ಹವಾಯಿ ಚಪ್ಪಲಿ ಧರಿಸಿದ ಸಾಮಾನ್ಯರಿಗೂ ವಿಮಾನ ಪ್ರಯಾಣ ಸಾಧ್ಯವಾಗಬೇಕು: ಮೋದಿ
ಶಿಮ್ಲಾ,ಎ.27: ಶ್ರೀಸಾಮಾನ್ಯರೂ ವಿಮಾನದಲ್ಲಿ ಪ್ರಯಾಣಿಸುವಂತಾಗಲು ಅಭಿವೃದ್ಧಿಯ ಸಾಧನವಾಗಿ ವಾಯು ಸಂಪರ್ಕ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರುವ ಅಗತ್ಯವಿದೆ ಎಂದು ಗುರುವಾರ ಇಲ್ಲಿ ಒತ್ತಿ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು, ಹವಾಯಿ ಚಪ್ಪಲಿಗಳನ್ನು ಧರಿಸುವ ಜನರು ಸಹ ವಿಮಾನಗಳಲ್ಲಿ ಪ್ರಯಾಣ ಮಾಡುವಂತಾ ಗಬೇಕು ಎನ್ನುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.
ಪ್ರಾದೇಶಿಕ ಸಂಪರ್ಕವನ್ನು ಉತ್ತೇಜಿಸುವ ಸರಕಾರದ ಮಹತ್ವಾಕಾಂಕ್ಷೆಯ ‘ಉಡಾನ್’ ಯೋಜನೆಗೆ ಇಲ್ಲಿಯ ಜಬ್ಬಾರ್‌ಹಟ್ಟಿ ವಿಮಾನ ನಿಲ್ದಾಣದಲ್ಲಿ ಚಾಲನೆ ನೀಡಿದ ಪ್ರಧಾನಿ ಈ ಯೋಜನೆಯಡಿ ಶಿಮ್ಲಾ-ದಿಲ್ಲಿ ಯಾನಕ್ಕೆ ಹಸಿರು ನಿಶಾನೆ ತೋರಿಸಿದರು.
ಏರ್ ಇಂಡಿಯಾದ ಅಂಗಸಂಸ್ಥೆ ಅಲಯನ್ಸ್ ಏರ್ ಈ ಯಾನವನ್ನು ನಿರ್ವಹಿಸು ತ್ತಿದ್ದು, ಈ ಮಾರ್ಗದಲ್ಲಿ ತನ್ನ 42 ಆಸನಗಳ ಎಟಿಆರ್ ವಿಮಾನವನ್ನು ನಿಯೋಜಿಸಿದೆ.
ವೀಡಿಯೊ ಕಾನ್ಫರೆನ್ಸ್ ಮೂಲಕ ಕಡಪಾ-ಹೈದರಾಬಾದ್ ಮತ್ತು ನಾಂದೇಡ್-ಹೈದರಾಬಾದ್ ವಿಮಾನಯಾನಗಳಿಗೂ ಚಾಲನೆ ನೀಡಿದ ಅವರು, ಯೋಜನೆಯಡಿ ಮುಂದಿನ ವಿಮಾನಯಾನವನ್ನು ಮುಂಬೈ-ನಾಂದೇಡ್ ಮಾರ್ಗದಲ್ಲಿ ಆರಂಭಿಸಲಾಗುವುದು ಎಂದು ಪ್ರಕಟಿಸಿದರು.
ಈ ಹಿಂದೆ ವಿಮಾನ ಪ್ರಯಾಣ ಕೇವಲ ರಾಜ-ಮಹಾರಾಜರು ಮತ್ತು ಶ್ರೀಮಂತರಿಗೆ ಮಾತ್ರ ಮೀಸಲು ಎಂದು ನಂಬಲಾಗಿತ್ತು. ಏರ್ ಇಂಡಿಯಾ ಕೂಡ ತನ್ನ ಲಾಂಛನವಾಗಿ ಮಹಾರಾಜನನ್ನೇ ಆಯ್ಕೆ ಮಾಡಿಕೊಂಡಿತ್ತು ಎಂದ ಮೋದಿ, ಆಗಿನ ವಾಜಪೇಯಿ ಸರಕಾರದಲ್ಲಿ ನಾಗರಿಕ ವಾಯುಯಾನ ಸಚಿವರಾಗಿದ್ದ ರಾಜೀವ್ ಪ್ರತಾಪ್ ರುಡಿಯವರ ಬಳಿ ತಾನು ಈ ವಿಷಯವನ್ನು ಪ್ರಸ್ತಾಪಿಸಿದ್ದನ್ನು ಮತ್ತು ವ್ಯಂಗ್ಯ ಚಿತ್ರಕಾರ ಆರ್.ಕೆ.ಲಕ್ಷ್ಮಣ ಅವರ ಶ್ರೀಸಾಮಾನ್ಯ ಏರ್‌ಇಂಡಿಯಾದ ಲಾಂಛನವಾಗಬೇಕು ಎಂದು ಹೇಳಿದ್ದನ್ನು ಸ್ಮರಿಸಿಕೊಂಡರು.
