ಸೆನ್ ಕುಮಾರ್ ಗೆ ಮತ್ತೆ ಕೇರಳ ಡಿಜಿಪಿ ಪಟ್ಟ ನೀಡಲು ಸುಪ್ರೀಂ ಹುಕುಂ

Update: 2017-04-24 06:40 GMT

ಹೊಸದಿಲ್ಲಿ, ಎ.24: ಮಾಜಿ ಡಿಜಿಪಿ ಟಿ.ಪಿ.ಸೆನ್ ಕುಮಾರ್ ಅವರನ್ನು ಕೇರಳದ ಪೊಲೀಸ್‌ ಮಹಾ ನಿರ್ದೇಶಕರಾಗಿ ನೇಮಕ ಗೊಳಿಸುವಂತೆ ಸುಪ್ರಿಂ ಕೋರ್ಟ್‌ ಇಂದು ರಾಜ್ಯ ಸರಕಾರಕ್ಕೆ ಆದೇಶ ನೀಡಿದೆ.
ನ್ಯಾಯಮೂರ್ತಿ ಮದನ್ ಬಿ.ಲೋಕುರ್ ಮತ್ತು ನ್ಯಾಯಮೂರ್ತಿ ದೀಪಕ್‌ ಗುಪ್ತಾ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯ ಪೀಠ ದೇಶದ ಇತಿಹಾಸದಲ್ಲೇ  ಮೊದಲ ಬಾರಿ ಇಂತಹ ತೀರ್ಪು ನೀಡಿದ್ದು, ರಾಜಕಾರಣಿಗಳು ತಮಗಿರುವ ಅಧಿಕಾರವನ್ನು ಬಳಸಿ  ಪೊಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಇದರೊಂದಿಗೆ ಸ್ಪಷ್ಟ ಸಂದೇಶ ರವಾನಿಸಿದೆ.
ಕೇರಳದಲ್ಲಿ ಮುಖ್ಯ ಮಂತ್ರಿ ಪಿನರಾಯಿ ವಿಜಯನ್‌ ನೇತೃತ್ವದ ಎಲ್ ಡಿಎಫ್ ಸರಕಾರ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಟಿ.ಪಿ.ಸೆನ್ ಕುಮಾರ‍್ ಅವರನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಹುದ್ದೆಯಿಂದ ಕೆಳಗಿಳಿಸಿ ಲೋಕನಾಥ್ ಬೆಹಾರ ಅವರನ್ನು ನೂತನ ಡಿಜಿಪಿಯಾಗಿ ನೇಮಕ ಮಾಡಲಾಗಿತ್ತು.
ರಾಜ್ಯಸರಕಾರದ ಈ ನಿರ್ಧಾರವನ್ನು ಟಿ.ಪಿ.ಸೆನ್ ಕುಮಾರ‍್  ಅವರು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (CAT)ಯಲ್ಲಿ ಪ್ರಶ್ನಿಸಿದ್ದರು. ಆದರೆ ಅವರಿಗೆ ಅಲ್ಲಿ ನ್ಯಾಯ ದೊರೆಯಲಿಲ್ಲ. ಇದಕ್ಕಾಗಿ ಅವರು ಸುಪ್ರೀಂ ಕೋರ್ಟ್‌‌ನ ಮೆಟ್ಟಿಲೇರಿದ್ದರು. ಸುಪ್ರೀಂ ಕೋರ್ಟ್‌‌ನಲ್ಲಿ  ಟಿ.ಪಿ.ಸೆನ್ ಕುಮಾರ್ ರಾಜ್ಯ ಸರಕಾರದ ವಿರುದ್ಧ  ಕಾನೂನು ಸಮರದಲ್ಲಿ ಜಯ ಗಳಿಸಿದ್ದಾರೆ.
ಪುಟ್ಟಿಂಗಲ್‌ ಅಗ್ನಿ ದುರಂತ ಪ್ರಕರಣ ಮತ್ತು ಪೆರುಂಬಾವೂರ್‌ ನಲ್ಲಿ ದಲಿತ ಕಾನೂನು ಕಾಲೇಜು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿ ಆಕೆಯನ್ನು ಕೊಲೆಗೈದ ಪ್ರಕರಣದ ಬಗ್ಗೆ ತೃಪ್ತಿಕರ ತನಿಖೆ ನಡೆಸಿಲ್ಲ ಎಂಬ ಆರೋಪದಲ್ಲಿ ಟಿ.ಪಿ.ಸೆನ್ ಕುಮಾರ್ ಅವರನ್ನು ಕೇರಳದ ಆಡಳಿತಾರೂಢ ಎಡರಂಗದ  ಸರಕಾರ ಡಿಜಿಪಿ ಹುದ್ದೆಯಿಂದ ಕೆಳಗಿಳಿಸಿತ್ತು.

ಟಿ.ಪಿ.ಸೆನ್ ಕುಮಾರ್ ಪರ ಸುಪ್ರೀಂ ಕೋರ್ಟ್‌‌ನಲ್ಲಿ ಹಿರಿಯ ವಕೀಲರಾದ ದುಶ್ಯಂತ್‌ ದೇವ್‌ , ಪ್ರಶಾಂತ್‌ ಭೂಷಣ್‌ ಮತ್ತು ಹಾರೀಸ್ ಬೀರಾನ್‌ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News