ಕೇರಳ ವಿಧಾನಸಭೆಯಲ್ಲಿ ಸಚಿವ ಮಣಿ ವಿರುದ್ಧ ಪ್ರತಿಪಕ್ಷ ಪ್ರತಿಭಟನೆ

Update: 2017-04-25 07:52 GMT

ತಿರುವನಂತಪುರಂ,ಎ. 25: ಮಹಿಳಾ ವಿರೋಧಿ ಹೇಳಿಕೆ ನೀಡಿದ ಕೇರಳ ಇಂಧನ ಸಚಿವ ಎಂ.ಎಂ.ಮಣಿ ಕ್ಷಮೆ ಯಾಚಿಸಬೇಕು, ರಾಜೀನಾಮೆ ನೀಡಬೇಕು ಎಂದು ಕೇರಳ ವಿಧಾನಸಭೆಯಲ್ಲಿ ಪ್ರತಿಪಕ್ಷ ಪ್ರತಿಭಟನೆ ನಡೆಸಿದೆ. ಸಭಾಕಾರ್ಯಕ್ರಮ ಆರಂಭಗೊಂಡು ಪ್ರಶ್ನೋತ್ತರ ಸಮಯದಲ್ಲಿ ಪ್ರತಿಪಕ್ಷ ಸದಸ್ಯರು ಎದ್ದು ನಿಂತು ಮಣಿ ವಿರುದ್ಧ ಘೋಷಣೆಕೂಗಿದರು. ಪ್ಲೇಕಾರ್ಡ್, ಬ್ಯಾನರ್ ಎತ್ತಿಹಿಡಿದು ಪ್ರತಿಪಕ್ಷ ಸದಸ್ಯರು ಗಲಾಟೆಗಿಳಿದರು.

ಸಚಿವರು ಮಹಿಳಾವಿರೋಧಿ ಹೇಳಿಕೆ ನೀಡಿದ್ದು, ಇದನ್ನು ಪ್ರಶ್ನೋತ್ತರ ಸಮಯ ರದ್ದುಪಡಿಸಿ ಚರ್ಚಿಸಬೇಕೆಂದು ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಆಗ್ರಹಿಸಿದರು. ಸಚಿವರುನೀಡಿದ ಹೇಳಿಕೆ ಗಂಭೀರವಾದುದು. ಸಚಿವರ ಕೆಟ್ಟ ವರ್ತನೆಯನ್ನು ವಿಧಾನಸಭೆಯ ಸ್ಪೀಕರ್ ಕೂಡಾ ಖಂಡಿಸಿದ್ದಾರೆ. ಅವರ ಹೇಳಿಕೆ ಅಸಾಧಾರಣ ಪರಿಸ್ಥಿತಿಯನ್ನು ಹುಟ್ಟುಹಾಕಿದೆ ಎಂದು ಚೆನ್ನಿತ್ತಲ ಹೇಳಿದರು.

ಪ್ರಶ್ನೋತ್ತರ ಸಮಯದಲ್ಲಿ ಈ ವಿಷಯವನ್ನು ಚರ್ಚಿಸಲು ಸಾಧ್ಯವಿಲ್ಲ ಎಂದು ಸ್ಪೀಕರ್ ಶ್ರೀರಾಮಕೃಷ್ಣನ್ ಸಭೆಗೆ ತಿಳಿಸಿದ್ದಾರೆ.

ಇದೇ ವೇಳೆ ಮಹಿಳೆಯರ ವಿರುದ್ಧ ಅಶ್ಲೀಲವಾಗಿ ಮಾತಾಡಿದ ಸಚಿವ ಮಣಿಯ ಮನೆಯ ಮುಂದೆ ಮಹಿಳಾ ಕಾಂಗ್ರೆಸ್ ಸದಸ್ಯೆಯರು ಪ್ರತಿಭಟನೆ ನಡೆಸಿದ್ದಾರೆ. ಸಚಿವರ ವಾಹನಕ್ಕೆ ಕಪ್ಪುಪತಾಕೆ ತೋರಿಸಲು ವಿಫಲ ಯತ್ನ ನಡೆಸಿದ್ದಾರೆ. ಪೊಲೀಸರು ಮಹಿಳಾ ಕಾಂಗ್ರೆಸ್ ಸದಸ್ಯರನ್ನು ದೂರ ಸರಿಸಿದರು.

ಇನ್ನೊಂದು ಕಡೆ ಸಚಿವ ಮಣಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿ ಪೊಂಬಿಳೈ ಒರುಮೈ ನಾಯಕಿಯರು ಅನ್ನಸತ್ಯಾಗ್ರಹಕ್ಕಿಳಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News