ಸೇನಾಧಿಕಾರಿಗಳ ವಾರ್ಷಿಕ ಅಧಿವೇಶನ : ಸೇನಾಪಡೆಯ ಆಧುನೀಕರಣಕ್ಕೆ ಒತ್ತು ನೀಡಲು ನಿರ್ಧಾರ

Update: 2017-04-23 15:14 GMT

ಹೊಸದಿಲ್ಲಿ, ಎ.23: ದೇಶದ ಭದ್ರತಾ ವ್ಯವಸ್ಥೆಗೆ ಎದುರಾಗಿರುವ ಬಾಹ್ಯ ಮತ್ತು ಆಂತರಿಕ ಸವಾಲುಗಳ ಕುರಿತು ಕೂಲಂಕುಷ ವಿಶ್ಲೇಷಣೆ ನಡೆಸಿದ ಸೇನೆಯ ಉನ್ನತ ಅಧಿಕಾರಿಗಳು ಸೇನಾ ಪಡೆಯ ಆಧುನೀಕರಣಕ್ಕೆ ಒತ್ತು ನೀಡಲು ಮತ್ತು ದೇಶದ ಭದ್ರತೆಗೆ ಎದುರಾಗುವ ಗಂಭೀರವಾದ ಸವಾಲುಗಳನ್ನು ನಿಭಾಯಿಸಲು ತ್ರಿವಳಿ ಕಾರ್ಯ ವಿಧಾನದ ಸಿದ್ದಾಂತ ಸೂಕ್ತ ಎಂದು ಸಲಹೆ ನೀಡಿದ್ದಾರೆ.

ದಿಲ್ಲಿಯಲ್ಲಿ ನಡೆದ ಸೇನಾ ಪಡೆಯ ಕಮಾಂಡರ್‌ಗಳ ವಾರ್ಷಿಕ ಅಧಿವೇಶನದಲ್ಲಿ ಮಾತನಾಡಿದ ಸೇನಾಪಡೆಯ ಮುಖ್ಯಸ್ಥ ಬಿಪಿನ್ ರಾವತ್, ‘ಸಹಭಾಗಿ’ ಕಾರ್ಯನೀತಿಯಿಂದ ಮಾನವ ಸಂಪನ್ಮೂಲದ ಸದ್ಬಳಕೆ ಸಾಧ್ಯ ಎಂದರು. ಸೇನೆಯ ಯುದ್ಧ ಸಾಮರ್ಥ್ಯ ಹೆಚ್ಚಿಸಲು ಮೂರು ಪಡೆಗಳ ಸಹಭಾಗಿತ್ವದ ಜೊತೆಗೆ ವಾಯುಪಡೆಯ ಸಾಮರ್ಥ್ಯ ವರ್ಧಿಸುವ ಬಗ್ಗೆ ಹೆಚ್ಚಿನ ಆದ್ಯತೆ ಅಗತ್ಯ ಎಂದವರು ನುಡಿದರು. ಬದಲಾಗುತ್ತಿರುವ ಬಾಹ್ಯ ಮತ್ತು ಆಂತರಿಕ ಸನ್ನಿವೇಶಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ಸೇನೆಯ ಸಾಮರ್ಥ್ಯದ ಬಗ್ಗೆ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಅರ್ಹತೆಯಿದ್ದರೂ ಶೇ.50ಕ್ಕೂ ಹೆಚ್ಚಿನ ಸಿಬ್ಬಂದಿಗೆ ಬಡ್ತಿ ದೊರೆಯದಿರುವ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲಾಯಿತು ಮತ್ತು ಬಡ್ತಿಯ ವಿಷಯದಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಸಮಾನತೆಯ ನೀತಿ ಅಳವಡಿಸಿಕೊಳ್ಳಲು ನಿರ್ಧರಿಸಲಾಯಿತು. ಸೇನಾ ಪಡೆಗಳ ಆಧುನೀಕರಣಕ್ಕೆ ಒತ್ತು ನೀಡಲಾಯಿತು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News