ಅರುಣಾಚಲ ಪ್ರದೇಶದಲ್ಲಿ ಸ್ಥಳಗಳ ನಾಮಕರಣ ತನ್ನ ‘ಕಾನೂನುಬದ್ಧ ಹಕ್ಕು ’ ಎಂದ ಚೀನಾ

Update: 2017-04-21 14:09 GMT

ಹೊಸದಿಲ್ಲಿ,ಎ.21: ಅರುಣಾಚಲ ಪ್ರದೇಶವು ‘ದಕ್ಷಿಣ ಟಿಬೆಟ್ ’ನ್ನು ಒಳಗೊಂಡಿರುವುದರಿಂದ ಅಲ್ಲಿಯ ಆರು ಸ್ಥಳಗಳ ಹೆಸರುಗಳನ್ನು ಬದಲಿಸುವ ತನ್ನ ನಿರ್ಧಾರವು ತನ್ನ ‘ಕಾನೂನುಬದ್ಧ ಹಕ್ಕು ’ ಆಗಿದೆ ಎಂದು ಚೀನಾ ಶುಕ್ರವಾರ ಹೇಳಿದೆ. ಗಡಿ ವಿವಾದದಲ್ಲಿ ಚೀನಾದ ಈ ಪ್ರತಿಪಾದನೆಯನ್ನು ಭಾರತವು ದಶಕಗಳಿಂದಲೂ ನಿರಾಕರಿಸುತ್ತಲೇ ಬಂದಿದೆ.

ಟಿಬೆಟಿಯನ್ನರ ಆಧ್ಯಾತ್ಮಿಕ ಗುರು ದಲಾಯಿ ಲಾಮಾ ಅವರು ಈ ತಿಂಗಳ ಆರಂಭದಲ್ಲಿ ಅರುಣಾಚಲ ಪ್ರದೇಶಕ್ಕೆ ಭೇಟಿಯನ್ನು ನೀಡಿದ್ದರು. ಇದನ್ನು ಪ್ರತಿಭಟಿಸಿ ಚೀನಾ ಅರುಣಾಚಲ ಪ್ರದೇಶದಲ್ಲಿ ತನಗೆ ಸೇರಿದ್ದೆಂದು ಪ್ರತಿಪಾದಿಸುತ್ತಿರುವ ಪ್ರದೇಶದಲ್ಲಿ ಯ ಆರು ಸ್ಥಳಗಳ ಹೆಸರುಗಳನ್ನು ಚೀನಿ ಭಾಷೆಯಲ್ಲಿ ಬದಲಾಯಿಸಿತ್ತು ಇವು ಈ ಸ್ಥಳಗಳ ಹಿಂದಿನ ಹೆಸರುಗಳಾಗಿವೆ ಎನ್ನುವುದು ಅದರ ವಾದವಾಗಿದೆ. ಈ ಪ್ರದೇಶಗಳ ಹೆಸರುಗಳನ್ನು ಕ್ರಮಬದ್ಧಗೊಳಿಸುವುದು ಮತ್ತು ಅವುಗಳನ್ನು ಸಾರ್ವಜನಿಕರಿಗೆ ತಿಳಿಸುವುದು ನಮ್ಮ ಕಾನೂನು ಬದ್ಧ ಹಕ್ಕನ್ನು ಆಧರಿಸಿರುವ ಕಾನೂನು ಬದ್ಧ ಕ್ರಮವಾಗಿದೆ ಎಂದು ಚೀನದ ಅಧಿಕಾರಿಯೋರ್ವರು ಶುಕ್ರವಾರ ಹೇಳಿದರು.

ಅರುಣಾಚಲ ಪ್ರದೇಶದ ಪ್ರತಿಯೊಂದು ಇಂಚೂ ಭಾರತಕ್ಕೆ ಸೇರಿದೆ ಎಂದು ಕೇಂದ್ರವು ಗುರುವಾರ ಸ್ಪಷ್ಪಡಿಸಿತ್ತು. ಅರುಣಾಚಲ ಪ್ರದೇಶವು ಭಾರತದ ಅಖಂಡ ಭಾಗವಾಗಿದೆ. ಅಲ್ಲಿಯ ಯಾವುದೇ ಸ್ಥಳವನ್ನು ಹೆಸರಿಸುವುದು ಚೀನಾಕ್ಕೆ ಸಂಬಂಧಿಸಿದ್ದಲ್ಲ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಹೇಳಿದ್ದರು.

ಅರುಣಾಚಲ ಪ್ರದೇಶಕ್ಕೆ ದಲಾಯಿ ಲಾಮಾ ಭೇಟಿಯು ಉಭಯ ದೇಶಗಳ ನಡುವಿನ ಸಂಬಂಧಗಳಿಗೆ ತೀವ್ರ ಹಾನಿಯನ್ನುಂಟು ಮಾಡಲಿದೆ ಎಂದು ಚೀನಾ ಭಾರತಕ್ಕೆ ಎಚ್ಚರಿಕೆ ನೀಡಿತ್ತು. 81ರ ವಯೋವೃದ್ಧ ದಲಾಯಿ ಲಾಮಾ ಅವರು ‘ಅಪಾಯಕಾರಿ ಪ್ರತ್ಯೇಕತಾವಾದಿ ’ಎಂದು ಚೀನಾ ಪರಿಗಣಿಸಿದೆ.

 ದಲಾಯಿ ಲಾಮಾ ಅವರ ಅರುಣಾಚಲ ಪ್ರದೇಶ ಪ್ರವಾಸವು ಧಾರ್ಮಿಕ ಸೌಹಾರ್ದತೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿತ್ತೇ ಹೊರತು ಯಾವುದೇ ರಾಜಕೀಯ ಉದ್ದೇಶವಿರಲಿಲ್ಲ. ಯಾವುದೇ ಸಂದರ್ಭದಲ್ಲಿಯೂ ಭಾರತದ ಆಂತರಿಕ ವ್ಯವಹಾರಗಳಲ್ಲಿ ಮೂಗು ತೂರಿಸುವ ಹಕ್ಕ್ಕು ಚೀನಾಕ್ಕಿಲ್ಲ ಎಂದು ಕೇಂದ್ರವು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News