×
Ad

ಬಾಲಿವುಡ್‌ನಲ್ಲಿ ಮೇಕಪ್ ಇಲ್ಲದೆ ನಟಿಸಲಿರುವ ತಮನ್ನಾ!

Update: 2017-04-28 19:03 IST

ಬಾಹುಬಲಿಯ ಮೊದಲ ಭಾಗದ ಭರ್ಜರಿ ಗೆಲುವಿನ ಬಳಿಕ ತಮನ್ನಾ ದಕ್ಷಿಣದಲ್ಲಿ ಮಾತ್ರವಲ್ಲ ಬಾಲಿವುಡ್‌ನಲ್ಲಿಯೂ ಬಹುಬೇಡಿಕೆಯ ನಟಿಯೆನಿಸಿಕೊಂಡಿದ್ದಾರೆ. ಮೂರು ವರ್ಷಗಳ ಸುದೀರ್ಘ ಅವಧಿಯ ಬಳಿಕ ಆಕೆ ಮತ್ತೆ ಬಾಲಿವುಡ್‌ಗೆ ರೀ ಎಂಟ್ರಿ ಕೊಟ್ಟಿದ್ದಾರೆ. ವಶು ಭಗ್ನಾನಿ ನಿರ್ದೇಶನದ ಚಿತ್ರದಲ್ಲಿ ಆಕೆ ನಟಿಸುವುದು ಈಗ ಕನ್‌ಫರ್ಮ್ ಆಗಿದೆ.

2014ರಲ್ಲಿ ತೆರೆಕಂಡ ಎಂಟರ್‌ಟೈನ್‌ಮೆಂಟ್ ತಮನ್ನಾರ ಕೊನೆಯ ಬಾಲಿವುಡ್ ಚಿತ್ರವಾಗಿತ್ತು. ಭಗ್ನಾನಿ ನಿರ್ದೇಶನದ ಚಿತ್ರದಲ್ಲಿ ಆಕೆಗೆ ಅತ್ಯಂತ ಸವಾಲಿನ ಪಾತ್ರ ವೊಂದು ದೊರೆತಿದೆ. ಮೂಕಿ ಹಾಗೂ ಕಿವುಡಿಯ ಪಾತ್ರದಲ್ಲಿ ಆಕೆ ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲ, ಇಡೀ ಚಿತ್ರದಲ್ಲಿ ಆಕೆ ಮೇಕಪ್ ಇಲ್ಲದೆಯೇ ನಟಿಸಲಿದ್ದಾರಂತೆ. ಬಾಹುಬಲಿಯ ಆನಂತರ ತನಗೆ ದೊರೆತಿರುವ ವಿಭಿನ್ನಪಾತ್ರವಿದೆ ಎಂದು ತಮನ್ನಾ ಸಂತಸದಿಂದ ಹೇಳಿಕೊಂಡಿದ್ದಾರೆ.

ತಮನ್ನಾ ಬೆಳ್ಳಿತೆರೆಗೆ ಕಾಲಿಟ್ಟಿದ್ದು, ‘ಚಾಂದ್ ಸಾ ರೋಶನ್ ತೇರಾ’ ಚಿತ್ರದ ಮೂಲಕ. ಆನಂತರ ಹಿಮ್ಮತ್‌ವಾಲಾ, ಎಂಟರ್‌ಟೈನ್‌ಮೆಂಟ್ ಹೀಗೆ ಒಟ್ಟು ಮೂರು ಬಾಲಿವುಡ್ ಚಿತ್ರಗಳಲ್ಲಿ ಆಕೆ ನಟಿಸಿದ್ದರೂ, ಅವ್ಯಾವೂ ಗೆಲುವು ಕಂಡಿರಲಿಲ್ಲ. ಅದೇನೇ ಇರಲಿ ಈ ಚಿತ್ರದ ಮೂಲಕ ತಮನ್ನಾಗೆ ಬಾಲಿವುಡ್‌ನಲ್ಲಿ ಅದೃಷ್ಟದ ಬಾಗಿಲು ತೆರೆಯುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News