ಕೊಲೆ ಆರೋಪಿ ರಾಜಕಾರಣಿಗೆ ವೈದ್ಯಕೀಯ ಆಶ್ರಯ ನೀಡಿದ್ದ ಗುರ್ಗಾಂವ್‌ನ ವೈದ್ಯರಿಗೆ 1.4 ಕೋ.ರೂ.ದಂಡ!

Update: 2017-04-25 15:13 GMT

ಹೊಸದಿಲ್ಲಿ,ಎ.25: ಕೊಲೆ ಆರೋಪಿ ಎನ್ನುವದು ಗೊತ್ತಿದ್ದೂ ರಾಜಕಾರಣಿಗೆ ವೈದ್ಯಕೀಯ ಆಶ್ರಯ ನೀಡಿದ್ದ ಗುರ್ಗಾಂವ್‌ನ ಆಸ್ಪತ್ರೆಯೊಂದರ ಇಬ್ಬರು ವೈದ್ಯರಿಗೆ 1.4 ಕೋ.ರೂ.ದಂಡವನ್ನು ವಿಧಿಸುವ ಮೂಲಕ ಸರ್ವೋಚ್ಚ ನ್ಯಾಯಾಲಯವು ಅಪರಾಧ ಕೃತ್ಯಗಳ ಆರೋಪಿ ರಾಜಕಾರಣಿಗಳು ಆಸ್ಪತ್ರೆಗಳಿಗೆ ದಾಖಲಾಗಿ ಹಾಯಾಗಿರುವ ಪದ್ಧತಿ ಯ ಮಗ್ಗಲು ಮುರಿದಿದೆ.

ಕೊಲೆ ಆರೋಪವನ್ನು ಹೊತ್ತಿದ್ದ ಹರ್ಯಾಣದ ಪ್ರತಿಪಕ್ಷ ಐಎನ್‌ಎಲ್‌ಡಿಯ ಮಾಜಿ ಶಾಸಕ ಬಲ್ಬೀರ್ ಸಿಂಗ್‌ನ ಜಾಮೀನು ಅರ್ಜಿಯನ್ನು 2013,ಅ.24ರಂದು ತಿರಸ್ಕರಿಸಿದ್ದ ಸರ್ವೋಚ್ಚ ನ್ಯಾಯಾಲಯವು ಶರಣಾಗುವಂತೆ ಸೂಚಿಸಿತ್ತಾದರೂ, ಆತ ಹೃದ್ರೋಗದ ನೆಪವೊಡ್ಡಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ಆಸ್ಪತ್ರೆಯು ಆತನನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದ್ದ ಸರ್ವೋಚ್ಚ ನ್ಯಾಯಾಲಯವು ಈ ಬಗ್ಗೆ ವಿವರಣೆ ನೀಡುವಂತೆ ಆದೇಶಿಸಿದಾಗ 527 ದಿನಗಳ ಬಳಿಕ ಆತನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿತ್ತು.

ಕೊಲೆಯಾಗಿದ್ದ ವ್ಯಕ್ತಿಯ ಕುಟುಂಬವು ನ್ಯಾಯಾಲಯದ ಮೊರೆ ಹೋಗಿದ್ದು, ಸಿಬಿಐ ತನಿಖೆಗೆ ಆದೇಶಿಸಲಾಗಿತ್ತು. ಸಿಂಗ್‌ಗೆ ಯಾವುದೇ ಗಂಭೀರ ಕಾಯಿಲೆಯಿರಲಿಲ್ಲ ಮತ್ತು ಬಂಧನವನ್ನು ತಪ್ಪಿಸಿಕೊಳ್ಳುವ ಏಕಮಾತ್ರ ಉದ್ದೇಶದಿಂದ ಆತ ಆಸ್ಪತ್ರೆಗೆ ದಾಖಲಾಗಿದ್ದ ಎಂದು ಸಿಬಿಐ ತನ್ನ ತನಿಖಾ ವರದಿಯಲ್ಲಿ ತಿಳಿಸಿತ್ತು.

2016,ಡಿಸೆಂಬರ್‌ನಲ್ಲಿ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ.ಮನೀಷ್ ಪ್ರಭಾಕರ್ ಮತ್ತು ಡಾ.ಕೆ.ಎಸ್.ಸಚದೇವ್ ಅವರನ್ನು ದೋಷಿಗಳೆಂದು ನ್ಯಾಯಾಲಯವು ತೀರ್ಮಾನಿಸಿತ್ತು. ಇದೀಗ ಅವರಿಗೆ ತಲಾ 70 ಲ.ರೂ.ದಂಡವನ್ನು ವಿಧಿಸಲಾಗಿದೆ.

 2013,ಮೇ ತಿಂಗಳಲ್ಲಿ ಸಿಂಗ್ ರೋಹ್ಟಕ್‌ನ ಆಹಾರಧಾನ್ಯ ಮಾರುಕಟ್ಟೆಯಲ್ಲಿ ಗುಂಡಿನ ಸುರಿಮಳೆಗೈದಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿ, ಇತರ ಎಂಟು ಜನರು ಗಾಯಗೊಂಡಿದ್ದರು.ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯವು ಮೊದಲು ಆತನಿಗೆ ಜಾಮೀನು ನೀಡಿತ್ತಾದರೂ ಸರ್ವೋಚ್ಚ ನ್ಯಾಯಾಲಯವು ಅದನ್ನು ರದ್ದುಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News