ಸ್ಮಾರ್ಟ್‌ಫೋನ್ ಖರೀದಿಯಿಂದಲೇ ಕೋಟ್ಯಾಧೀಶೆಯಾದಳು, ಆದರೂ ಅದರ ವಿರುದ್ಧ ಹೆತ್ತವರ ಕಿರಿಕಿರಿ ಮಾತ್ರ ನಿಂತಿಲ್ಲ........

Update: 2017-04-21 10:05 GMT

 ಪುಣೆ,ಎ.21: ಲಾತೂರು ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಶ್ರದ್ಧಾ ಮೆಂಗಶೆಟ್ಟಿ (20) ಕಳೆದ ಜನವರಿಯಲ್ಲಿ ಸ್ಮಾರ್ಟ್‌ಫೋನ್‌ಗಾಗಿ ಅಂತರ್ಜಾಲವನ್ನು ಜಾಲಾಡುತ್ತಿದ್ದಳು. ಸ್ಮಾರ್ಟ್‌ಫೋನ್ ಖರೀದಿಗೆ ತನ್ನ ತಂದೆ ಒಲವವು ಹೊಂದಿಲ್ಲ ಎನ್ನುವುದು ಅವಳಿಗೆ ಚೆನ್ನಾಗಿ ಗೊತ್ತಿತ್ತು. ಆದರೂ ಆನ್‌ಲೈನ್‌ನಲ್ಲಿ ಸ್ಮಾರ್ಟ್‌ಫೋನ್‌ನ್ನು 1,590 ರೂ.ಗಳ ಮಾಸಿಕ ಕಂತಿನಲ್ಲಿ ಖರೀದಿಸಿದ್ದಳು. ಈ ವಹಿವಾಟು ಕೆವೇ ದಿನಗಳಲ್ಲಿ ನೀತಿ ಆಯೋಗದ ‘ಲಕ್ಕಿ ಗ್ರಾಹಕ ಯೋಜನಾ ’ದ ಮೊದಲ ಬಹುಮಾನವಾಗಿ ಒಂದು ಕೋಟಿ ರೂ.ಗಳ ಜಾಕ್‌ಪಾಟ್‌ನ್ನು ಅವಳಿಗೆ ತಂದುಕೊಟ್ಟಿದೆ.

ಎ.14ರಂದು ನಾಗ್ಪುರದಲ್ಲಿ ನಡೆದ ಸಮಾರಂಭದಲ್ಲಿ ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಒಂದು ಕೋಟಿ ರೂ.ಗಳ ಚೆಕ್‌ನ್ನು ಶ್ರದ್ಧಾಗೆ ಹಸ್ತಾಂತರಿಸಿದ್ದಾರೆ.

 ತನಗೊಲಿದಿರುವ ಭಾರೀ ಅದೃಷ್ಟದಿಂದಾಗಿ ಶ್ರದ್ಧಾ ಈಗ ತಾನು ಕಲಿಯುತ್ತಿರುವ ಪುಣೆಯ ಎಐಎಸ್‌ಎಸ್‌ಎಂಎಸ್ ಕಾಲೇಜು ಮತ್ತು ಹುಟ್ಟೂರು ಲಾತೂರಿನಲ್ಲಿ ಸೆಲೆಬ್ರಿಟಿಯಾಗಿಬಿಟ್ಟಿದ್ದಾಳೆ.

ಹಲವಾರು ಕಡೆ ಸನ್ಮಾನ ಸಮಾರಂಭಗಳಿಗೆ ತನ್ನನ್ನು ಆಹ್ವಾನಿಸಲಾಗುತ್ತಿದೆ. ಈ ಗೆಲುವನ್ನು ಇನ್ನೂ ಅರಗಿಸಿಕೊಳ್ಳಲಾಗಿಲ್ಲ ಎಂದು ಖುಷಿಯಿಂದ ಬೀಗುತ್ತಿದ್ದ ಶ್ರದ್ಧಾ ನುಡಿದಳು.

 ಶ್ರದ್ಧಾಳ ತಂದೆ ಮೋಹನ್ ಕಿರಾಣಿ ಅಂಗಡಿ ನಡೆಸುತ್ತಿದ್ದರೆ, ತಾಯಿ ಮೀರಾ ಮನೆವಾರ್ತೆ ನೋಡಿಕೊಳ್ಳುತ್ತಿದ್ದಾರೆ. ಶ್ರದ್ಧಾಳಿಗೆ ಬಂದಿರುವ ದುಡ್ಡನ್ನು ಸದ್ಯ ಅವರು ತಮ್ಮ ಉಳಿತಾಯ ಖಾತೆಯಲ್ಲಿ ಜಮಾ ಮಾಡಿದ್ದಾರೆ.

