ಮಹಿಳೆ ರಕ್ಷಣೆಗಾಗಿ ಪೊಲೀಸ್ ಠಾಣೆಗೆ ನುಗ್ಗಿದರೂ ಬಿಡದೆ ಗುಂಡಿಕ್ಕಿ ಕೊಂದರು
Update: 2017-04-18 14:40 IST
ಮೈನಪುರಿ (ಉ.ಪ್ರ),ಎ.18: ಭೂವಿವಾದಕ್ಕೆ ಸಂಬಂಧಿಸಿದಂತೆ ಮಹಿಳೆಯೋರ್ವಳನ್ನು ನಿನ್ನೆ ರಾತ್ರಿ ಇಲ್ಲಿಯ ಪೊಲೀಸ್ ಠಾಣೆಯಲ್ಲಿಯೇ ಗುಂಡಿಕ್ಕಿ ಕೊಲ್ಲಲಾಗಿದೆ. ಹಂತಕ ಬೆನ್ನಟ್ಟಿಕೊಂಡು ಬಂದಾಗ ರಕ್ಷಣೆಗಾಗಿ ಮಹಿಳೆ ಪೊಲೀಸ್ ಠಾಣೆಯೊಳಗೆ ನುಗ್ಗಿದ್ದಳಾದರೂ ಜೀವವುಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹಂತಕ ಪರಾರಿಯಾಗಲು ಯತ್ನಿಸಿದ್ದನಾದರೂ ಠಾಣೆಯೊಳಗೆ ಸೇರಿದ್ದ ಜನರು ಆತನನ್ನು ಹಿಡಿದು ಥಳಿಸಿದ್ದಾರೆ. 11 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ವಿವಾದಿತ ಜಾಗವು ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ಪೊಲೀಸ್ ಠಾಣೆಯ ಸಮೀಪವೇ ಇದೆ. ಸೋಮವಾರ ರಾತ್ರಿ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಬೀದಿಕಾಳಗ ನಡೆದಿತ್ತು. ಒಂದು ಗುಂಪಿನ ವ್ಯಕ್ತಿ ಬಂದೂಕು ಹಿಡಿದುಕೊಂಡು ಇನ್ನೊಂದು ಗುಂಪಿನ ಮಹಿಳೆಯ ಕಡೆಗೆ ನುಗ್ಗಿದಾಗ ಆಕೆ ಪೊಲೀಸ್ ಠಾಣೆಯತ್ತ ಓಡಿದ್ದಳು. ಆದರೆ ಪೊಲೀಸರ ಸಂಖ್ಯೆ ಅಲ್ಲಿ ಸೇರಿದ್ದ ಜನರಿಗಿಂತ ಕಡಿಮೆಯಿದ್ದರಿಂದ ಕೊಲೆಗೆ ಮೂಕಪ್ರೇಕ್ಷಕರಾಗಿದ್ದರು ಎನ್ನಲಾಗಿದೆ.