ಕೆ. ವಿಶ್ವನಾಥ್‌ಗೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ

Update: 2017-04-24 16:33 GMT

 ಹೊಸದಿಲ್ಲಿ, ಎ.24: ಖ್ಯಾತ ಸಿನೆಮಾ ನಿರ್ದೇಶಕ ಮತ್ತು ನಟ ಕೆ.ವಿಶ್ವನಾಥ್ ಅವರನ್ನು 2016ರ ಸಾಲಿನ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು ಸ್ವರ್ಣ ಕಮಲ, 10 ಲಕ್ಷ ರೂ. ನಗದು ಮತ್ತು ಶಾಲನ್ನು ಹೊಂದಿದ್ದು ಮೇ 3ರಂದು ದಿಲ್ಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಭಾರತೀಯ ಸಿನೆಮಾ ರಂಗಕ್ಕೆ ಅಸಾಧಾರಣ ಕೊಡುಗೆ ನೀಡಿರುವವರನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗುತ್ತಿದೆ. 2016ರ ಸಾಲಿಗೆ ವಿಶ್ವನಾಥ್ ಹೆಸರನ್ನು ದಾದಾಸಾಹೇಬ್ ಪ್ರಶಸ್ತಿ ಸಮಿತಿ ಶಿಫಾರಸ್ಸು ಮಾಡಿದ್ದು ಇದನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ವೆಂಕಯ್ಯ ನಾಯ್ಡು ಅನುಮೋದಿಸಿದ್ದಾರೆ.

ಆಂಧ್ರಪ್ರದೇಶದ ಗುಡಿವಾಡಾದಲ್ಲಿ 1930ರ ಫೆಬ್ರವರಿಯಲ್ಲಿ ಜನಿಸಿದ ವಿಶ್ವನಾಥ್, ಐದು ರಾಷ್ಟ್ರೀಯ ಪುರಸ್ಕಾರ, 20 ನಂದಿ ಪುರಸ್ಕಾರ(ಆಂಧ್ರ ಸರಕಾರ ನೀಡುವ ಪ್ರಶಸ್ತಿ), ಜೀವಮಾನ ಸಾಧನೆ ಪ್ರಶಸ್ತಿ ಸೇರಿದಂತೆ 10 ಫಿಲ್ಮ್‌ಫೇರ್ ಪುರಸ್ಕಾರ ಪಡೆದಿದ್ದಾರೆ. 1992ರಲ್ಲಿ ಇವರು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದರು.

      ಹಲವಾರು ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ವಿಶ್ವನಾಥ್ ಸರ್ಗಮ್, ಕಾಮ್‌ಚೋರ್, ಸಂಜೋಗ್, ಜಾಗ್ ಉಠಾ ಇನ್ಸಾನ್, ಈಶ್ವರ್ ಸೇರಿದಂತೆ 50 ಸಿನೆಮಾಗಳನ್ನು ನಿರ್ದೇಶಿಸಿದ್ದಾರೆ. ಇವರು ನಿರ್ದೇಶಿಸಿದ ‘ಸ್ವಾತಿಮುತ್ಯಂ’ ಸಿನೆಮ ರಾಷ್ಟ್ರಪ್ರಶಸ್ತಿ ಪಡೆದ ಜೊತೆಗೆ 1987ರಲ್ಲಿ ಅಕಾಡಮಿ ಪುರಸ್ಕಾರಕ್ಕೆ (ಉತ್ತಮ ವಿದೇಶಿ ಸಿನೆಮಾ ವಿಭಾಗದಲ್ಲಿ) ಭಾರತದ ಅಧಿಕೃತ ಸಿನೆಮಾವಾಗಿ ಪ್ರವೇಶ ಪಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News