 ತನ್ನ ಅದೃಷ್ಟವನ್ನೇ ಬದಲಿಸಿರುವ,ಕಾರ್ಡ್ ಮೂಲಕ ಸ್ಮಾರ್ಟ್‌ಫೋನ್ ಖರೀದಿಗೆ ಹೆತ್ತವರನ್ನು ಒಪ್ಪಿಸಲು ತಾನು ಪಟ್ಟ ಕಷ್ಟ ತನಗೇ ಗೊತ್ತು ಎನ್ನುತ್ತಾಳೆ ಶ್ರದ್ಧಾ. ಮೊದಲಿಗೆ ಅವರು ಬೇಡವೇ ಬೇಡ ಎಂದಿದ್ದರು. ಅವರು ಬೈಯುತ್ತಿದ್ದರೆ ತಾನು ಬೇಡಿಕೊಳ್ಳುತ್ತಲೇ ಇದ್ದೆ. ಕೊನೆಗೂ ತನ್ನ ಬೇಡಿಕೆಗೆ ಅವರು ಒಪ್ಪಿಕೊಂಡಿದ್ದರು ಎಂದು ಅವಳು ಹೇಳಿದಳು.

ತಾನು ಮೆಚ್ಚಿದ್ದ ಸ್ಮಾರ್ಟ್‌ಫೋನ್ ಬೆಲೆ 7,500 ರೂ.ಆಗಿತ್ತು. ಅದು ತಮ್ಮ ಪಾಲಿಗೆ ದೊಡ್ಡ ಮೊತ್ತವೇ ಆಗಿತ್ತು. ಕಡಿಮೆ ದರದ ಇನ್ನೊಂದು ಫೋನ್ ನೋಡುವಂತೆ ತಂದೆ ಹೇಳಿದ್ದರು. ಆದರೂ ಆನ್‌ಲೈನ್‌ನಲ್ಲಿ ಅದನ್ನು ಮಾಸಿಕ ಕಂತಿನಲ್ಲಿ ಖರೀದಿಸಿದ್ದೆ ಎಂದು ಶ್ರದ್ಧಾ ನುಡಿದಳು.
  ಎ.11 ರಂದು ಸೆಂಟ್ರಲ್ ಬ್ಯಾಂಕಿನ ಮ್ಯಾನೇಜರ್ ಖುದ್ದಾಗಿ ಶ್ರದ್ಧಾಳ ಮನೆಗೆ ಬಂದು ಶುಭಸುದ್ದಿಯನ್ನು ತಿಳಿಸಿದ್ದರು. ಪ್ರಧಾನಿ ಮಂತ್ರಿಗಳು ಬಹುಮಾನದ ಹಣವನ್ನು ನೀಡಲಿದ್ದಾರೆ ಎಂದೂ ತಿಳಿಸಿದ್ದರು. ಆದರೆ ಶ್ರದ್ಧಾ ಹೆತ್ತವರೊಂದಿಗೆ ನಾಗ್ಪುಕ್ಕೆ ತೆರಳುವ ಬಸ್‌ನಲ್ಲಿ ಕುಳಿತ ನಂತರವೇ ಅವರು ಬಹುಮಾನದ ಮೊತ್ತವನ್ನು ತಿಳಿಸಿದ್ದರು.

 ಶ್ರದ್ಧಾ ಈಗ ಕೋಟಿ ರೂ.ಗಳ ಒಡತಿಯಾಗಿದ್ದರೂ ಸ್ಮಾರ್ಟ್‌ಫೋನ್ ಬಗ್ಗೆ ಹೆತ್ತವರ ಗೊಣಗಾಟ ಮಾತ್ರ ನಿಂತಿಲ್ಲ. ಅದೊಂದು ಪೀಡೆ ಎಂದು ಈಗಲೂ ಭಾವಿಸಿರುವ ಅವರು ಓದಿನ ಕಡೆ ಗಮನವನ್ನು ಕೊಡುವಂತೆ ಮಗಳನ್ನು ಆಗಾಗ್ಗೆ ಗದರುತ್ತಲೇ ಇರುತ್ತಾರೆ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News