ಜಮ್ಮು ಕಾಶ್ಮೀರದಲ್ಲಿ ಹಳಸುತ್ತಿರುವ ಬಿಜೆಪಿ-ಪಿಡಿಪಿ ಮೈತ್ರಿ

Update: 2017-04-22 07:18 GMT

ಶ್ರೀನಗರ, ಎ.22: ಜಮ್ಮು ಕಾಶ್ಮೀರದಲ್ಲಿ ಬಿಜೆಪಿ-ಪಿಡಿಪಿ ಮೈತ್ರಿ ಸರಕಾರ ರಚನೆಯಾಗಿ ಎರಡು ವರ್ಷವಾಗುವಷ್ಟರಲ್ಲಿ ಎರಡೂ ಪಕ್ಷಗಳು ಖಾಸಗಿಯಾಗಿ ಹಾಗೂ ಬಹಿರಂಗವಾಗಿ ವಾಕ್ಸಮರದಲ್ಲಿ ಮುಳುಗಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಹಿಂಸೆ, ತೀವ್ರಗಾಮಿ ಚಟುವಟಿಕೆಗಳು ಹಾಗೂ ಇತ್ತೀಚೆಗೆ ನಡೆದ ಲೋಕಸಭಾ ಉಪಚುನಾವಣೆಗಳಲ್ಲಿ ದಾಖಲಾದ ಕನಿಷ್ಠ ಮತದಾನದ ವಿಚಾರವಾಗಿ ಎರಡೂ ಪಕ್ಷಗಳು ಪರಸ್ಪರ ದೋಷಾರೋಪಣೆಯಲ್ಲಿ ತೊಡಗಿಕೊಂಡಿವೆ.

ಹಿಂಸಾಚಾರ ನಡೆಸುವವರ ಮತ್ತು ಕಲ್ಲು ತೂರಾಟಗಾರರ ಮೇಲೆ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಎರಡೂ ಪಕ್ಷಗಳು ವಿಭಿನ್ನ ನಿಲುವು ತಳೆದಿದ್ದು, ಬಿಜೆಪಿಯ ಧೋರಣೆಯನ್ನು ಸಂಘರ್ಷಾತ್ಮಕ ರಾಜಕೀಯವೆಂದು ಪಿಡಿಪಿ ಬಣ್ಣಿಸಿದರೆ, ಪಿಡಿಪಿ ಓಲೈಕೆ ರಾಜಕೀಯದಲ್ಲಿ ತೊಡಗಿದೆ ಎಂಬುದು ಬಿಜೆಪಿಯ ವಾದವಾಗಿದೆ.

ಕಲ್ಲು ತೂರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಾಗೂ ಒತ್ತಡಗಳಿಗೆ ಮಣಿಯದಂತೆ ಬಿಜೆಪಿಯು ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರನ್ನು ಆಗ್ರಹಿಸುತ್ತಾ ಬಂದಿದೆ. ತರುವಾಯ ಪೊಲೀಸ್ ಇಲಾಖೆ ಮತ್ತು ಸುರಕ್ಷ ಪಡೆಗಳೂ ಗೊಂದಲದಲ್ಲಿವೆ ಎನ್ನಲಾಗಿದೆ. ‘‘ನಾವು ಕಲ್ಲು ತೂರಾಟಗಾರರನ್ನು ಬಂಧಿಸಿದಾಗ ಅವರನ್ನು ಬಿಡುಗಡೆಗೊಳಿಸುವಂತೆ ಪಿಡಿಪಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳಿಂದ ಒತ್ತಡ ಎದುರಿಸುತ್ತೇವೆ. ಎರಡೂ ಪಕ್ಷಗಳು ತಮ್ಮ ಪ್ರಭಾವ ಬೀರಲು ಯತ್ನಿಸುತ್ತವೆ ಎಂದು ತಮ್ಮ ಹೆಸರು ಬಹಿರಂಗಪಡಿಸಲಿಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ರಾಜ್ಯದಲ್ಲಿ ಹಿಂಸಾಚಾರ ಪ್ರಕರಣಗಳು 2016ರಲ್ಲಿ ಹಿಂದಿನ ವರ್ಷಗಳಿಗಿಂತ ಹೆಚ್ಚಾಗಿದೆ. 2015ರಲ್ಲಿ 1,157 ಹಿಂಸಾಚಾರ ಪ್ರಕರಣಗಳು ವರದಿಯಾಗಿದ್ದರೆ, 2016ರಲ್ಲಿ 3,404 ಪ್ರಕರಣಗಳು ವರದಿಯಾಗಿವೆ.