ಉತ್ತಮ ಸಂಪರ್ಕ ವ್ಯವಸ್ಥೆಯು ಅವಕಾಶ ದೊರೆತರೆ ನಮ್ಮ ದೇಶದ ಅದೃಷ್ಟ ಮತ್ತು ಚಿತ್ರಣವನ್ನೇ ಬದಲಿಸುವ ಸಾಮರ್ಥ್ಯವುಳ್ಳ ದೇಶದ ಯುವಜನರಿಗೆ ನೆರವಾಗಲಿದೆ ಎಂಂದರು.
ಕಳೆದ 70 ವರ್ಷಗಳಲ್ಲಿ ಯಾವುದೇ ವಾಯುನೀತಿ ಇರದ್ದರಿಂದ ದ್ವಿತೀಯ ಮಹಾಯುದ್ಧದ ಸಂದರ್ಭದಲ್ಲಿ ನಿರ್ಮಾಣಗೊಂಡಿದ್ದ ಹಲವಾರು ವಾಯುನೆಲೆಗಳು ಬಳಕೆಯಾಗದೆ ಮೂಲೆಗುಂಪಾಗಿವೆ ಸರಕಾರವು ರೂಪಿಸಿರುವ ನೀತಿಯಡಿ ಈ ವಾಯುನೆಲೆಗಳನ್ನು ಬಳಸಿಕೊಳ್ಳಲಾಗುವುದು ಮತ್ತು ಇಂತಹ 30 ವಾಯುನೆಲೆಗಳು ಶೀಘ್ರವೇ ವಾಣಿಜ್ಯಿಕ ಕಾರ್ಯಾಚರಣೆಗಳನ್ನು ಆರಂಭಿಸಲಿವೆ ಎಂದರು.
ಉಡಾನ್ ಯೋಜನೆಯಡಿ ವಿಮಾನಯಾನ ದರಗಳಿಗೆ ಮಿತಿ ವಿಧಿಸಲಾಗಿದೆ ಮತ್ತು ಟ್ಯಾಕ್ಸಿ ಪ್ರಯಾಣದರಕ್ಕಿಂತ ಕಡಿಮೆ ವೆಚ್ಚವಾಗಲಿದೆ, ಜೊತೆಗೆ ಪ್ರಯಾಣದ ಅವಧಿಯೂ ಗಂಟೆಗಳಿಂದ ನಿಮಿಷಗಳಿಗೆ ಇಳಿಯಲಿದೆ ಎಂದು ಮೋದಿ ನುಡಿದರು.ಯೋಜನೆಯಡಿ ಪ್ರತಿ ಗಂಟೆಯ ಹಾರಾಟಕ್ಕೆ 2,500 ರೂ.ದರವನ್ನು ನಿಗದಿಗೊಳಿಸಲಾಗಿದೆ.
ಉಡಾನ್ ಯೋಜನೆಯು ರಾಷ್ಟ್ರೀಯ ಅಖಂಡತೆಗೂ ಕೊಡುಗೆಯನ್ನು ನೀಡಲಿದೆ. ವಿಭಿನ್ನ ಸಂಸ್ಕೃತಿಗಳು ಮತ್ತು ಸಂಪ್ರದಾಯಗಳು ಪರಸ್ಪರ ಬೆರೆಯಲು ಸಾಧ್ಯವಾಗುತ್ತದೆ ಎಂದ ಮೋದಿ,‘‘ಸಬ್ ಉಡೇ ಸಬ್ ಜುಡೇ (ಎಲ್ಲರೂ ಹಾರಾಡಲಿ,ಎಲ್ಲರೂ ಒಂದಾಗಲಿ) ’ಎಂಬ ಘೋಷಣೆಯನ್ನು ಮೊಳಗಿಸಿದರು.
ಇದೇ ವೇಳೆ ಆನ್‌ಲೈನ್ ಮೂಲಕ ಬಿಲಾಸಪುರದಲ್ಲಿ ಹೈಡ್ರೋ ಇಂಜಿನಿಯರಿಂಗ ಕಾಲೇಜಿನ ಶಿಲಾನ್ಯಾಸವನ್ನು ನೆರವೇರಿಸಿದರು.