ಬಿಜೆಪಿ ಸಿಎಂ ಗಳಿಗೆ ಪ್ರಧಾನಿ ಮೋದಿಯ ಐದು ಗಂಟೆಗಳ ಪರೀಕ್ಷೆ !

Update: 2017-04-24 09:25 GMT

ಹೊಸದಿಲ್ಲಿ,ಎ.24 : ರವಿವಾರ ರಾಜಧಾನಿಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಆಡಳಿತವಿರುವ 13 ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದ ಸಭೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ 12 ಅಂಶಗಳ ಐದು ಗಂಟೆಗಳ ಅವಧಿಯ ಪರೀಕ್ಷೆಯನ್ನು ಮುಖ್ಯಮಂತ್ರಿಗಳಿಗೆ ನೀಡಿದರು. ಕಲ್ಯಾಣ ಕಾರ್ಯಕ್ರಮಗಳನ್ನು ಇನ್ನೂ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಹಾಗೂ ಪಕ್ಷ ಹಾಗೂ ಸರಕಾರಗಳ ನಡುವೆ ಇನ್ನೂ ಉತ್ತಮ ಹೊಂದಾಣಿಕೆ ಮೂಡಿಸುವುದೇ ಪ್ರಧಾನಿಯ ಉದ್ದೇಶವಾಗಿತ್ತು.

ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸಮ್ಮುಖದಲ್ಲಿ ಮುಖ್ಯಮಂತ್ರಿಗಳು ತಲಾ 15 ನಿಮಿಷ ಅವಧಿಯ ಪ್ರೆಸೆಂಟೇಶನ್ ಮಾಡಿದರಲ್ಲದೆ ಪ್ರಧಾನಿ ಎತ್ತಿದ ಎಲ್ಲಾ 12 ಪ್ರಶ್ನೆಗಳಿಗೂ ತಂತಮ್ಮ ಉತ್ತರ ನೀಡಿದರು.

ಮೂರು ರಾಜ್ಯಗಳ ಉಪಮುಖ್ಯಮಂತ್ರಿಗಳೂ ಭಾಗವಹಿಸಿದ್ದ ಈ ಸಭೆಯಲ್ಲಿ ಕೇಂದ್ರ ಸಚಿವರುಗಳಾದ ರಾಜನಾಥ್ ಸಿಂಗ್, ವೆಂಕಯ್ಯ ನಾಯ್ಡು ಹಾಗೂ ನಿತಿನ್ ಗಡ್ಕರಿ ಕೂಡ ಹಾಜರಿದ್ದರು.

ತಮ್ಮ ರಾಜ್ಯಗಳಲ್ಲಿ ನಡೆಸಲಾದ ಅಭಿವೃದ್ಧಿ ಕಾರ್ಯಗಳು, ಪಕ್ಷ ಮತ್ತು ಸರಕಾರದೊಡನೆ ಸಹಕಾರಕ್ಕೆ ಕೈಗೊಳ್ಳಲಾದ ಕ್ರಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯತೆ, ಡಿಜಿಟಲ್ ಕಾರ್ಯಕ್ರಮಗಳಿಗೆ ಉತ್ತೇಜನ ಹಾಗೂ ಬಡವರ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿತ್ತು.

ಇಂತಹುದೇ ಒಂದು ಕಾರ್ಯಕ್ರಮವನ್ನು ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ನಡೆಸಲಾಗಿದ್ದಾಗ ಮುಖ್ಯಮಂತ್ರಿಗಳಿಗೆ ಕೆಲವೊಂದು ಗುರಿಗಳನ್ನು ನಿಗದಿ ಪಡಿಸಲಾಗಿತ್ತು. ಈ ಗುರಿಗಳನ್ನು ತಲುಪಲಾಗಿದೆಯೇ ಎಂಬುದನ್ನು ರವಿವಾರದ ಸಭೆಯಲ್ಲಿ ಪರಾಮರ್ಶಿಸಲಾಯಿತು.

ಈ ಭೋಜನ ಸಭೆಯು ರಾತ್ರಿ ಏಳು ಗಂಟೆಗೆ ಆರಂಭವಾದರೆ ಸುಮಾರು ಐದು ಗಂಟೆಗಳ ಕಾಲ ನಡೆಯಿತು. ಮೋದಿ ಸರಕಾರ ಮೂರನೇ ವಾರ್ಷಿಕೋತ್ಸವವನ್ನು ಆಚರಿಸುವ ಒಂದು ತಿಂಗಳ ಮೊದಲು ಆಯೋಜಿಸಲಾದ ಈ ಸಭೆಯು 2019ರಲ್ಲಿ ಜರುಗುವ ಲೋಕಸಭಾ ಚುನಾವಣೆಗೆ ಒಂದು ಪೂರ್ವತಯಾರಿಯೆಂದೇ ತಿಳಿಯಲಾಗಿದೆ.

ರಾಜ್ಯ ಸರಕಾರಗಳು ಸಚಿವರಿಗೆ ಅವರ ಇಲಾಖೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಕೆಲಸ ಕಾರ್ಯಗಳನ್ನು ವಹಿಸಲಾಗಿದೆಯೇ ಎಂದು ಮೋದಿ ಸಭೆಯಲ್ಲಿ ಪ್ರಶ್ನಿಸಿದ್ದರೆನ್ನಲಾಗಿದೆ.

ಪಕ್ಷ ಸಂಘನೆಯ ಉದ್ದೇಶದಿಂದ ಬಿಜೆಪಿ ಕಾರ್ಯಕರ್ತರ ಸಮಸ್ಯೆಗಳ ಪರಿಹಾರಕ್ಕೆ ಲೋಕ್ ದರ್ಬಾರ್ ಗಳನ್ನು ನಡೆಸಿರುವ ಬಗ್ಗೆಯೂ ಮುಖ್ಯಮಂತ್ರಿಗಳು ಪ್ರಧಾನಿಗೆ ಮಾಹಿತಿ ನೀಡಿದರು.

ಬಾಕಿ ಯೋಜನೆಗಳ ಪರಿಣಾಮಕಾರಿ ಜಾರಿಗೆ ಮೋದಿ ಸರಕಾರದ ಯೋಜನೆಯಾದ ಪ್ರಗತಿ ಹಾಗೂ ಸರಕಾರದ ಬಡವರ ಪರ ಕಾರ್ಯಕ್ರಮಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆಗಳು ನಡೆದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News