ಇನ್ನು ರವಿವಾರ "ಇಂಧನ ರಜೆ"
ಚೆನ್ನೈ, ಎ.19: ಸ್ವಚ್ಛ ಪರಿಸರಕ್ಕಾಗಿ ಇಂಧನ ಉಳಿಸಿ ಎಂಬ ಪ್ರಧಾನಿ ಕರೆಗೆ ಓಗೊಟ್ಟ ಎಂಟು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳು ಮೇ 14ರಿಂದ ರವಿವಾರ ಪೆಟ್ರೋಲ್/ ಡೀಸೆಲ್ ಮಾರಾಟ ಮಾಡದಿರಲು ನಿರ್ಧರಿಸಿವೆ.
ಎಲ್ಲ ರವಿವಾರಗಳಂದು ಪೆಟ್ರೋಲ್ ಬಂಕ್ ಮುಚ್ಚುವ ನಿರ್ಧಾರ ಕೈಗೊಳ್ಳುವ ಬಗ್ಗೆ ಕೆಲ ವರ್ಷಗಳ ಹಿಂದೆಯೇ ಯೋಚಿಸಿದ್ದೆವು. ಆದರೆ ನಿರ್ಧಾರ ಮರುಪರಿಶೀಲಿಸುವಂತೆ ತೈಲ ಮಾರುಕಟ್ಟೆ ಕಂಪೆನಿಗಳು ಮನವಿ ಮಾಡಿದ್ದವು. ಆದರೆ ಇದೀಗ ರವಿವಾರ ಪೆಟ್ರೋಲ್ ಬಂಕ್ ಮುಚ್ಚುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಭಾರತೀಯ ಪೆಟ್ರೋಲಿಯಂ ಡೀಲರ್‌ಗಳ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಸುರೇಶ್ ಕುಮಾರ್ ಪ್ರಕಟಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚಿನ "ಮನ್ ಕಿ ಬಾತ್" ಕಾರ್ಯಕ್ರಮದಲ್ಲಿ ಮಾಡಿಕೊಂಡ ಮನವಿಗೆ ಅನುಗುಣವಾಗಿ ಪರಿಸರ ಉಳಿಸುವ ಸಲುವಾಗಿ ಇಂಧನ ಉಳಿತಾಯಕ್ಕೆ ಮುಂದಾಗಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.
ತಮಿಳುನಾಡು, ಕೇರಳ, ಕರ್ನಾಟಕ, ಪುದುಚೇರಿ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಹರ್ಯಾಣದಲ್ಲಿ ಈ ನಿರ್ಧಾರ ಮೇ 14ರಿಂದ ಜಾರಿಗೆ ಬರಲಿದೆ. ಸುಮಾರು 20 ಸಾವಿರ ಪೆಟ್ರೋಲ್ ಬಂಕ್‌ಗಳು ರವಿವಾರ ಮುಚ್ಚಲ್ಪಡುತ್ತವೆ ಎಂದು ತಮಿಳುನಾಡು ಪೆಟ್ರೋಲಿಯಂ ಡೀಲರ್‌ಗಳ ಸಂಘದ ಉಪಾಧ್ಯಕ್ಷರೂ ಆಗಿರುವ ಅವರು ಸ್ಪಷ್ಟಪಡಿಸಿದ್ದಾರೆ.
ಬಂಕ್ ಬಂದ್‌ನಿಂದಾಗಿ ತಮಿಳುನಾಡು ರಾಜ್ಯದಲ್ಲೇ 150 ಕೋಟಿ ರೂಪಾಯಿಯ ವ್ಯವಹಾರ ನಷ್ಟವಾಗಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ರವಿವಾರಗಳಂದು ಶೇಕಡ 40ರಷ್ಟು ಬೇಡಿಕೆ ಕುಸಿಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಬಂದ್ ನಿರ್ಧಾರದ ಬಗ್ಗೆ ಎಲ್ಲ ಬಂಕ್‌ಗಳಿಗೆ ಸೂಚನೆ ಹೋಗಲಿದೆ ಎಂದು ಅವರು ವಿವರಿಸಿದ್ದಾರೆ.