ಕಡಿಮೆ ದರದ ವಿಮಾನ ಟಿಕೆಟ್ ಬೇಕೇ ?
ಮುಂಬೈ, ಎ.18: ಭಾರತೀಯರು ವಿದೇಶ ಪ್ರವಾಸಗಳಿಗೆ ಹೋಗುವುದು ಇತ್ತೀಚೆಗೆ ಸಾಮಾನ್ಯವಾಗಿದ್ದರೂ ಶೇ. 72ರಷ್ಟು ಮಂದಿಗೆ ಯಾವ ಸಮಯದಲ್ಲಿ ಟಿಕೆಟ್ ಗಳನ್ನು ಮುಂಗಡ ಕಾದಿರಿಸಿದರೆ ಉತ್ತಮ ಎಂಬುದು ತಿಳಿದಿಲ್ಲ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ.
ಸ್ಕೈ ಸ್ಕ್ಯಾನರ್ ನಡೆಸಿದ ಸಮೀಕ್ಷೆಯೊಂದರ ಪ್ರಕಾರ ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ.31ರಷ್ಟು ಮಂದಿ ಪ್ರಯಾಣಕ್ಕಿಂತ 12 ವಾರಗಳಿಗೆ ಮುಂಚಿತವಾಗಿ ಟಿಕೆಟ್ ಬುಕ್ಕಿಂಗ್ ಮಾಡಿದರೆ ಉತ್ತಮ ಎಂದು ಸರಿಯಾಗಿಯೇ ಅಂದಾಜಿಸುತ್ತಾರೆ. ಅದೇ ಸಮಯ ಶೇ.11ರಷ್ಟು ಮಂದಿಯ ಪ್ರಕಾರ ಕೊನೆ ಕ್ಷಣದಲ್ಲಿ ಬುಕ್ಕಿಂಗ್ ಮಾಡಿದಲ್ಲಿ ಕಡಿಮೆ ಬೆಲೆಗೆ ಟಿಕೆಟ್ ದೊರೆಯುವುದು.
ಸಮೀಕ್ಷೆಯಲ್ಲಿ ತಿಳಿದುಕೊಂಡಂತೆ ಬಾಲಿ ಮತ್ತು ಕೌಲಾಲಂಪುರಕ್ಕೆ 25 ವಾರ ಮುಂಚಿತವಾಗಿಯೇ ಬುಕ್ಕಿಂಗ್ ಮಾಡಿದರೆ ಉತ್ತಮವಾಗಿದೆ. ಆದರೆ ಪ್ರಯಾಣಕ್ಕೆ ಎರಡು ವಾರಗಳಿರುವಾಗ ಬುಕ್ಕಿಂಗ್ ಮಾಡಿದಲ್ಲಿ ಆ ಸಂದರ್ಭ ಟಿಕೆಟ್ ದರಗಳು ಶೇ.16 ಅಥವಾ ಶೇ.11ರಷ್ಟು ಹೆಚ್ಚಾಗುವ ಸಂಭವವಿದೆ.
ಯುರೋಪ್ ರಾಷ್ಟ್ರಗಳಿಗೆ ಪ್ರಯಾಣಿಸಲಿಚ್ಛಿಸುವವರು ಆಮ್‌ಸ್ಟರ್ಡೆಂಗೆ ಟಕೆಟ್ ದರಗಳಲ್ಲಿ ಶೇ.17ರಷ್ಟು ಉಳಿತಾಯ ಮಾಡಬಹುದಾಗಿದೆ. ಆದರೆ ಅವರು 24 ವಾರಗಳಿಗೆ ಮುಂಚಿತವಾಗಿ ಟಿಕೆಟ್ ಮುಂಗಡ ಕಾದಿರಿಸಬೇಕು ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಭಾರತೀಯ ಪ್ರವಾಸಿಗರಿಗೆ ಯಾವ ಸಮಯದಲ್ಲಿ ಟಿಕೆಟ್ ಮುಂಗಡ ಕಾದಿರಿಸಿದರೆ ಉತ್ತಮವೆಂದು ಇನ್ನೂ ತಿಳಿಯದು ಎಂದು ಜಾಗತಿಕ ಟ್ರಾವೆಲ್ ಸರ್ಚ್ ಕಂಪೆನಿಯಾಗಿರುವ ಸ್ಕೈಸ್ಕ್ಯಾನರ್ ಸಂಸ್ಥೆಯ ಇಂಡಿಯಾ ಗ್ರೋತ್ ಮ್ಯಾನೇಜರ್ ರೆಶ್ಮಿ ರಾಯ್ ಹೇಳುತ್ತಾರೆ.