ಹುತಾತ್ಮ ಯೋಧ ವೆಂಕಟ ಆತ್ಮಹತ್ಯೆ ಮಾಡಿಕೊಂಡನೆ?

Update: 2017-04-22 17:56 GMT

ಮೀನಾಕ್ಷಿ ಎದ್ದು ಜಾನಕಿಯ ಪೆಟ್ಟಿಗೆಯನ್ನು ಸಿದ್ಧಪಡಿಸತೊಡಗಿದಳು. ಅಪ್ಪಾಜಿಯ ಗಾಂಭೀರ್ಯ ಮತ್ತು ವೌನವೇ ಜಾನಕಿಗೆ ಎಲ್ಲವನ್ನೂ ತಿಳಿಸುತ್ತಿತ್ತು. ಅವಳು ಎದ್ದು ಪ್ರಯಾಣಕ್ಕೆ ಸಿದ್ಧವಾದಳು.

ಜಾನಕಿಯ ಬಟ್ಟೆ ಬರೆ, ಪುಸ್ತಕಗಳ ಪೆಟ್ಟಿಗೆಯನ್ನು ಮೀನಾಕ್ಷಿಯೇ ಕಾರಿನಲ್ಲಿಟ್ಟಳು. ಕೊನೆಯ ಬಾರಿ ಮೀನಾಕ್ಷಿಯನ್ನು ತಬ್ಬಿಕೊಂಡ ಜಾನಕಿ ಕಾರು ಹತ್ತಿದಳು. ಈಗ ಅವಳು ಅಳುತ್ತಿರಲಿಲ್ಲ. ನಿಜಕ್ಕೂ ನಡೆಯುತ್ತಿರುವುದೇನು ಎನ್ನುವುದನ್ನು ಅವಳು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಳು. ಕಾರಿನಲ್ಲಿ ತಂದೆ ಪಕ್ಕದಲ್ಲೇ ಕುಳಿತಿದ್ದರೂ ಅದರ ಗಮನ ಅವಳಿಗಿರಲಿಲ್ಲ. ಮನೆ ತಲುಪಿದಾಗ ಅಲ್ಲಿ ಅನಂತಭಟ್ಟರು ಮತ್ತು ಇನ್ನೂ ಕೆಲ ಜನರು ಜಗಲಿಯಲ್ಲಿ ಕುಳಿತಿರುವುದು ಗಮನಕ್ಕೆ ಬಂತು. ಅವರ್ಯಾರನ್ನೂ ನೋಡದೆ ನೇರ ಕೋಣೆಗೆ ತೆರಳಿದಳು. ಅವಳ ತಾಯಿ ಅವಳ ಬೆನ್ನಿಗೇ ಇದ್ದರು. ತಾಯಿಯ ಕಣ್ಣು ಅತ್ತು ಕೆಂಪಾಗಿರುವುದನ್ನು ಗಮನಿಸಿದಳು.

ಜಾನಕಿ ಏನೂ ನಡೆಯದವಳಂತೆ ‘‘ಅಮ್ಮಾ, ನಾನಿನ್ನು ಮನೆಯಲ್ಲೇ ಕುಳಿತು ಓದಿ ಪರೀಕ್ಷೆ ಬರೆಯುತ್ತೇನೆ’’ ಎಂದಳು.

‘‘ಆಯ್ತು ಕಂದಾ...’’ ಎಂದ ತಾಯಿ ಮಗಳನ್ನು ತಬ್ಬಿಕೊಂಡಳು.

ಹೊರಗಡೆ ತಂದೆಯ ಜೊತೆಗೆ ಯಾರು ಯಾರೋ ಜೋರು ದನಿಯಲ್ಲಿ ಮಾತನಾಡುತ್ತಿರುವುದು ಜಾನಕಿಯ ಗಮನಕ್ಕೆ ಬಂತು. ಆದರೆ ಅದರ ಕುರಿತು ಅವಳಿಗೆ ಆಸಕ್ತಿಯಿರಲಿಲ್ಲ. ಅವಳ ಕಣ್ಣ ಮುಂದೆ ಜಿಂಕೆಯ ಮರಿಯಂತೆ ಥರಗುಡುತ್ತಿರುವ ಮುಸ್ತಫಾನ ಚಿತ್ರ ನಿಂತಿತ್ತು. ಇದಕ್ಕೆಲ್ಲ ತಾನೇ ಕಾರಣ ಎನ್ನುವುದು ಅವಳ ಎದೆಗೆ ತೀವ್ರ ನೋವು ಕೊಟ್ಟಿತ್ತು.

