ನೋಡುಗರ ಮೀಟುವ ರಾಗ

Update: 2017-04-22 18:45 GMT

ಕಣ್ಣು ಇಲ್ದೇ ಇದ್ರೂ ಬದುಕಿಬಿಡಬಹುದು. ಆದರೆ ಹೃದಯ ಇಲ್ದೇ ಇರೋರ ಜತೆ ಬದುಕೋಕೆ ಆಗಲ್ಲ - ಹಾಗನ್ನುತ್ತಾ ಕಥಾ ನಾಯಕ ಮಿತ್ರ ಆಗಷ್ಟೇ ಜಗತ್ತನ್ನು ನೋಡಿದ ತನ್ನ ಕಣ್ಗಳಿಗೆ ಬೆಂಕಿ ಕೊಡುತ್ತಾನೆ! ಅಂಧನಾಗಿ ತನ್ನ ಒಳಗಣ್ಣಿಗೆ ದಕ್ಕಿದ ಸುಂದರ ಜಗತ್ತೇ ಕೊನೆಗೆ ಅವನಿಗೆ ಪ್ರಿಯವಾಗುತ್ತದೆ. ನೋವು, ವಿಷಾದದ ಜೊತೆ ಅಪಾರ ಜೀವನೋತ್ಸಾಹದೊಂದಿಗೆ ಆತ ಕತ್ತಲೆಯ ಜಗತ್ತನ್ನು ಮರಳಿ ಪ್ರವೇಶಿಸುತ್ತಾನೆ.

ತನ್ನವರೆನ್ನುವ ಯಾರೂ ಇಲ್ಲದ ಅಂಧ ಯುವಕ ಮಿತ್ರನಿಗೆ ಜಗತ್ತೇ ತನ್ನದೆನ್ನುವ ಆತ್ಮವಿಶ್ವಾಸ. ‘‘ಚಿಕ್ಕದು ಎಂದು ಭಾವಿಸುವವರಿಗೆ ಜಗತ್ತು ಚಿಕ್ಕದಾಗೇ ಕಾಣಿಸುತ್ತೆ. ಅನುಭವಿಸೋರಿಗೆ ಅದು ದೊಡ್ಡದು’’ ಎನ್ನುವ ಭಾವ ಆತನದ್ದು. ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಾ ಬದುಕುವ ನೀತಿ ಹೇಳುವ ಮಿತ್ರನ ಬದುಕಿಗೆ ಅಂಧ ಯುವತಿ ಅನು ಪ್ರವೇಶ ವಾಗುತ್ತದೆ. ‘‘ನಮಗೆ ಒಬ್ಬರನ್ನು ನಗಿಸೋ ಹಕ್ಕು ಇದೆ. ಆದರೆ ನೋಯಿಸೋಕೆ ಅಧಿಕಾರ ಇಲ್ಲ’’ ಎನ್ನುವ ಒಳ್ಳೆಯ ಮನಸ್ಸಿನ ಮಿತ್ರನಿಂದಾಗಿ ಅನು ಬದುಕು ಹೂವಾಗುತ್ತದೆ. ಇವರಿಬ್ಬರ ಪ್ರೀತಿಯ ಕತೆ, ತಲ್ಲಣಗಳೇ ‘ರಾಗ’ದ ಕಥಾವಸ್ತು.

ನಿರ್ದೇಶಕ ಪಿ.ಸಿ.ಶೇಖರ್ ‘ರಾಗ’ ಸಿನೆಮಾ ನಿರ್ದೇಶಿಸುವುದಕ್ಕೆ ಮುನ್ನ ಸಾಕಷ್ಟು ಹೋಂವರ್ಕ್ ಮಾಡಿರುವುದು ಚಿತ್ರದುದ್ದಕ್ಕೂ ಕಾಣಿಸುತ್ತದೆ. ಚಿತ್ರದ ಯಾವುದೇ ಸನ್ನಿವೇಶವೂ ಚಿತ್ರಕಥೆಯಿಂದ ಹೊರತಾಗಿಲ್ಲ ಎನ್ನುವುದು ಇದಕ್ಕೆ ಸಾಕ್ಷಿ. ಪ್ರತೀ ಸನ್ನಿವೇಶವೂ ಒಂದು ಸುಂದರ ಪೇಂಟಿಂಗ್‌ನಂತಿರಬೇಕೆಂದೇ ಅವರು ತಯಾರಿ ನಡೆಸಿದ್ದಾರೆ. ಅವರ ಆಶಯಗಳಿಗೆ ವೈದಿ ಅವರ ಛಾಯಾಗ್ರಹಣ ಪೂರಕವಾಗಿದೆ. ಮನಸಿಗೆ ಆಹ್ಲಾದವೆನಿಸುವ ಒಂದು ಸುಂದರ ಕನಸಿನಂತೆ ವೈದಿ ಪ್ರತೀ ಫ್ರೇಮ್ ಕಟ್ಟಿಕೊಟ್ಟಿದ್ದಾರೆ. ಅರ್ಜುನ್ ಜನ್ಯ ಉತ್ತಮ ಸಂಗೀತ ಸಂಯೋಜನೆಯೊಂದಿಗೆ ಇವರಿಬ್ಬರ ಶ್ರಮಕ್ಕೆ ಸಾಥ್ ನೀಡಿದ್ದಾರೆ.

