ಕೈ ಸುಡುವ ಪೆಟ್ರೋಲ್: ನಿಜವಾದ ಬೆಲೆ ಎಷ್ಟು? ಸರ್ಕಾರ ಹಾಕುವ ಕತ್ತರಿ ಎಷ್ಟು?

Update: 2017-04-25 09:08 GMT

ಮುಂಬೈ,ಎ.25 : ಕಚ್ಛಾ ತೈಲ ಬೆಲೆ ಹಾಗೂ ಡಾಲರ್-ರೂಪಾಯಿ ವಿನಿಮಯ ಬೆಲೆಯನ್ನು ಪರಿಗಣಿಸಿದರೆ, ಮಾರ್ಕೆಟಿಂಗ್  ಶುಲ್ಕ ಒಳಗೊಂಡಂತೆ ತೈಲ ಕಂಪೆನಿಗಳು ಪೂರೈಸುವ ಪೆಟ್ರೋಲ್ ಬೆಲೆ ಲೀಟರಿಗೆ ರೂ 29.54 ಆಗುತ್ತದೆ. ಆದರೆ ಮುಂಬೈಯಲ್ಲಿ ಗ್ರಾಹಕರು ಹಲವಾರು ತೆರಿಗೆ ಮತ್ತು ಶುಲ್ಕಗಳಿಂದಾಗಿ ಲೀಟರ್ ಒಂದಕ್ಕೆ ರೂ 77.50 ಪಾವತಿಸಬೇಕಾಗುತ್ತದೆ. ಇಲ್ಲಿ ಗ್ರಾಹಕರು ಮಾರುಕಟ್ಟೆ ತಲುಪುವಾಗ ಇರುವ ತೈಲ ಬೆಲೆಗಿಂತ ಪ್ರತಿ ಲೀಟರ್ ಗೆ ರೂ 47.96 ಹೆಚ್ಚುವರಿಯಾಗಿ ತೆರಿಗೆ ಮತ್ತು ಇತರ ಶುಲ್ಕಗಳನ್ನು ಪಾವತಿಸುತ್ತಾರೆ. ಇವುಗಳಲ್ಲಿ ಅಬಕಾರಿ ಸುಂಕ, ವ್ಯಾಟ್, ಅಕ್ಟ್ರಾಯ್, ಪೆಟ್ರೋಲ್ ಪಂಪ್ ಮಾಲಕರ ಕಮಿಷನ್ ಹೀಗೆ ಎಲ್ಲವೂ ಸೇರಿ ಒಟ್ಟು ಮೊತ್ತದಲ್ಲಿ ಶೇ 153ರಷ್ಟು ತೆರಿಗೆ ರೂಪದಲ್ಲಿ ಪಾವತಿಸುತ್ತಾರೆ.

ಪೆಟ್ರೋಲ್ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವ ಮೂಲಕ ಆದಷ್ಟು ಹೆಚ್ಚು ಆದಾಯ ಗಳಿಸುವತ್ತ ಸರಕಾರ ಆಸಕ್ತಿ ವಹಿಸಿದೆಯೆನ್ನಲಾಗಿದೆ. ಸರಕಾರದ ಸಾಲದ ಪ್ರಮಾಣ ತೀರಿಸಲಸಾಧ್ಯವಾದ ರೂ 4.13 ಲಕ್ಷ ಕೋಟಿಯಷ್ಟಿರುವುದರಿಂದ ಈ ಸನ್ನಿವೇಶದಲ್ಲಿ ತನ್ನ ಪರಿಧಿಯೊಳಗೆ ಆದಷ್ಟು ತೆರಿಗೆ ಹಾಗೂ ಶುಲ್ಕ ವಿಧಿಸುವುದು ಸರಕಾರದ ಮುಂದಿರುವ ಒಂದೇ ಆಯ್ಕೆಯಾಗಿದೆ ಎಂದು ಸರಕಾರದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಹಿರಿಯ ಅರ್ಥಶಾಸ್ತ್ರಜ್ಞರೊಬ್ಬರು ತಮ್ಮ ಹೆಸರು ಬಹಿರಂಗಪಡಿಸಬಾರದೆನ್ನುವ ಷರತ್ತಿನೊಂದಿಗೆ ಹೇಳಿದ್ದಾರೆ.

ಪೆಟ್ರೋಲ್ ದರಗಳು ಲೀಟರಿಗೆ ರೂ 3ರಷ್ಟು ಹೆಚ್ಚಾಗಿರುವ ಬಗ್ಗೆ ಹಲವರು ವಿಭಿನ್ನ ಆಬಿಪ್ರಾಯ ಹೊಂದಿದ್ದಾರೆ. ಕೆಲವರ ಪ್ರಕಾರ ಇದು ಸರಕು ಮತ್ತು ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಆದರೆ ಸರಕು ಸಾಗಣೆ ವಾಹನಗಳು ಪೆಟ್ರೋಲ್ ಬಳಸದೇ ಇರುವುದರಿಂದ ಅದರಿಂದ ಸರಕು ಮತ್ತು ಸೇವಾ ದರಗಳು ಹೆಚ್ಚಲು ಸಾಧ್ಯವಿಲ್ಲ, ಎಂದು ಇನ್ನು ಹಲವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News