ಆ ದಿನದಿಂದ ಅವಳು ಮನೆಯಲ್ಲೇ ಇದ್ದು ಓದಿನ ಕಡೆಗೆ ಗಮನ ಹರಿಸಿದಳು. ತಂದೆಯ ಜೊತೆಗೆ ಯಾವ ಮಾತುಕತೆಯೂ ಇದ್ದಿರಲಿಲ್ಲ. ತಾನಾಯಿತು, ತನ್ನ ಓದಾಯಿತು ಎಂಬಂತೆ ಇದ್ದಳು. ಈ ಮಧ್ಯೆ, ಒಮ್ಮೆ ಅನಂತಭಟ್ಟರೂ ಬಂದು ಜಾನಕಿಯ ಜೊತೆಗೆ ಕುಶಲೋಪರಿ ಮಾತನಾಡಿದರು. ಪಪ್ಪು ಸೇನೆಗೆ ಸೇರಿದ್ದನ್ನು ಹೇಳಿದರೂ ಅವಳು ಅದನ್ನು ವಿಶೇಷ ಆಸ್ಥೆಯಿಂದ ತೆಗೆದುಕೊಳ್ಳಲಿಲ್ಲ.

ತುಸು ಮಾತನಾಡಿದವಳು ‘‘ನನಗೆ ಓದುವುದಕ್ಕೆ ಇದೆ...’’ ಎಂದು ಕೋಣೆ ಸೇರಿದಳು. ತಾಯಿ ಬಲವಂತವಾಗಿ ಹೊತ್ತು ಹೊತ್ತಿಗೆ ತುತ್ತು ಉಣಿಸುತ್ತಿದ್ದರು.
ಕೊನೆಗೂ ಪರೀಕ್ಷೆ ಬಂದೇ ಬಿಟ್ಟಿತು. ತಂದೆಯ ಕಾರಿನಲ್ಲೇ ಪರೀಕ್ಷೆಗೆ ಹಾಜರಾಗುವುದು. ವಾಪಸಾಗು ವುದು ನಡೆಯುತ್ತಿತ್ತು. ಪರೀಕ್ಷೆ ಮುಗಿದದ್ದೇ, ಅದ್ಯಾವುದೋ ಪುಸ್ತಕವನ್ನು ಕೈಗೆತ್ತಿಕೊಂಡು ಕೋಣೆ ಸೇರಿ ಬಿಟ್ಟಿದ್ದಳು. ಯಾರು ಆಕೆಯನ್ನು ಮಾತನಾಡಿಸಲು ಬಂದರೂ ಅವರ ಕುರಿತಂತೆ ವಿಶೇಷ ಆಸಕ್ತಿ ವಹಿಸದೆ ಕಳುಹಿಸಿ ಬಿಡುತ್ತಿದ್ದಳು.

ಪರೀಕ್ಷೆ ನಡೆದ ಒಂದೂವರೆ ತಿಂಗಳಲ್ಲಿ ಫಲಿತಾಂಶ ಹೊರಬಿತ್ತು.ಫಲಿತಾಂಶ ನೋಡುವುದಕ್ಕೆಂದು ಕಾಲೇಜಿಗೆ ಹೋಗಿದ್ದ ಗುರೂಜಿ ಅವಮಾನದಿಂದ ಮರಳಿದ್ದರು. ಜಾನಕಿ ಎರಡು ವಿಷಯಗಳಲ್ಲಿ ಅನುತ್ತೀರ್ಣಳಾಗಿದ್ದಳು!

