ಗೋ ರಕ್ಷಣೆಯ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ: ಯು.ಪಿ. ನೂತನ ಡಿಜಿಪಿ ಎಚ್ಚರಿಕೆ
ಲಕ್ನೋ, ಎ.22: ಗೋ ರಕ್ಷಣೆಯ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಉತ್ತರ ಪ್ರದೇಶದ ಹೊಸ ಪೊಲೀಸ್ ಮಹಾನಿರ್ದೇಶಕ ಸುಲ್ಖನ್ ಸಿಂಗ್ ಹೇಳಿದ್ದಾರೆ.
ಪೊಲೀಸ್ ಇಲಾಖೆ ಯಾವುದೇ ತಾರತಮ್ಯ ಮಾಡದೆ ಕಾರ್ಯನಿರ್ವಹಿಸುವುದಾಗಿ ಡಿಜಿಪಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ತಮ್ಮ ಪ್ರಥಮ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಂಗ್ ಜನತೆಗೆ ಆಶ್ವಾಸನೆ ನೀಡಿದ್ದಾರೆ. ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿದ ಯಾರೇ ಆದರೂ ಅವರನ್ನು ಸುಮ್ಮನೆ ಬಿಡದಿರುವಂತೆ ಮುಖ್ಯಮಂತ್ರಿ ಆದಿತ್ಯನಾಥ್ ಸ್ಪಷ್ಟ ನಿರ್ದೇಶನ ನೀಡಿದ್ದಾರೆಂದೂ ಅವರು ಹೇಳಿದರು.
‘‘ನಾವು ಭ್ರಷ್ಟಾಚಾರ ವಿಚಾರದಲ್ಲಿ ಝೀರೋ ಸಹಿಷ್ಣುತೆ ಹೊಂದಿದ್ದೇವೆ. ಕ್ರಿಮಿನಲ್ ಚಟುವಟಿಕೆಗಳಲ್ಲಿ ಯಾರಾದರೂ ನಿರತರಾಗಿರುವುದು ಕಂಡುಬಂದಲ್ಲಿ, ಅವರು ಆಡಳಿತ ಪಕ್ಷದವರೇ ಆಗಿರಲಿ ಅಥವಾ ಆಗಿಲ್ಲದಿರಲಿ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಆದಿತ್ಯಯಾಥ್ ನಮಗೆ ಆದೇಶಿಸಿದ್ದಾರೆ’’ ಎಂದು ಸಿಂಗ್ ವಿವರಿಸಿದರು.
ಆ್ಯಂಟಿ ರೋಮಿಯೋ ಪಡೆಗಳ ಬಗ್ಗೆ ಮಾತನಾಡಿದ ಅವರು, ಈ ಪಡೆಯ ಸಿಬ್ಬಂದಿ ಸಾಮಾನ್ಯ ಉಡುಪಿನಲ್ಲಿರುತ್ತಾರೆ ಹಾಗೂ ಆಕ್ಷೇಪಾರ್ಹ ನಡವಳಿಕೆ ತೋರುವವರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳುತ್ತಾರೆ ಎಂದು ಸ್ಪಷ್ಟ ಪಡಿಸಿದರು.
ಶುಕ್ರವಾರದಂದು ರಾಜ್ಯ ಸರಕಾರ ಪೊಲೀಸ್ ಇಲಾಖೆಯಲ್ಲಿ ನಡೆಸಿದ ಪ್ರಮುಖ ವರ್ಗಾವರ್ಗಿಯಲ್ಲಿ ಡಿಜಿಪಿ ಜಾವೀದ್ ಅಹ್ಮದ್ ಸಹಿತ 12 ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಿದೆ ಇವರ ಹೊರತಾಗಿ ಏಳು ಐಎಎಸ್ ಅಧಿಕಾರಿಗಳನ್ನೂ ವರ್ಗಾಯಿಸಲಾಗಿದೆ.