ಗೋವಾದಲ್ಲಿ ಬೀಫ್ ನಿಷೇಧ ಇಲ್ಲ: ಬಿಜೆಪಿ ಮಿತ್ರಪಕ್ಷದ ನಾಯಕ ವಿಜಯ್ ಸರ್ದೇಸಾಯಿ
ಪಣಜಿ, ಎ.20: ಬಜರಂಗದಳ ಮತ್ತು ದುರ್ಗಾ ವಾಹಿನಿಯ ಸಹಕಾರದೊಂದಿಗೆ ವಿಶ್ವ ಹಿಂದೂ ಪರಿಷತ್ ಮುಂದಿನ ಎರಡು ವರ್ಷಗಳಲ್ಲಿ ಗೋವಾದಲ್ಲಿ ಗೋ ಹತ್ಯೆ ಹಾಗೂ ಗೋಮಾಂಸ ಸೇವನೆ ನಿಷೇಧಿಸುವುದಾಗಿ ವಿಹಿಂಪ ಹಿರಿಯ ನಾಯಕ ರಾಧಾ ಕೃಷ್ಣ ಮನೊರಿ ಕಳೆದ ರವಿವಾರ ನಡೆದ ಸಮಾರಂಭವೊಂದರಲ್ಲಿ ಘೋಷಿಸಿದ್ದರೆ, ಬಿಜೆಪಿಯ ಮಿತ್ರ ಪಕ್ಷ ಹಾಗೂ ಗೋವಾ ಫಾರ್ವರ್ಡ್ ಪಾರ್ಟಿ ನಾಯಕ ವಿಜಯ್ ಸರ್ದೇಸಾಯಿ ಇದನ್ನು ವಿರೋಧಿಸಿದ್ದು, ವ್ಯಕ್ತಿ ಸ್ವಾತಂತ್ರ್ಯ ಸಂವಿಧಾನದತ್ತವಾಗಿದ್ದು, ಅವುಗಳನ್ನು ರಾಜ್ಯ ಸರಕಾರ ರಕ್ಷಿಸುವುದಾಗಿ ಹೇಳಿದ್ದಾರೆ.
ಗೋವಾದ ನಗರ ಯೋಜನಾ ಸಚಿವರಾಗಿರುವ ಸರ್ದೇಸಾಯಿ, ವಿಹಿಂಪ ನಾಯಕನ ಹೇಳಿಕೆ ಸಂವಿಧಾನ ವಿರೋಧಿ ಎಂದು ಹೇಳಿದ್ದಾರೆ. ತಮಗಿಷ್ಟವಾದ ಆಹಾರ ಸೇವಿಸುವ ಹಕ್ಕು ನಾಗರಿಕರ ಮೂಲಭೂತ ಹಕ್ಕಾಗಿದೆ ಹಾಗೂ ಇದನ್ನು ಉಲ್ಲಂಘಿಸಿದವರ ವಿರುದ್ಧ ಕಾನೂ ಕ್ರಮ ಕೈಗೊಳ್ಳಲಾಗುವುದು. ಗೋ ಹತ್ಯೆಯೂ ಗೋಮಾಂಸ ಸೇವನೆಯೂ ಭಿನ್ನ, ಇವುಗಳ ನಡುವಣ ವ್ಯತ್ಯಾಸವನ್ನು ವಿಹಿಂಪ ತಿಳಿದಿರಬೇಕು,’’ ಎಂದು ಅವರು ಹೇಳಿದ್ದಾರೆ.
ತಾನು ಗೋವಾ ಸರಕಾರದ ಪರವಾಗಿ ಮಾತನಾಡುತ್ತಿರುವುದಾಗಿಯೂ ಅವರು ಸ್ಪಷ್ಟ ಪಡಿಸಿದ್ದಾರೆ. ‘‘ದೇಶದ ಇತರೆಡೆಗಳಲ್ಲಿಯ ಸಮಸ್ಯೆಗಳು ಗೋವಾ ಪ್ರವೇಶಿಸವುದು ಬೇಡ. ದೇಶದ ಇತರೆಡೆ ಏನೇ ನಡೆಯುತ್ತಿದ್ದರೂ ಗೋವಾದಲ್ಲಿ ಮತೀಯ ವೈಷಮ್ಯಕ್ಕೆ ಅಸ್ಪದವಿಲ್ಲ" ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.
‘‘ಗೋವಾಗೆ ತನ್ನದೇ ಆದ ವಿಶಿಷ್ಟ್ಯತೆಯಿದೆ. ಅದಕ್ಕೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬುದು ಮುಖ್ಯಮಂತ್ರಿಯ ಅಭಿಪ್ರಾಯವೂ ಆಗಿದೆ,’’ ಎಂದು ಸರ್ದೇಸಾಯಿ ಹೇಳಿದ್ದಾರೆ.