***

ಸೇನಾ ಶಿಬಿರದಲ್ಲಿ ಹೆಚ್ಚಿನ ಗೆಳೆಯರು ಒಬ್ಬೊಬ್ಬರಾಗಿ ತರಬೇತಿ ಮುಗಿಸಿ ಮನೆಯ ಕಡೆಗೆ ಪ್ರಯಾಣ ಹೊರಟಿದ್ದರೂ, ಪಪ್ಪುವಿಗೆ ತನ್ನ ಗುರಿಯನ್ನು ತಲುಪುವುದಕ್ಕೆ ಸಾಧ್ಯವಾಗಿರಲಿಲ್ಲ. ತರಬೇತಿಯಾದ ಬಳಿಕ ರೆಜಿಮೆಂಟ್ ಸೇರುವುದಕ್ಕೆ ಮುನ್ನ ಸುಮಾರು ಎರಡು ತಿಂಗಳು ರಜೆಯನ್ನು ನೀಡಲಾಗುತ್ತದೆ. ಆದರೆ ತನ್ನ ತರಬೇತಿಯಲ್ಲಿ ಉತ್ತೀರ್ಣನಾಗದೆ ಈ ರಜೆಯನ್ನು ಪಡೆಯುವಂತಿಲ್ಲ. ಆತನ ರಜೆಯೆಲ್ಲ ಇದರಿಂದ ವ್ಯರ್ಥವಾಗಿ ಹೋಗುತ್ತಿತ್ತು. ರಜೆ ಮುಗಿಯಲು ಹತ್ತು ದಿನವಿರುವಾಗ ಆತ ತನ್ನ ಗುರಿಯನ್ನು ಮುಗಿಸಿದ. ಬಹುಶಃ ಶಿಬಿರಾರ್ಥಿಗಳಲ್ಲಿ ಉತ್ತೀರ್ಣನಾಗಲು ಅತಿ ಹೆಚ್ಚು ಸಮಯ ತೆಗೆದುಕೊಂಡಿರುವುದು ಪಪ್ಪು ಮಾತ್ರ. ಬರೀ ಹತ್ತು ದಿನಗಳ ರಜೆಯಲ್ಲಿ ಮನೆಗೆ ತೆರಳಿ ಮತ್ತೆ ವಾಪಾಸಾಗುವಂತಹ ಸನ್ನಿವೇಶ ಅವನಿಗೆ ಎದುರಾಯಿತು. ರಜೆ ಮುಗಿಸಿ ಎಲ್ಲರೂ ಮತ್ತೆ ಒಟ್ಟು ಸೇರಿದ ರಾತ್ರಿ ಅಪ್ಪಯ್ಯ ಮತ್ತು ಪಪ್ಪು ಇಬ್ಬರೇ ತಮ್ಮ ಕೊಠಡಿಯಲ್ಲಿ ಮಾತನಾಡುತ್ತಾ ಇದ್ದರು. ಅವರ ಮಧ್ಯೆ ಮೇಣದ ದೀಪ ಮಂದವಾಗಿ ಉರಿಯುತ್ತಿತ್ತು.

ಅಪ್ಪಯ್ಯ ಪಪ್ಪುವಿನ ಬಳಿ ಮೊದಲು ಕೇಳಿದ ಪ್ರಶ್ನೆ ‘‘ಜಾನಕಿಯನ್ನು ಭೇಟಿಯಾದೆಯಾ?’’
ಪಪ್ಪು ವೌನವಾಗಿದ್ದ.

‘‘ಯಾಕೆ...ಈ ಬಾರಿಯೂ ನಿನ್ನ ಪ್ರೇಮ ಪತ್ರವನ್ನು ಕೊಡಲೇ ಇಲ್ವೇ?’’

‘‘ಇಲ್ಲ. ಆಕೆ ಮಂಗಳೂರಿನಲ್ಲಿ ಬಿಎಸ್‌ಡಬ್ಲೂ ಓದುತ್ತಿದ್ದಾಳಂತೆ...ಮನೆಗೆ ಬರುವುದೇ ಅಪರೂಪವಂತೆ...ಗುರೂಜಿಯವರ ಮನೆಗೆ ಭೇಟಿ ನೀಡಿದ್ದೆ. ಅವರು ಮಾತನಾಡಲು ಸಿಕ್ಕಿದರು. ಅವರು ನನ್ನ ಕುರಿತಂತೆ ತುಂಬಾ ಅಭಿಮಾನದಿಂದ ಮಾತನಾಡಿ ದರು. ನಾನು ಹೋದ ದಾರಿಯನ್ನು ಬೇರೆಯವರು ಆಯ್ದುಕೊಳ್ಳುವುದು ಕಷ್ಟ ಎಂದರು. ನನ್ನ ಬಗ್ಗೆ ತುಂಬಾ ತುಂಬಾ ಅಭಿಮಾನ ವ್ಯಕ್ತಪಡಿಸಿದರು....’’

‘‘ಬರೇ ಭಾವೀ ಮಾವನ ಜೊತೆ ಮಾತನಾಡಿದರೆ ಕೆಲಸ ಆಗುವುದಿಲ್ಲ....ನೀನು ಜಾನಕಿಗೆ ಪತ್ರವನ್ನು ಕೊಡುವುದೇ ಇಲ್ಲವೆ...?’’

