ಸಂರಕ್ಷಣೆಗಾಗಿ ಕಾದು ಕುಳಿತಿರುವ ರಾಜಾ ರವಿವರ್ಮರ ‘ಕಲಾ ಭವನ’

Update: 2017-04-18 12:23 GMT

ತಿರುವನಂತಪುರ,ಎ.18: ಇಲ್ಲಿಯ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಬಳಿಯ, ಖ್ಯಾತ ಕಲಾವಿದ ರಾಜಾ ರವಿವರ್ಮ ಅವರು ತನ್ನ ಕೆಲವು ಅತ್ಯುತ್ತಮ ಕಲಾಕೃತಿಗಳನ್ನು ಸೃಷ್ಟಿಸಿದ್ದ, ಶತಮಾನದಷ್ಟು ಹಳೆಯದಾದ ಕಟ್ಟಡವು ಈಗ ತನ್ನ ಸಂರಕ್ಷಣೆಗಾಗಿ ಕಾದು ಕುಳಿತಿದೆ.

 ವರ್ಮಾ ಅವರ ಪೂರ್ವಜರ ಕುಟುಂಬವಾದ ಕಿಲಿಮಣೂರು ರಾಜವಂಶಸ್ಥರ ಒಡೆತನಕ್ಕೆ ಸೇರಿದ ‘ಮೂಡತ್ ಮಾಡಂ’ ಸುದೀರ್ಘ ಕಾಲದಿಂದ ಶಿಥಿಲ ಸ್ಥಿತಿಯಲ್ಲಿದ್ದು, ಈಗ ತ್ಯಾಜ್ಯವಸ್ತುಗಳನ್ನು ಎಸೆಯುವ ಸ್ಥಳವಾಗಿಬಿಟ್ಟಿದೆ. ಛಾವಣಿ ಎಂದೋ ಬಿದ್ದು ಹೋಗಿದ್ದು, ಕಳೆಗಳು ಮತ್ತು ಗಿಡಗಂಟಿಗಳು ಬೆಳೆದಿರುವ ಈಗಲೋ ಆಗಲೋ ಬೀಳು ವಂತಹ ಸ್ಥಿತಿಯಲ್ಲಿರುವ ಗೋಡೆಗಳು ಮಾತ್ರ ಅದ್ಭುತ ಕಲಾ ಪರಂಪರೆಯ ಮೂಕ ಸ್ಮರಣಿಕೆಗಳಾಗಿ ಉಳಿದುಕೊಂಡಿವೆ.

ಇತಿಹಾಸಕಾರರು ಹೇಳುವಂತೆ ವರ್ಮಾ ತನ್ನ 14ನೆಯ ವಯಸ್ಸಿನಲ್ಲಿ ಅರಮನೆಯ ಕಲಾವಿದರಿಂದ ಜಲವರ್ಣ ಕಲೆಯನ್ನು ಕಲಿಯಲು ಇಲ್ಲಿಯ ಆಗಿನ ತಿರುವಾಂಕೂರಿಗೆ ಬಂದವರು ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಪಶ್ಚಿಮದಲ್ಲಿರುವ ಮೂಡತ್ ಮಾಡಂ ನಲ್ಲಿ ವಾಸವಾಗಿದ್ದರು.
ತನ್ನ ಅಧ್ಯಯನದ ಬಳಿಕವೂ ಈ ಕಟ್ಟಡದಲ್ಲಿ ವಾಸವನ್ನು ಮುಂದುವರಿಸಿದ್ದ ಅವರು ಇಲ್ಲಿಯೇ ತನ್ನ ಹಲವಾರು ಪ್ರಸಿದ್ಧ ಕಲಾಕೃತಿಗಳನ್ನು ರಚಿಸಿದ್ದರು.

ಪುರಾತತ್ವ ಇಲಾಖೆಯು ಬಹಳ ಹಿಂದೆಯೇ ಈ ಕಟ್ಟಡವನ್ನು ತನ್ನ ವಶಕ್ಕೆ ಪಡೆದು ಕೊಳ್ಳುವ ಯೋಜನೆಯನ್ನು ಹೊಂದಿತ್ತಾದರೂ, ಕಾನೂನು ತೊಡಕುಗಳಿಂದಾಗಿ ಅದಿನ್ನೂ ಸಾಕಾರಗೊಂಡಿಲ್ಲ.

ಮೂಡತ್ ಮಾಡಂ ಕಿಲಿಮಣೂರು ರಾಜವಂಶಸ್ಥರಿಗೆ ಸೇರಿದ್ದು, ಕಿಲಿಮಣೂರು ಅರಮನೆಯಿಂದ ತಿರುವಾಂಕೂರಿಗೆ ಬಂದವರು ಅಲ್ಲಿಯೇ ಉಳಿದುಕೊಳ್ಳುತ್ತಿದ್ದರು. ಹಳೆಯ ದಾಖಲೆಗಳಲ್ಲಿ ಈ ಕಟ್ಟಡ ಮೂವಡತ್ ಮಾಡಂ ಎಂದೂ ದಾಖಲಾಗಿದೆ ಎಂದು ಇತಿಹಾಸಕಾರ ಎಂ.ಗೋಪಾಲಕೃಷ್ಣನ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News