವರ್ಷ ಪೂರ್ಣಗೊಂಡಿತು. ತನ್ನ ಗೌರವಶಾಲಿ ಇತಿಹಾಸ ಮತ್ತು ಭವ್ಯ ವರ್ತಮಾನದ ಜೊತೆ ಉತ್ತಮ ಭವಿಷ್ಯದ ದಾಪುಗಾಲು ಹಾಕುತ್ತಿರುವ ಪಶ್ಚಿಮ ರೈಲ್ವೆಯು ಎಪ್ರಿಲ್ 12, 2017ರಂದು 150ನೆ ವರ್ಷವನ್ನು ಸಂಭ್ರಮದಿಂದ ಆಚರಿಸಿತು. ಪಶ್ಚಿಮ ರೈಲ್ವೆಯ ಮೊದಲ ರೈಲು ಉಗಿಬಂಡಿಯಾಗಿತ್ತು. 1867 ಎಪ್ರಿಲ್ 12ರಂದು ಒಂದು ಉಪನಗರ ರೈಲು ಹೊರಟಿತ್ತು. ವಿರಾರ್ - ಬ್ಯಾಕ್‌ಬೇ ನಡುವೆ ಇದು ಓಡಾಡಿತು. (ಆಗ ಚರ್ಚ್‌ಗೇಟ್ ಹೆಸರಿರಲಿಲ್ಲ).

* * *

ರಸ್ತೆ ನಾಮಕರಣದ ವಿಷಯದಲ್ಲೇ ಹೆಚ್ಚು ಆಸಕ್ತಿ ವಹಿಸುತ್ತಿರುವ ನಗರ ಸೇವಕರು
ಮುಂಬೈ ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಮುಂಬೈ ಮಹಾನಗರ ಪಾಲಿಕೆಗೆ ಕಳುಹಿಸಲ್ಪಟ್ಟ ಹೆಚ್ಚಿನ ನಗರ ಸೇವಕರು ಜನರ ಸಮಸ್ಯೆಗಳನ್ನು ಎತ್ತುವ ಬದಲು ಮನಪಾ ಸದನದಲ್ಲಿ ರಸ್ತೆ ನಾಮಕರಣಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನೇ ಹೆಚ್ಚು ಕೇಳಿದ್ದಾಗಿ ಪ್ರಜಾ ಸಮೀಕ್ಷೆಗಳಲ್ಲಿ ಬೆಳಕಿಗೆ ಬಂದಿದೆ. ಪ್ರತೀ ಆರು ಪ್ರಶ್ನೆಗಳಲ್ಲಿ ಒಂದು ಪ್ರಶ್ನೆಯಂತೂ ರಸ್ತೆ ಅಥವಾ ಸರ್ಕಲ್‌ನ ನಾಮಕರಣಕ್ಕೆ ಸಂಬಂಧಿಸಿಯೇ ಇರುತ್ತದೆ! ಕಳೆದ 5 ವರ್ಷಗಳಲ್ಲಿ ಒಟ್ಟು 5,742 ವಿಷಯಗಳಲ್ಲಿ 933 ವಿಷಯಗಳು ನಾಮಕರಣಕ್ಕೆ ಸಂಬಂಧಿಸಿಯೇ ಇವೆ. ಮುಂಬೈಯಲ್ಲಿ ಯಾವುದೇ ರಸ್ತೆ ಅಥವಾ ಸರ್ಕಲ್‌ನ ನಾಮಕರಣದ ಪ್ರಸ್ತಾವ ಸಂಬಂಧಿತ ವಿಭಾಗದ ನಗರ ಸೇವಕರು ಇರಿಸಬಹುದಾಗಿದೆ.

