×
Ad

ವಿನೋದ್ ಖನ್ನಾ ನಿಧನದಲ್ಲಿ ಬಯಲಾಯ್ತು ಕಹಿ ಸತ್ಯ

Update: 2017-04-28 12:36 IST

ಮುಂಬೈ,ಎ.28 : ಟ್ವಿಟ್ಟರಿನಲ್ಲಿ ತಮ್ಮ ನೇರ ಮತ್ತು ಖಡಕ್ ಟ್ವೀಟುಗಳಿಗೆ ಹೆಸರಾಗಿರುವ ಹಿರಿಯ ನಟ ರಿಷಿ ಕಪೂರ್ ಗುರುವಾರ ಮತ್ತೊಮ್ಮೆ ತಮ್ಮ ಟ್ವೀಟ್ ಮುಖಾಂತರ ಸುದ್ದಿಯಾಗಿದ್ದಾರೆ. ಈ ಬಾರಿ ಅವರು ತಮ್ಮ ಟ್ವೀಟನ್ನು ಯುವ ತಲೆಮಾರಿನ ನಟರತ್ತ ಗುರಿಯಾಗಿಸಿದ್ದಾರೆ. ಕ್ಯಾನ್ಸರಿನಿಂದ ಬಳಲುತ್ತಿದ್ದ ಹಿರಿಯ ನಟ ವಿನೋದ್ ಖನ್ನಾ ಗುರುವಾರ ವಿಧಿವಶರಾಗಿದ್ದರೆ ಅವರ ಅಂತ್ಯ ಸಂಸ್ಕಾರಕ್ಕೆ ಹಾಜರಿರದ ಹಲವು ‘ಯುವ ನಟರು’ ಅದೇ ದಿನ ನಟಿ ಪ್ರಿಯಾಂಕ ಛೋಪ್ರಾ ಆಯೋಜಿಸಿದ್ದ ತಡ ರಾತ್ರಿಯ ಪಾರ್ಟಿಯಲ್ಲಿ ಹಾಜರಾಗಿದ್ದನ್ನು ಕಂಡು ರಿಷಿ ಕೆಂಡ ಕಾರಿದ್ದಾರೆ.

ಸೂಪರ್ ಹಿಟ್ ಚಿತ್ರ ‘ಅಮರ್ ಅಕ್ಬರ್ ಆಂಥೊನಿ’ಯಲ್ಲಿ ವಿನೋದ್ ಖನ್ನಾ ಅವರ ಜತೆ ಸಹನಟನಾಗಿ ಅಭಿನಯಿಸಿದ್ದ ರಿಷಿ, ಹೊಸ ತಲೆಮಾರಿನ ನಟರು ವಿನೋದ್ ಖನ್ನಾ ಅವರಿಗೆ ಗೌರವ ಸಲ್ಲಿಸಲು ಆಗಮಿಸದೇ ಇರುವುದನ್ನು ಟೀಕಿಸುತ್ತಾ ಇದನ್ನು ನಾಚಿಕೆಗೇಡು ಎಂದು ಟ್ವೀಟ್ ಮಾಡಿದ್ದಾರೆ. ವಿನೋದ್ ಖನ್ನಾ ಈ ಹೊಸ ತಲೆಮಾರಿನ ನಟರೊಂದಿಗೆ ಅಭಿನಯಿಸಿರುವ ಹೊರತಾಗಿಯೂ ಅವರೆಲ್ಲ ಆಗಮಿಸಲಿಲ್ಲ ಎಂದು ಹೇಳಿದ ರಿಷಿ, ಇನ್ನೊಬ್ಬರಿಗೆ ಗೌರವ ನೀಡುವುದನ್ನು ಕಲಿಯಬೇಕು ಎಂದು ಯುವನಟರಿಗೆ ಹೇಳಿದ್ದಾರೆ.

‘‘ನಾನು ಸತ್ತಾಗಲೂ ಇದೇ ರೀತಿ ಆಗಬಹುದು. ಇಂದು ‘ಸ್ಟಾರ್’ ಎಂದು ಹೇಳಿಕೊಳ್ಳುವವರ ಬಗ್ಗೆ ನನಗೆ ಸಿಟ್ಟು ಬರುತ್ತಿದೆ’’ ಎಂದು ರಿಷಿ ಟ್ವೀಟ್ ಮಾಡಿದ್ದಾರಲ್ಲದೆ ಅವರುಗಳನ್ನು ‘ಚಮಚಾ’ ಎಂದೂ ಲೇವಡಿ ಮಾಡಿದ್ದಾರೆ. ‘‘ಸಿಟ್ಟಾಗಿದ್ದೇನೆ. ಹಲವಾರು ಚಮಚಾ ಜನರನ್ನು ಕಳೆದ ರಾತ್ರಿ ಪ್ರಿಯಾಂಕ ಛೋಪ್ರಾ ಪಾರ್ಟಿಯಲ್ಲಿ ಭೇಟಿಯಾದೆ,’’ಎಂದಿದ್ದಾರೆ ರಿಷಿ.

ಅದೇ ಸಮಯ ತನ್ನ ಪತ್ನಿ ನೀತು ಕಪೂರ್ ಹಾಗೂ ಪುತ್ರ ರಣಬೀರ್ ಕಪೂರ್ ವಿದೇಶದಲ್ಲಿರುವುದರಿಂದ ವಿನೋದ್ ಖನ್ನಾ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ, ಎಂದೂ ರಿಷಿ ಸ್ಪಷ್ಟ ಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News