ಆದರೆ ಕಳೆದ ವರ್ಷದ ಹಿಂಸಾಚಾರದಲ್ಲಿ 80 ನಾಗರಿಕರು ಸಾವಿಗೀಡಾದಂದಿನಿಂದ ಮುಫ್ತಿ ಕೇವಲ ನೆಪ ಮಾತ್ರಕ್ಕೆ ಮುಖ್ಯಮಂತ್ರಿಯಾಗಿದ್ದು, ಅವರ ಮೂಗಿನ ನೇರಕ್ಕೇ ಹಕ್ಕುಗಳ ಉಲ್ಲಂಘನೆಯಾಗುತ್ತಿವೆಯೆನ್ನಲಾಗಿದೆ.

''ಭಾರತವನ್ನು ಹಿಂದೂ ರಾಷ್ಟ್ರವಾಗಿಸಬೇಕೆಂಬ ಗುರಿ ಹೊಂದಿರುವ ಆರೆಸ್ಸೆಸ್ಸಿನ ರಾಜಕೀಯ ಸಂಘಟನೆ ಬಿಜೆಪಿ ಆಗಿರುವಾಗ ಎರಡೂ ಪಕ್ಷಗಳ ನಡುವಣ ಈ ಮೈತ್ರಿ ಸರಿ ಬಾರದು'' ಎಂದು ಪಿಡಿಪಿ ನಾಯಕರೊಬ್ಬರು ವಿವರಿಸುತ್ತಾರೆ. ''ಬಿಜೆಪಿಯೊಡನೆ ನಮ್ಮ ಮೈತ್ರಿಯನ್ನು ಸಮರ್ಥಿಸಲು ನಮಗೆ ಕಷ್ಟವಾಗುತ್ತಿದೆ'' ಎಂದು ಇನ್ನೊಬ್ಬರು ನಾಯಕರು ಹೇಳುತ್ತಾರೆ.

ರಾಜ್ಯದಲ್ಲಿ ಈಗಲೂ ಇರುವ ಅಶಾಂತಿಯ ವಾತಾವರಣಕ್ಕೆ ಬಿಜೆಪಿ ಪ್ರತ್ಯೇಕತಾವಾದಿಗಳು ಹಾಗೂ ಪಾಕಿಸ್ತಾನದೊಂದಿಗೆ ಮಾತುಕುತೆ ಮುಂದುವರಿಸದೇ ಇರಲು ನಿರ್ಧರಿಸಿದ್ದೇ ಕಾರಣವೆಂದು ಪಿಡಿಪಿ ನಂಬಿದೆ. ಎರಡೂ ಪಕ್ಷಗಳ ನಡುವಿನ ನಂಟು ಅದೆಷ್ಟು ಹಳಸಿದೆಯೆಂದರೆ ಕಾಶ್ಮೀರದ ಕಲ್ಲು ತೂರಾಟಗಾರರನ್ನು ಗುಂಡಿನ ಮೂಲಕ ಹತೋಟಿಗೆ ತರಬೇಕೆಂದು ಬಿಜೆಪಿ ಸಚಿವ ಚಂದ್ರ ಪ್ರಕಾಶ್ ಗಂಗ ಹೇಳಿದ್ದರು. ಅವರು ಮತ್ತೆ ತಮ್ಮ ಹೇಳಿಕೆಯನ್ನು ಹಿಂದೆಗೆದುಕೊಂಡಿದ್ದರೂ ಅದು ಅದಾಗಲೇ ಸಾಕಷ್ಟು ಹಾನಿಯುಂಟು ಮಾಡಿತ್ತು.

ಇತ್ತೀಚಿಗಿನ ಬೆಳವಣಿಗೆಯಲ್ಲಿ ಜಮ್ಮು ಸರಕಾರದ ಹಣಕಾಸು ಸಚಿವ ಹಸೀಬ್ ದ್ರಬು ಶುಕ್ರವಾರ ಬಿಜೆಪಿ ಕಚೇರಿಗೆ ಭೇಟಿ ನೀಡಿ ಬಿಜೆಪಿ ನಾಯಕರೊಂದಿಗೆ ಚರ್ಚೆ ನಡೆಸಿ ಎರಡೂ ಪಕ್ಷಗಳ ನಡುವಣ ಭಿನ್ನಾಭಿಪ್ರಾಯ ಬಗೆಹರಿಸುವ ನಿಟ್ಟಿನಲ್ಲಿ ಮುಂದಡಿಯಿಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News