ವೃದ್ಧ ಮತ್ತು ಹಸುಳೆಯ ಮೇಲೆ ನಿರ್ದಯ ಥಳಿತ: ಗೋರಕ್ಷಕರ ರಾಕ್ಷಸೀ ಕೃತ್ಯದ ವಿಡಿಯೋ ದೃಶ್ಯಾವಳಿ ಬಯಲು

Update: 2017-04-24 13:01 GMT

ಜಮ್ಮು, ಎ.24: ನಗರದ ರಿಯಾಸಿ ಎಂಬಲ್ಲಿ ‘ಗೋರಕ್ಷಕರ’ ಆಕ್ರಮಣದಿಂದ ಕಂಗೆಟ್ಟ ಮಹಿಳೆಯರು ಭೀತಿಯಿಂದ ಚೀರಾಡುತ್ತಾ , ಜೀವ ಉಳಿಸಿಕೊಳ್ಳಲು ಗೋಗರೆಯುತ್ತಿರುವ ಮತ್ತು ಪೊಲೀಸರು ಅಸಹಾಯಕರಾಗಿ ನಿಂತು ನೋಡುತ್ತಿರುವ ಘಟನೆಯ ವಿಡಿಯೋ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಘಟನೆಯ ಬಗೆ್ಗ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಅಲೆಮಾರಿ ಕುಟುಂಬವೊಂದು ತಮ್ಮಡನೆ ಜಾನುವಾರುಗಳ ತಂಡವೊಂದನ್ನು ಕೊಂಡೊಯ್ಯುತ್ತಿತ್ತು. ಈ ವೇಳೆ ತಪ್ಪುಕಲ್ಪನೆಯಿಂದ ಗುಂಪೊಂದು ಇವರ ಮೇಲೆ ದಾಳಿ ಮಾಡಿತು. ಆಗ ಹೆದರಿದ ಅಲೆಮಾರಿ ಕುಟುಂಬದವರು, ಹೆದ್ದಾರಿ ಪಕ್ಕದಲ್ಲಿದ್ದ ತಗಡು ಶೀಟಿನಿಂದ ನಿರ್ಮಿಸಲಾಗಿದ್ದ ಪೊಲೀಸ್ ವೀಕ್ಷಣಾ ಕೇಂದ್ರದೊಳಗೆ ನುಗ್ಗಿದರು. ಇವರನ್ನು ಬೆನ್ನಟ್ಟಿದ ಗೋರಕ್ಷಕರು, ತಗಡು ಶೀಟಿನ ಗೋಡೆಯನ್ನು ಒದೆಯುತ್ತಾ ‘ಜೈ ಶ್ರೀರಾಮ್.. ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆ ಕೂಗತೊಡಗಿದಾಗ ಅಲೆಮಾರಿ ಕುಟುಂಬದವರು ಭಯಭೀತಗೊಂಡರು.

ಒಳ ನುಗ್ಗಿದ ಗೋರಕ್ಷಕರು 75ರ ಹರೆಯದ ಸಬೀರ್ ಅಲಿ ಮತ್ತು 9ರ ಹರೆಯದ ಬಾಲಕಿಯನ್ನು ನಿರ್ದಯವಾಗಿ ಥಳಿಸತೊಡಗಿದರು. ಐದು ಮಂದಿಯಿದ್ದ ಕುಟುಂಬದ ಇತರರು ಬಿಟ್ಟುಬಿಡಿ ಎಂದು ಗೋಗರೆದರೂ ಅದನ್ನು ಕಿವಿಗೆ ಹಾಕಿಕೊಳ್ಳದೆ ಪೊಲೀಸ್ ಕೇಂದ್ರಕ್ಕೆ ಬೆಂಕಿ ಹಚ್ಚಿದರು. ಈ ವೇಳೆ ಅಲ್ಲಿದ್ದ ಪೊಲೀಸರು ಅಸಹಾಯಕರಾಗಿ ನಿಂತು ನೋಡುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಗೋರಕ್ಷಕರು ಪೊಲೀಸರನ್ನು ಬದಿಗೆ ತಳ್ಳುತ್ತಿರುವ ಮತ್ತು ಹೊರ ಹೋಗುವಂತೆ ಸೂಚಿಸುವ ದೃಶ್ಯವೂ ಸೆರೆಯಾಗಿದೆ. ಬಳಿಕ ಈ ಗುಂಪು ಅಲೆಮಾರಿಗಳ ಜಾನುವಾರುಗಳೊಂದಿಗೆ (ಇದರಲ್ಲಿ 16 ಹುಗಳು ಸೇರಿದ್ದವು) ಪರಾರಿಯಾಗಿದೆ.

ಘಟನೆಗೆ ಸಂಬಂಧಿಸಿ ರವಿವಾರ 11 ಮಂದಿಯನ್ನು ಬಂಧಿಸಲಾಗಿದ್ದು ಇವರು ಕೊಂಡೊಯ್ದಿದ್ದ ಜಾನುವಾರುಗಳನ್ನು ಪತ್ತೆಹಚ್ಚಲಾಗಿದೆ. ವಿಡಿಯೋದ ಸತ್ಯಾಸತ್ಯತೆ ಖಚಿತಗೊಳ್ಳುವವರೆಗೆ ಹಲ್ಲೆ ಮಾಡಿದವರ ವಿರುದ್ಧ ಸದ್ಯಕ್ಕೆ ಜಾಮೀನು ಲಭ್ಯ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಅಲೆಮಾರಿಗಳ ಕುಟುಂಬದ ನಾಲ್ವರ ವಿರುದ್ದವೂ , ಅನುಮತಿ ಪಡೆಯದೆ ಜಾನುವಾರುಗಳನ್ನು ಸಾಗಿಸಿದ ಪ್ರಕರಣ ದಾಖಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News