(ಶಿಕ್ಷಣ, ಆರೋಗ್ಯ....ಇಂತಹ ಮೂಲಭೂತ ಪ್ರಶ್ನೆಗಳನ್ನು ಎತ್ತಲು ನಗರ ಸೇವಕರಿಗೆ ಮನಪಾ ಸದನದಲ್ಲಿ ಆಸಕ್ತಿ ಇಲ್ಲ. ಪ್ರತೀ 52 ಪ್ರಶ್ನೆಗಳಲ್ಲಿ ಕೇವಲ 1 ಪ್ರಶ್ನೆ ಮಾತ್ರ ಆರೋಗ್ಯಕ್ಕೆ ಸಂಬಂಧಿಸಿದ್ದರೆ, ಪ್ರತೀ 46 ಪ್ರಶ್ನೆಗಳಲ್ಲಿ 1 ಪ್ರಶ್ನೆ ಮಾತ್ರ ಶಿಕ್ಷಣಕ್ಕೆ ಸಂಬಂಧಿಸಿ ಇತ್ತು. ಹೀಗಿರುವಾಗ ಜನರ ಸಮಸ್ಯೆಗಳಿಗೆ ಪರಿಹಾರ ಹುಡುಕುವಲ್ಲಿ ನಗರ ಸೇವಕರಿಗೆ ಆಸಕ್ತಿ ಇದ್ದಂತಿಲ್ಲ. ಜನತೆಯ ದೂರುಗಳನ್ನು ತಕ್ಷಣ ಸ್ವೀಕರಿಸಿ ಅವುಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಮನಪಾ ಆಡಳಿತ ಭರವಸೆ ನೀಡಿದ್ದರೂ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಸೋತಿದೆ. ಜನರಿಗೆ ಸೌಲಭ್ಯಗಳು ಕಾಲಕಾಲಕ್ಕೆ ಸಿಗಬೇಕಾಗಿದ್ದರೂ ಸಿಗುತ್ತಿಲ್ಲ. ಕೇವಲ 3 ದಿನಗಳಲ್ಲಿ ದೂರು ಬಗೆಹರಿಯುವುದಿದ್ದರೂ ಅದನ್ನು 15ರಿಂದ 20 ದಿನಗಳ ಕಾಲ ಎಳೆಯಲಾಗುತ್ತದೆ.

ಪ್ರಜಾ ಫೌಂಡೇಶನ್‌ನ ಅಂಕಿಅಂಶಗಳಂತೆ ಮ್ಯಾನ್‌ಹೋಲ್‌ನ (ಗಟಾರ) ಮುಚ್ಚಳವನ್ನು ಒಂದು ದಿನದಲ್ಲಿ ಬದಲಿಸಬಹುದಾಗಿದ್ದರೂ ಅದಕ್ಕೆ 21 ದಿನಗಳ ಕಾಲಾವಕಾಶ ತಗಲುತ್ತದೆ. ಐದು ವರ್ಷಗಳಲ್ಲಿ ನಾಮಕರಣಕ್ಕೆ ಸಂಬಂಧಿಸಿದ 933 ವಿಷಯಗಳನ್ನು ಎತ್ತಿಕೊಂಡಿದ್ದರೆ, ಶಿಕ್ಷಣದ ವಿಷಯವಾಗಿ ಕೇವಲ 125, ಆರೋಗ್ಯದ ವಿಷಯವಾಗಿ 111 ವಿಷಯಗಳನ್ನು ಎತ್ತಿಕೊಳ್ಳಲಾಗಿದೆ.

* * *

ಮನಪಾ ಸಾರಿಗೆಯ ಬೆಸ್ಟ್ ಬಸ್ಸುಗಳ ಅಚ್ಛೇದಿನ್ ನಿರೀಕ್ಷೆಯಲ್ಲಿ
 
ಮುಂಬೈಯ ದ್ವಿತೀಯ ‘ಲೈಫ್‌ಲೈನ್’ ಎನ್ನಲಾಗುವ ಬೆಸ್ಟ್ ಬಸ್ಸುಗಳು ಕಳೆದ ಅನೇಕ ವರ್ಷಗಳಿಂದ ನಷ್ಟದಲ್ಲೇ ನಡೆಯುತ್ತಿದೆ. ಇದೀಗ ನಷ್ಟದಿಂದ ಚೇತರಿಸಲು ಆ್ಯಕ್ಷನ್ ಪ್ಲ್ಯಾನ್ ತಯಾರಿಸಿದೆ. ಅದರಂತೆ ಬೆಸ್ಟ್‌ನ 150 ಮಾರ್ಗಗಳನ್ನು ಬಂದ್ ಮಾಡಲು ನಿರ್ಣಯಿಸಿದೆ. ಅಧಿಕಾರಿಗಳ ಅನುಸಾರ ನವಿಮುಂಬೈ ಮನಪಾ, ಥಾಣೆ ಮನಪಾ, ಮೀರಾ - ಭಾಯಂದರ್ ಮನಪಾ ಕ್ಷೇತ್ರಗಳಲ್ಲಿ ಓಡಾಡುತ್ತಿರುವ 150 ಬಸ್ ಮಾರ್ಗಗಳನ್ನು ರದ್ದು ಗೊಳಿಸಲಿದೆ. ಬಸ್ಸು ನಷ್ಟದಲ್ಲಿ ಓಡಾಡಲು ಪ್ರಮುಖ ಕಾರಣ ಬೆಸ್ಟ್‌ನ ಹವಾನಿಯಂತ್ರಿತ ಬಸ್ಸುಗಳು.

