×
Ad

'ರಾಬ್ತ'ದಲ್ಲಿ 324 ವರ್ಷದ ವ್ಯಕ್ತಿಯ ಪಾತ್ರ ನಿರ್ವಹಿಸುತ್ತಿರುವ ಈ ಖ್ಯಾತ ಬಾಲಿವುಡ್ ನಟನನ್ನು ಗುರುತಿಸಬಲ್ಲಿರಾ ?

Update: 2017-04-21 15:40 IST

ಮುಂಬೈ, ಎ. 21 : ಸುಶಾಂತ್ ಸಿಂಗ್ ರಜಪೂತ್ ಹಾಗು ಕೃತಿ ಸನೋನ್ ಪ್ರಮುಖ ಪಾತ್ರದಲ್ಲಿರುವ ನೂತನ ಚಿತ್ರ ರಾಬ್ತದ ಟ್ರೇಲರ್ ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದೆ. 

ಸುಶಾಂತ್ - ಕೃತಿ ನಡುವಿನ ಆಪ್ತ ಪ್ರೇಮ ಕತೆಯಂತೆ ಪ್ರಾರಂಭವಾಗುವ ಈ ಟ್ರೇಲರ್ ಇದೀಗ ಬೇರೆಯೇ ಕಾರಣಕ್ಕೆ ಭಾರೀ ಸುದ್ದಿಯಲ್ಲಿದೆ. 

ಟ್ರೇಲರ್ ಕೊನೆಯಾಗುವಾಗ ಕತೆ ಬೇರೆಯೇ ಯುಗಕ್ಕೆ ಹೋಗುವ ಸೂಚನೆ ನೀಡುವ ಕಾರಣದಿಂದಾಗಿ ಹಾಗು ಆ ಯುಗದಲ್ಲಿ ಕಾಣುವ ಓರ್ವ ಪಾತ್ರಧಾರಿಯಿಂದಾಗಿ ಈಗ ಈ ಟ್ರೇಲರ್ ಬಿಸಿ ಬಿಸಿ ಚರ್ಚೆಯಲ್ಲಿದೆ. 

ಈ ಅಚ್ಚರಿಯ ಹಾಗು ಅಷ್ಟೇ ಪ್ರಮುಖ ಪಾತ್ರಧಾರಿಯ ವಯಸ್ಸು 324 ವರ್ಷ . ಅಂದ ಹಾಗೆ ಈ ಪಾತ್ರ ನಿರ್ವಹಿಸಿರುವುದು ಬಾಲಿವುಡ್ ನ ಅತ್ಯಂತ ಪ್ರತಿಭಾವಂತ ಯುವ ಕಲಾವಿದ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರಾಜ್ ಕುಮಾರ್ ರಾವ್ ! 

16 ಲುಕ್ ಟೆಸ್ಟ್ ಗಳ ಬಳಿಕ ರಾವ್ ರ ಈ ಲುಕ್ ಅನ್ನು ಅಂತಿಮಗೊಳಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ. ಲಾಸ್ ಏಂಜೆಲೀಸ್ ನಿಂದ ಬಂದ ವಿಶೇಷ ತಂಡ ಪ್ರತಿದಿನ ಕನಿಷ್ಠ 5-6 ಗಂಟೆ ಮೇಕಪ್ ಮಾಡಿ ರಾವ್ ಅವರನ್ನು ಈ ಪಾತ್ರಕ್ಕೆ ಸಿದ್ಧಪಡಿಸುತ್ತಿತ್ತು ಎಂದು ಹೇಳಲಾಗಿದೆ. 

ಇದಕ್ಕಾಗಿ ರಾಜ್ ಕುಮಾರ್ ವಿಶೇಷ ತಯಾರಿ ಹಾಗು ತಾಳ್ಮೆ ಪ್ರದರ್ಶಿಸಿ ನಿರ್ಮಾಪಕರು ಹಾಗು ನಿರ್ದೇಶಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಭಾರೀ ಮೇಕಪ್ ಅನ್ನುಹಾಗು ಅದರಿಂದ ಆಗುವ ದೈಹಿಕ ಆಯಾಸವನ್ನು  ಸಹಿಸುವುದು ಮಾತ್ರವಲ್ಲದೆ ರಾಜ್ ಕುಮಾರ್  ಈ ಪಾತ್ರಕ್ಕಾಗಿ ತಮ್ಮ ದೇಹ ಭಾಷೆ ಹಾಗು ಧ್ವನಿಯಲ್ಲೂ ಸಾಕಷ್ಟು ಮಾರ್ಪಾಡು ಮಾಡಲು ಯಶಸ್ವಿಯಾಗಿ ಯತ್ನಿಸಿದ್ದಾರೆ ಎಂದು ಹೇಳಲಾಗಿದೆ. 

ಚಿತ್ರ ಬಿಡುಗಡೆಯಾದ ಮೇಲೆ ವೀಕ್ಷಕರೂ ಇದಕ್ಕೆ ಮೆಚ್ಚುಗೆಯ ಮೊಹರೊತ್ತಿದರೆ ರಾಜ್ ಕುಮಾರ್ ಅವರ ಪಾತ್ರ ಬಾಲಿವುಡ್ ನ ಇತಿಹಾಸದಲ್ಲಿ ವಿಶೇಷ ಪತ್ರವೊಂದಾಗಿ ದಾಖಲಾಗುವುದು ಖಚಿತ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News