ಆರಾಧನಾ ತಾಣಗಳಿಗೆ ಪರಿಹಾರ : ತೀರ್ಪು ಕಾಯ್ದಿರಿಸಿದ ಸುಪ್ರೀಂ
Update: 2017-04-22 21:21 IST
ಹೊಸದಿಲ್ಲಿ,ಎ.22: ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವಲ್ಲಿ ವೈಫಲ್ಯಕ್ಕಾಗಿ ಗುಜರಾತ್ ಕೋಮು ಗಲಭೆಯಂತಹ ದಂಗೆಗಳ ಸಂದರ್ಭದಲ್ಲಿ ಹಾನಿಗೀಡಾಗಿರುವ ಆರಾಧನಾ ಸ್ಥಳಗಳಿಗೆ ಪರಿಹಾರ ಅಥವಾ ಅವುಗಳ ಪುನರ್ ನಿರ್ಮಾಣಕ್ಕೆ ಹಣಕಾಸು ಒದಗಿಸುವಂತೆ ನ್ಯಾಯಾಲಯವೊಂದು ರಾಜ್ಯಕ್ಕೆ ಆದೇಶಿಸಬಹುದೇ? ಈ ಬಗ್ಗೆ ಒಂದು ವರ್ಷ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪನ್ನು ಕಾಯ್ದಿರಿಸಿದೆ.
ಗುಜರಾತ್ ಸರಕಾರವು ಈ ಪ್ರಶ್ನೆಯನ್ನೆತ್ತಿತ್ತು. 2002ರ ಗುಜರಾತ್ ದಂಗೆಗಳಲ್ಲಿ ಇಂತಹ ಕಟ್ಟಡಗಳ ನಾಶದ ಬಳಿಕ ಈ ವಿಷಯವು ಹೆಚ್ಚಿನ ಗಮನ ಪಡೆದುಕೊಂಡಿತ್ತು.
ಗೋಧ್ರೋತ್ತರ ದಂಗೆಗಳ ಸಂದರ್ಭ ಹಾನಿಗೀಡಾದ 500ಕ್ಕೂ ಅಧಿಕ ಆರಾಧನಾ ತಾಣಗಳಿಗೆ ಪರಿಹಾರವನ್ನು ನೀಡುವಂತೆ ತನಗೆ ನಿರ್ದೇಶ ನೀಡಿರುವ ಉಚ್ಚ ನ್ಯಾಯಾಲಯದ 2012ರ ಆದೇಶವನ್ನು ಗುಜರಾತ್ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು.