‘ಕೊಹಿನೂರ್ ’ಮರಳಿಸುವಂತೆ ಅಥವಾ ಹರಾಜು ಹಾಕದಂತೆ ಬ್ರಿಟನ್‌ಗೆ ಆದೇಶಿಸುವಂತಿಲ್ಲ: ಸುಪ್ರೀಂ ಕೋರ್ಟ್
ಹೊಸದಿಲ್ಲಿ,ಎ.21: ಕೊಹಿನೂರ್ ವಜ್ರವನ್ನು ಮರಳಿಸುವಂತೆ ಬ್ರಿಟನ್‌ಗೆ ನಿರ್ದೇಶ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯೊಂದನ್ನು ಶುಕ್ರವಾರ ಇತ್ಯರ್ಥಗೊಳಿಸಿದ ಸರ್ವೋಚ್ಚ ನ್ಯಾಯಾಲಯವು ವಜ್ರವನ್ನು ಮರಳಿಸುವಂತೆ ಅಥವಾ ಹರಾಜು ಹಾಕದಂತೆ ಅದರ ಪ್ರಸಕ್ತ ಮಾಲಕನಿಗೆ ತಾನು ಆದೇಶಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.
ಆಸ್ತಿಯೊಂದನ್ನು ಹರಾಜು ಮಾಡದಂತೆ ತಾನು ವಿದೇಶಿ ಸರಕಾರಕ್ಕೆ ಸೂಚಿಸಲು ಸಾಧ್ಯವಿಲ್ಲ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೇಹರ ನೇತೃತ್ವದ ಪೀಠವು, ಅಮೆರಿಕ ಮತ್ತು ಬ್ರಿಟನ್‌ಗಳಲ್ಲಿರುವ ಆಸ್ತಿಗಳ ಕುರಿತು ಇಂತಹ ಅರ್ಜಿಗಳು ಸಲ್ಲಿಕೆಯಾಗುತ್ತಿರುವುದು ನಮಗೆ ಅಚ್ಚರಿಯನ್ನುಂಟು ಮಾಡಿದೆ. ಇದ್ಯಾವ ಸೀಮೆಯ ಅರ್ಜಿ ಎಂದು ಪ್ರಶ್ನಿಸಿತು.
ಎನ್‌ಜಿಒ ಆಲ್ ಇಂಡಿಯಾ ಹ್ಯೂಮನ್ ರೈಟ್ಸ್ ಆ್ಯಂಡ್ ಸೋಷಿಯಲ್ ಜಸ್ಟೀಸ್ ಫ್ರಂಟ್ ಹಾಗು ಹೆರಿಟೇಜ್ ಬಂಗಾಲ ಈ ಅರ್ಜಿಯನ್ನು ಸಲ್ಲಿಸಿದ್ದವು.
ಕೊಹಿನೂರ್ ವಜ್ರದ ವಾಪಸಾತಿಗಾಗಿ ಭಾರತ ಸರಕಾರವು ಬ್ರಿಟನ್ ಸರಕಾರದೊಂದಿಗೆ ಮಾತುಕತೆಗಳನ್ನು ಮುಂದುವರಿಸಿದೆ ಮತ್ತು ವಜ್ರವನ್ನು ಮರಳಿ ತರಲು ತಾನು ಪ್ರಯತ್ನಿಸುತ್ತಿದ್ದೇನೆ ಎಂಬ ಅದರ ಉತ್ತರ ನ್ಯಾಯಾಲಯಕ್ಕೆ ತೃಪ್ತಿಯನ್ನುಂಟು ಮಾಡಿದೆ ಎಂದು ಪೀಠವು ತಿಳಿಸಿತು.
108 ಕ್ಯಾರಟ್‌ನ ಕೊಹಿನೂರ್ (ಬೆಳಕಿನ ಪರ್ವತ) 14ನೇ ಶತಮಾನದಲ್ಲಿ ದಕ್ಷಿಣ ಭಾರತದ ಗಣಿಯೊಂದರಲ್ಲಿ ಪತ್ತೆಯಾಗಿತ್ತು.