ಈ ಬಸ್ಸುಗಳಿಂದ ಬೆಸ್ಟ್ ಗೆ ಪ್ರತೀವರ್ಷ ನೂರು ಕೋಟಿ ರೂಪಾಯಿಯ ನಷ್ಟವಾಗುತ್ತಿದೆಯಂತೆ. ಈ ಬಸ್ಸುಗಳಿಂದಲೇ ಬೆಸ್ಟ್‌ಗೆ ಐದು ವರ್ಷಗಳಲ್ಲಿ 600 ಕೋಟಿ ರೂ. ನಷ್ಟವಾಗಿದೆಯಂತೆ. ಹೀಗಾಗಿ ಇಂತಹ ಬಸ್‌ಗಳನ್ನು ನಿಲ್ಲಿಸಲಾಗುತ್ತಂತೆ. ಬೆಸ್ಟ್ ಬಸ್‌ಗಳಲ್ಲಿ ಶಾಲಾ ಮಕ್ಕಳ ಸಹಿತ ಹಿರಿಯ ನಾಗರಿಕರು, ಅಂಗವಿಕಲರು ಮತ್ತು ಸ್ವಾತಂತ್ರ್ಯ ಹೋರಾಟಗಾರ ಪ್ರಯಾಣಿಕರಿಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಇದೀಗ ಈ ರಿಯಾಯಿತಿಗಳಲ್ಲೂ ಕಡಿತ ಮಾಡಲು ಮುಂದಾಗಿದೆ. ಇದಕ್ಕೆ ಬೆಸ್ಟ್ ಸಮಿತಿ ಬೈಠಕ್‌ನಲ್ಲಿ ಮಂಜೂರು ಸಿಗಬೇಕಿದೆ.
ಬೆಸ್ಟ್ ಸಮಿತಿಯು ಮುಂಬೈ ಮಹಾನಗರ ಪಾಲಿಕೆಯಿಂದ ಒಂದು ಸಾವಿರ ಕೋಟಿ ರೂಪಾಯಿಯನ್ನು ಆರ್ಥಿಕ ಚೇತರಿಕೆಗೆ ಕೇಳಿದೆ. ಆದರೆ ಮುಂಬೈ ಮನಪಾ ಇದುವರೆಗೆ ಹಣ ಕೊಡುವ ಮನಸ್ಸು ಮಾಡಿಲ್ಲ.
 
ಈಗ ಬೆಸ್ಟ್ ಹೆಚ್ಚು ಲಾಭವಿರುವ ರೂಟ್‌ಗಳಲ್ಲಿ 450 ಅಧಿಕ ಬಸ್ಸುಗಳನ್ನು ಚಲಾಯಿಸಲು ಮುಂದಾಗಿದೆ. ಇನ್ನೊಂದೆಡೆ ನಿವೃತ್ತರಾದವರ ಖಾಲಿ ಹುದ್ದೆಗೆ ಹೊಸ ಭರ್ತಿಯನ್ನು ತಡೆಹಿಡಿದಿದೆ. ಮೂಲಗಳಿಂದ ತಿಳಿದು ಬಂದಂತೆ ಬೆಸ್ಟ್ ಸಾರಿಗೆ ವಿಭಾಗದಲ್ಲಿ 1,100 ಸ್ಥಾನಗಳು ಶೀಘ್ರವೇ ಖಾಲಿಯಾಗಲಿದೆ. ಆದರೆ ಈ ಖಾಲಿಯಾದ ಹುದ್ದೆಗಳ ಸೀಟಿಗೆ ಹೊಸ ನೇಮಕ ಮಾಡಲಾಗುವುದಿಲ್ಲವಂತೆ. ಈ ನಡುವೆ ಬೆಸ್ಟ್ ಸಾರಿಗೆ ವಿಭಾಗದ ಯೂನಿಯನ್ ತೀವ್ರ ಸಿಟ್ಟುಗೊಂಡಿದೆ. ಖಾಲಿಯಾಗಿರುವ ಹುದ್ದೆಗಳಿಗೆ ಹೊಸ ಭರ್ತಿ ಮಾಡದೆ, ಇದ್ದವರನ್ನು ಹೆಚ್ಚುವರಿ ದುಡಿಸಿಕೊಳ್ಳಲು ನೋಡಿದರೆ ಯೂನಿಯನ್ ಇದಕ್ಕೆ ತೀವ್ರ ವಿರೋಧ ವ್ಯಕ್ತ ಪಡಿಸಲಿದೆ ಎಂದು ಬೆಸ್ಟ್ ವರ್ಕರ್ಸ್ ಯೂನಿಯನ್ ಹೇಳಿದೆ.

Writer - ಶ್ರೀನಿವಾಸ್ ಜೋಕಟ್ಟೆ

contributor

Editor - ಶ್ರೀನಿವಾಸ್ ಜೋಕಟ್ಟೆ

contributor

Similar News