‘‘ಅದಕ್ಕೆಲ್ಲ ಸಮಯ ಸಂದರ್ಭ ಬರಬೇಕು...ನೀನು ಕೊಡಗಿಗೆ ಹೋಗಿದ್ದೆಯಲ್ಲ...ಊರಲ್ಲಿ ಏನು ವಿಶೇಷ....?’’

‘‘ನನ್ನ ಸೋದರ ಮಾವಂದಿರಿಬ್ಬರೂ ಸೇನೆಯಲ್ಲಿ ಕೆಲಸ ಮಾಡಿದವರು... ಅವರ ಮನೆಯಲ್ಲೇ ಎಲ್ಲ ರಜೆಯನ್ನು ಕಳೆದೆ...ಅಂದ ಹಾಗೆ ಅವರಿಗೆ ನಿನ್ನ ಊರಿನ ಯೋಧ ವೆಂಕಟನ ಬಗ್ಗೆ ಗೊತ್ತು....’’

ಪಪ್ಪು ಒಮ್ಮೆಲೆ ಎದ್ದು ಕುಳಿತ. ‘‘ಹೌದೇ...ಕಾರ್ಗಿಲ್‌ನಲ್ಲಿ ವೆಂಕಟ್ ಜೊತೆಗೆ ನಿನ್ನ ಸೋದರ ಮಾವಂದಿರೂ ಇದ್ದರೇ? ನಿನಗೆ ಗೊತ್ತಾ... ಪಾಕಿಗಳು ಅವನ ಬೆನ್ನಿಗೆ 25 ಗುಂಡುಗಳನ್ನು ಹಾರಿಸಿದ್ದರಂತೆ...ಅವನ ಮೃತದೇಹಕ್ಕೆ ನಾನೂ ಗೌರವ ಸಲ್ಲಿಸಿದ್ದೆ....’’

ಅಪ್ಪಯ್ಯ ಯಾಕೋ ಮೌನವಾದ.

‘‘ವೆಂಕಟನ ಬಗ್ಗೆ ನಿನ್ನ ಮಾವಂದಿರು ಏನು ಹೇಳಿದರು. ನನಗೂ ಆ ಕತೆಯನ್ನು ಸ್ವಲ್ಪ ವಿವರಿಸು...’’ ಪಪ್ಪು ಕುತೂಹಲದಿಂದ ಕೇಳಿದ.
‘‘ಪಪ್ಪು ಎಲ್ಲವೂ ನಾವು ಎನಿಸಿದಂತೆ ಇರುವುದಿಲ್ಲ....ಇದನ್ನು ನಾವು ಮುಂದೆ ಅರ್ಥ ಮಾಡ್ಕೋಬೇಕಾಗತ್ತೆ....’’ ಅಪ್ಪಯ್ಯನ ಧ್ವನಿ ಯಾಕೋ ಸಣ್ಣಗೆ ಕಂಪಿಸಿತ್ತು.

ಪಪ್ಪು ಅರ್ಥವಾಗದೇ ಅಪ್ಪಯ್ಯನ ಮುಖವನ್ನೇ ನೋಡಿದ.

‘‘ವೆಂಕಟ ಸತ್ತದ್ದು ಕಾರ್ಗಿಲ್ ಯುದ್ಧದಲ್ಲಿ ಅಲ್ಲ ಎಂದರು ನನ್ನ ಮಾವ...’’

ಅವರಿಬ್ಬರ ನಡುವೆ ಉರಿಯುತ್ತಿದ್ದ ಮೊಂಬತ್ತಿ ಗಾಳಿಗೆ ಕೊಸರಾಡುವುದನ್ನು ಒಮ್ಮೆಲೆ ನಿಲ್ಲಿಸಿತ್ತು.

ಪಪ್ಪು ಆ ದೀಪದ ಮಂದ ಬೆಳಕಲ್ಲಿ ಅಪ್ಪಯ್ಯನ ಮುಖವನ್ನು ಸ್ಪಷ್ಟವಾಗಿ ಓದಲು ಯತ್ನಿಸುತ್ತಿದ್ದ.

‘‘ವೆಂಕಟ ಕಾರ್ಗಿಲ್ ಯುದ್ಧ ಭೂಮಿಗೆ ಹೋಗಿ ಸತ್ತದ್ದಲ್ಲ...ಅವನು ತನ್ನ ಯುನಿಟ್‌ನ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಂತೆ...’’

