ಯೋಗಿಯ ಜನಪ್ರಿಯತೆಗೆ ಬಿಜೆಪಿಯೇ ಬೆಚ್ಚಿತೇ ?

Update: 2017-04-21 09:30 GMT

ಹೊಸದಿಲ್ಲಿ,ಎ.21 : ಆದಿತ್ಯನಾಥ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾದಾಗಿನಿಂದ ಅವರ ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತಿರುವುದನ್ನು ನೋಡಿ ಬಿಜೆಪಿಯೇ ಬೆಚ್ಚಿ ಬಿದ್ದಿದೆಯೇ ? ಇಂತಹ ಒಂದು ಪ್ರಶ್ನೆ ಈಗ ಎಲ್ಲರ ಮನಸ್ಸನ್ನು ಕಾಡುತ್ತಿದೆ. ಅದಕ್ಕೆ ಕಾರಣವೂ ಇಲ್ಲದೇ ಇಲ್ಲ.

ದಿಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗೆ ಯೋಗಿ ಆದಿತ್ಯನಾಥ್ ಎಪ್ರಿಲ್ 19 ಹಾಗೂ 20ರಂದು ಪ್ರಚಾರ ಕಾರ್ಯ ನಿರ್ವಹಿಸಲಿದ್ದರು. ಅವರು ಮೂರು ಸಾರ್ವಜನಿಕ ಸಭೆಗಳು ಹಾಗೂ ಒಂದು ರೋಡ್ ಶೋದಲ್ಲೂ ಭಾಗವಹಿಸುವವರಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಅವರ ಕಾರ್ಯಕ್ರಮ ರದ್ದು ಪಡಿಸಿ ಬಿಜೆಪಿ ನಾಯಕತ್ವ ಅಚ್ಚರಿ ಮೂಡಿಸಿದೆಯೆಂದು ಜನಸತ್ತಾ ವರದಿಯೊಂದು ಹೇಳಿದೆ. ಮೂಲಗಳ ಪ್ರಕಾರ ಯೋಗಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಮಾಧ್ಯಮಗಳಲ್ಲಿ ಅವರದೇ ಸುದ್ದಿ ರಾರಾಜಿಸುತ್ತಿದ್ದು ಇದರಿಂದ ವಿರೋಧ ಪಕ್ಷಗಳಿಗಿಂತ ಹೆಚ್ಚು ತಲೆ ಬಿಸಿ ಬಿಜೆಪಿಯನ್ನು ಕಾಡುತ್ತಿದೆಯೆನ್ನಲಾಗಿದೆ.

ದಿಲ್ಲಿ ಚುನಾವಣೆಯ ಸಂಪೂರ್ಣ ಉಸ್ತುವಾರಿ ಪಕ್ಷದ ಅಧ್ಯಕ್ಷ ಅಮಿತ್ ಶಾ ಹೊತ್ತಿದ್ದಾರೆ. ಈಗಾಗಲೇ ನಿರ್ಧಾರ ಕೈಗೊಂಡಂತೆ ಪಕ್ಷದ ಎಲ್ಲಾ ಕೇಂದ್ರ ಸಚಿವರೂ ಹಾಗೂ ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೂ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಪಕ್ಷವೇ ಹೇಳಿಕೊಂಡಿತ್ತು. ಆದರೆ ಇದೀಗ ಕೊನೆ ಕ್ಷಣದಲ್ಲಿ ಯೋಗಿ ಕಾರ್ಯಕ್ರಮವನ್ನು ರದ್ದು ಪಡಿಸಿರುವುದರಿಂದ ಬಿಜೆಪಿ ಆಡಳಿತವಿರುವ ಯಾವ ರಾಜ್ಯದ ಮುಖ್ಯಮಂತ್ರಿಯೂ ಪ್ರಚಾರ ಕಾರ್ಯದಲ್ಲಿ ಭಾಗವಹಿಸುವ ಆವಶ್ಯಕತೆಯಿಲ್ಲ ಎಂದು ಪಕ್ಷ ಹೇಳಿದೆ.

ಅಷ್ಟಕ್ಕೂ ಯೋಗಿ ದಿಲ್ಲಿಯಲ್ಲಿ ಪ್ರಚಾರ ಕಾರ್ಯ ಕೈಗೊಳ್ಳುವುದರಿಂದ ಬಿಜೆಪಿಗೆ ಆಗುವ ನಷ್ಟವಾದರೂ ಏನು ಎಂದು ಯೋಚಿಸುವಂತಾಗಿದೆ. ಒಂದೊಮ್ಮೆ ಯೋಗಿ ದಿಲ್ಲಿಯಲ್ಲಿ ಪ್ರಚಾರ ಕೈಗೊಂಡರೆ ಮಾಧ್ಯಮಗಳು ಮತ್ತೊಮ್ಮೆ ಯೋಗಿ ಜಪ ಆರಂಭಗೊಳಿಸಬಹುದೆನ್ನುವ ಭಯ ಬಿಜೆಪಿಗಿದೆ ಎಂದು ಜನಸತ್ತಾ ವರದಿಯಲ್ಲಿ ಹೇಳಲಾಗಿದೆ.

ಮೇಲಾಗಿ ಬಿಜೆಪಿ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅಥವಾ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕಾರಣಕರ್ತರು ಎಂದು ಹೇಳುವ ಬದಲು ಜನರು ಯೋಗಿಯಿಂದಾಗಿ ಪಕ್ಷ ಜಯ ಸಾಧಿಸಿದೆ ಎಂದು ಹೇಳಬಹುದೆಂಬ ಭಯವೂ ಬಿಜೆಪಿಯನ್ನು ಕಾಡಲಾರಂಭಿಸಿದೆಯೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News