ಹಾಗೆ ನೋಡಿದರೆ ಇದೊಂದು ಬೇರೆ ರೀತಿಯದ್ದೇ ಸಿನೆಮಾ. ಚಿತ್ರದಲ್ಲಿನ ಪೇಂಟಿಂಗ್‌ನಂತಹ ಸೀನ್‌ಗಳು ಅವಾಸ್ತವಿಕ ಎನಿಸುತ್ತವೆ. ಗಾಢ ವರ್ಣದ ಸೆಟ್‌ಗಳು, ಹಿನ್ನೆಲೆಯಲ್ಲಿ ಆವರಿಸಿಕೊಳ್ಳುವ ಮಂಜು ಕತೆಗೆ ಅತಿಭಾವುಕತೆಯ ಚೌಕಟ್ಟು ನೀಡುತ್ತವೆ. ಇದು ಕೆಲವೊಮ್ಮೆ ಚಿತ್ರದ ಮಿತಿ ಅನಿಸುವುದಿದೆ. ಆದರೆ ನಿರ್ದೇಶಕರು ಪ್ರಜ್ಞಾಪೂರ್ವಕವಾಗಿಯೇ ಇಂತಹ ಸನ್ನಿವೇಶಗಳನ್ನು ಮತ್ತಷ್ಟು ಚೆಂದಗಾಣಿಸಲು ಯತ್ನಿಸಿದ್ದಾರೆ. ಹೀಗೆ, ಮಿತಿಗಳ ಮಧ್ಯೆಯೂ ವೀಕ್ಷಕರನ್ನು ಒಳಗೊಳ್ಳುವುದು ‘ರಾಗ’ದ ವೈಶಿಷ್ಟ್ಯ.

ನಟನೆಗೆ ಸಂಬಂಧಿಸಿದಂತೆ ಹೇಳುವುದಾದರೆ ನಾಯಕ ಮಿತ್ರ ಮತ್ತು ನಾಯಕಿ ಭಾಮಾ ಸ್ಪರ್ಧೆಗೆ ಬಿದ್ದಂತೆ ಅಭಿನಯಿಸಿದ್ದಾರೆ. ಹಾಸ್ಯ ಪಾತ್ರಗಳಲ್ಲಿ ಮಿಂಚುತ್ತಿದ್ದ ಮಿತ್ರ ಇಲ್ಲಿ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸುತ್ತಾರೆ. ಬದುಕನ್ನು ಅಗಾಧವಾಗಿ ಪ್ರೀತಿಸುವ ಅಂಧ ಯುವಕನಾಗಿ ಅವರದ್ದು ಆಪ್ತ ಅಭಿವ್ಯಕ್ತಿ. ಪೋಷಕ ಪಾತ್ರಗಳಲ್ಲಿ ಅವಿನಾಶ್ ಮತ್ತು ರಮೇಶ್ ಭಟ್ ಇಷ್ಟವಾಗುತ್ತಾರೆ. ‘‘ಕಾರಿನಲ್ಲಿ ಹೋದರೆ ಪ್ರಪಂಚ ನಮ್ಮನ್ನು ನೋಡುತ್ತೆ, ಕಾಲ್ನಡಿಗೆಯಲ್ಲಿ ಹೋದರೆ ಪ್ರಪಂಚವನ್ನು ನಾವು ನೋಡ್ಬಹುದು’’, ‘‘ಸೌಂದರ್ಯ ಆಸೆಯನ್ನು ತಟ್ಟುತ್ತೆ, ಅಭಿಮಾನ ಮನಸನ್ನು ಮುಟ್ಟುತ್ತೆ’’... ಹೀಗೆ ಸರಳ ವಾಕ್ಯಗಳಲ್ಲಿ ಸಚಿನ್ ಹೊಲಗುಂದಿ ಬರೆದಿರುವ ಸಂಭಾಷಣೆ ಮನಸ್ಸು ಮುಟ್ಟುತ್ತವೆ.

Writer - ಶಶಿಧರ್ ಚಿತ್ರದುರ್ಗ

contributor

Editor - ಶಶಿಧರ್ ಚಿತ್ರದುರ್ಗ

contributor

Similar News