ಪಪ್ಪು ರೆಪ್ಪೆಯಲುಗಿಸದೇ ಅಪ್ಪಯ್ಯನ ಕಡೆ ನೋಡುತ್ತಿದ್ದ. ಕೋವಿಯ ಗುಂಡೊಂದು ತನ್ನ ಕಿವಿಯ ಸಮೀಪದಿಂದ ಹಾದು ಹೋಯಿತೋ ಎಂಬಂತೆ ಅವನು ಗರಬಡಿದಿದ್ದ.

‘‘ಯಾವುದೂ ಸರಿಯಾಗಿ ಗೊತ್ತಿಲ್ಲ. ಆದರೆ ವೆಂಕಟ ಯುದ್ಧದಲ್ಲಿ ಸತ್ತದ್ದಲ್ಲ, ಆತ್ಮಹತ್ಯೆ ಮಾಡಿಕೊಂಡಿದ್ದು ಎಂದು ನನ್ನ ಮಾವನ ಸಹೋದ್ಯೋಗಿಗಳು ಪರಸ್ಪರ ಆಡಿಕೊಳ್ಳುತ್ತಿದ್ದರಂತೆ...’’

‘‘ಸುಳ್ಳು...ಅವನು ಕಾರ್ಗಿಲ್‌ನಲ್ಲಿ ಪಾಕಿಸ್ತಾನದ ಪಾಪಿಗಳ ಕೈಯಿಂದ ಹತನಾಗಿದ್ದ. ಆತನ ಬೆನ್ನಿನಲ್ಲಿ 25 ಗುಂಡಿನ ಗಾಯಗಳಿದ್ದುದು ನಾನೇ ನೋಡಿದ್ದೆ...’’ ನಡುಗುವ ಸ್ವರದಿಂದ ಅಪ್ಪಯ್ಯನ ಮಾತನ್ನು ಪಪ್ಪು ಅಲ್ಲಗಳೆದ.

‘‘ಅದೇನೋ ಗೊತ್ತಿಲ್ಲ. ವೆಂಕಟ ಸೇನೆಗೆ ಸೇರಿದ್ದು ಚಪ್ಪಲಿ ಕೆಲಸಕ್ಕಂತೆ. ಅಂದರೆ ಸೇನೆಯ ಬೂಟುಗಳನ್ನು ಸರಿಪಡಿಸುವುದು, ಹೊಲಿಯುವುದು, ಪಾಲಿಶ್ ಮಾಡಿಕೊಡುವುದು...ಇತ್ಯಾದಿ ಕೆಲಸ. ಹಾಗೆ ಸೇರಿಯೇ ಅವನು ಪ್ರಮೋಶನ್ ಪಡೆದು ಜವಾನ ಆದುದಂತೆ...’’

ಅಪ್ಪಯ್ಯ ಹೇಳುತ್ತಿದ್ದರೆ ಪಪ್ಪು ಬಾಯಗಲಿಸಿ ಕೇಳುತ್ತಿದ್ದ. ‘‘ವೆಂಕಟನದು ಕೆಳ ಜಾತಿ...’’ ಅಪ್ಪಯ್ಯ ಹೇಳಿದ.

‘‘ಸೇನೆ ಎಂದ ಮೇಲೆ ಎಲ್ಲರೂ ಭಾರತಮಾತೆಯ ಮಕ್ಕಳಲ್ಲವೇ? ನಮ್ಮದೆಲ್ಲ ಒಂದೇ ಜಾತಿಯಲವೇ?’’ ಪಪ್ಪು ಗೊಂದಲದಿಂದ ಕೇಳಿದ.

‘‘ನಿನಗದೆಲ್ಲ ಮುಂದೆ ಅರ್ಥವಾಗತ್ತೆ. ವೆಂಕಟ ಮಾದಿಗರ ಜಾತಿಗೆ ಸೇರಿದ್ದನಂತೆ. ಎಲ್ಲರೂ ಅವನನ್ನು ದೂರ ಇಡುತ್ತಿದ್ದರಂತೆ....ಒಮ್ಮೆ ತಪ್ಪಿ ಹಿರಿಯ ಅಧಿಕಾರಿಯ ಕೋಣೆಗೆ ಕಾಲಿಟ್ಟನಂತೆ....ಹವಾಲ್ದಾರ್ ಕುಡಿದಿದ್ದ. ವೆಂಕಟ ತನ್ನ ಕೋಣೆ ಪ್ರವೇಶಿಸಿದ್ದು ಕಂಡು ಎಲ್ಲರೆದುರು ಆತನಿಗೆ ಚಪ್ಪಲಿಯಲ್ಲಿ ಥಳಿಸಿದನಂತೆ....ಅವನು ಅಂದು ರಾತ್ರಿ ಕೋಣೆಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡನಂತೆ...ಎಲ್ಲ ಅಂತೆ ಕಂತೆ....ನಿಜ ಇರಬೇಕು ಎಂದಿಲ್ಲ...’’
‘‘ಎಲ್ಲ ಅಂತೆ ಕಂತೆ. ನೀನೂ ಅದನ್ನೆಲ್ಲ ನಂಬಬೇಡ. ವೆಂಕಟ ನಮ್ಮ ಊರಿನ ವೀರ ಯೋಧ...’’ ಅಪ್ಪು ದೊಡ್ಡ ಧ್ವನಿಯಲ್ಲಿ ಹೇಳಿದ.
‘‘ಮೆಲ್ಲ ಮಾತನಾಡು...’’ ಅಪ್ಪಯ್ಯ ಧ್ವನಿ ಇಳಿಸಿ ಹೇಳಿದ.

ಪಪ್ಪು ಹಾಗೆಯೇ ವೌನವಾಗಿ ತನ್ನ ದಿಂಬಿಗೆ ಒರಗಿದ. ಪಪ್ಪು ರಾತ್ರಿಯಿಡೀ ನಿದ್ದೆಯಿಲ್ಲದ ಹೊರಳಾಡಿದ. ಅವನ ಭಾವ ಪ್ರಪಂಚದ ಮೇಲೆ ಎರಗಿದ ಕ್ಷಿಪಣಿಯಾಗಿತ್ತು ಅದು. ಸುಳ್ಳೇ ಇರಬಹುದು...ಆದರೆ ಅವನೊಳಗೆ ಅದು ಗಾಯ ಮಾಡಿಯೇ ಬಿಟ್ಟಿತ್ತು. ಪಪ್ಪುವಿನ ಕಣ್ಣಂಚಲ್ಲಿ ಸಣ್ಣದೊಂದು ಹನಿ ಒಸರಿತು.
ಅಪ್ಪಯ್ಯನ ಮಾತುಗಳ ಗುಂಗಿನಿಂದ ಹೊರ ಬರುವುದು ಪಪ್ಪುವಿಗೆ ಅಷ್ಟು ಸುಲಭವಿರಲಿಲ್ಲ. ಅದು ರಕ್ತದಂತೆ ಒಸರುತ್ತಲೇ ಇತ್ತು ಅವನೊಳಗೆ. ತಾನು ಸೇನೆ ಸೇರುವುದಕ್ಕೆ ಸ್ಫೂರ್ತಿಯಾಗಿದ್ದ, ತನ್ನ ಮತ್ತು ಜಾನಕಿಯ ಬೆಸುಗೆಯನ್ನು ಇನ್ನಷ್ಟು ಗಟ್ಟಿಗೊಳಿಸಿದ್ದ ವೆಂಕಟನ ಸಾವನ್ನು ನಿಕೃಷ್ಟವಾಗಿ ಕಾಣುವುದು ಪಪ್ಪು ವಿನಿಂದ ಸಾಧ್ಯವಿರಲಿಲ್ಲ. ಮರುದಿನದ ತರಬೇತಿಗೆ ಸಿದ್ಧಗೊಳ್ಳುವಾಗಲೂ ಅವನನ್ನು ವೆಂಕಟನೇ ಆವರಿಸಿಕೊಂಡಿದ್ದ.

ಮಧ್ಯಾಹ್ನ ಅಡುಗೆ ಮನೆಯ ಹಂಡೆಯಲ್ಲಿ ಮಾಂಸದ ಸಾರು ಕುದಿಯುತ್ತಿತ್ತು. ಪಪ್ಪು ಅದಕ್ಕೆ ದೊಡ್ಡ ಸೌಟೊಂದನ್ನು ಹಾಕಿ ತಿರುವುತ್ತಿದ್ದ. ಹವಾಲ್ದಾರ್ ವಹಿಸಿಕೊಟ್ಟ ಕೆಲಸ ಅದು. ಅವನ ಎದೆಯೂ ಮಾಂಸದ ಸಾರಿನ ಕಡಾಯಿಯಂತೆ ಕುದಿಯುತ್ತಿತ್ತು.

(ಗುರುವಾರದ ಸಂಚಿಕೆಗೆ) 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News