ವಿವಾದದ ಸುಳಿಯಲ್ಲಿ ಕೆಂಪೇಗೌಡ ಟೈಟಲ್
ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ಯ ಭರ್ಜರಿ ಯಶಸ್ಸಿನ ಗುಂಗಿನಿಂದ ಇನ್ನೂ ಹೊರಬಾರದ ನಿರ್ಮಾಪಕ ಉಮಾಪತಿ, ಅದರ ಮುಂದುವರಿದ ಭಾಗವನ್ನು ನಿರ್ಮಿಸುವುದಾಗಿ ಘೋಷಣೆ ಮಾಡಿದ್ದಾರೆ. ಅದಕ್ಕೆ ಕೆಂಪೇಗೌಡ 2 ಎಂದು ಹೆಸರಿಡುವುದಾಗಿಯೂ ಹೇಳಿದ್ದಾರೆ. ಅಷ್ಟೇ ಅಲ್ಲ ತನ್ನ ಸೋದರ ಶಂಕರೇಗೌಡ ಅವರ ಜೊತೆಗೂಡಿ ಆ ಚಿತ್ರವನ್ನು ನಿರ್ಮಿಸುವುದಾಗಿಯೂ ಅವರು ಹೇಳಿಕೊಂಡಿದ್ದಾರೆ. ಉಮಾಪತಿ ಅವರು ಕೆಲವೇ ತಿಂಗಳುಗಳ ಹಿಂದೆ ಆ ಹೆಸರನ್ನು ರಿಜಿಸ್ಟರ್ ಮಾಡಿಸಿಕೊಳ್ಳಲು ಸಿದ್ಧತೆ ಕೂಡಾ ನಡೆಸಿದ್ದರು.
ಆದರೆ ಕೆಂಪೇಗೌಡ ಚಿತ್ರಕ್ಕೆ ನಿರ್ಮಾಪಕರಾಗಿದ್ದ ಶಂಕರೇಗೌಡ ಈ ಚಿತ್ರಕ್ಕೆ ಸಹನಿರ್ಮಾಪಕನಾಗಲು ಹಿಂದೇಟು ಹಾಕಿದ್ದಾರೆ. ಇದಕ್ಕೆ ಕಾರಣವೂ ಇದೆ. ತಮಿಳು ಚಿತ್ರ ‘ಸಿಂಗಂ’ನ ರಿಮೇಕ್ ಆಗಿದ್ದ ಕೆಂಪೇಗೌಡದಲ್ಲಿ ಸುದೀಪ್ ನಾಯಕನಾಗಿದ್ದರು. ಬಾಕ್ಸ್‌ಆಫೀಸ್‌ನಲ್ಲೂ ಅದು ಪ್ರಚಂಡ ಗೆಲುವು ಕಂಡಿತ್ತು. ಕೆಲವು ತಿಂಗಳ ಹಿಂದೆಯಷ್ಟೇ ಶಂಕರೇಗೌಡ ಅವರು ಆ ಚಿತ್ರದ ಮುಂದುವರಿದ ಭಾಗವಾಗಿ ‘ಕೆಂಪೇಗೌಡ 2’ ಚಿತ್ರ ನಿರ್ಮಿಸುವುದಾಗಿ ಪ್ರಕಟಿಸಿದ್ದರು. ಪ್ರಸ್ತುತ ಸುದೀಪ್ ಹಾಗೂ ಶಂಕರೇಗೌಡ ಅವರ ನಡುವಿನ ಬಾಂಧವ್ಯ ಅಷ್ಟಕ್ಕಷ್ಟೇ ಎಂಬಂತಿದೆ. ಹೀಗಾಗಿ ಅವರು ಕೂಡಾ ಇನ್ನೋರ್ವ ಜನಪ್ರಿಯ ನಟನನ್ನು ಹಾಕಿಕೊಂಡು ‘ಕೆಂಪೇಗೌಡ 2’ ಎಂಬ ಹೆಸರಿನ ಚಿತ್ರ ನಿರ್ಮಿಸಲು ಪ್ಲಾನ್ ಮಾಡಿದ್ದಾರೆ.
ಇದೀಗ ‘ಹೆಬ್ಬುಲಿ’ ಚಿತ್ರದ ಸಿಕ್ವೇಲ್‌ನ್ನು ‘ಕೆಂಪೇಗೌಡ 2’ ಹೆಸರಿನಲ್ಲಿ ನಿರ್ಮಿಸುವುದಕ್ಕೆ ಶಂಕರೇಗೌಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಟೈಟಲ್ ಮೇಲೆ ತನಗಿರುವ ಹಕ್ಕನ್ನು ಬಿಟ್ಟುಕೊಡಲು ನಿರಾಕರಿಸಿದ್ದಾರೆ.
ಈ ಬಗ್ಗೆ ಉಮಾಪತಿಯವರನ್ನು ಕೆಲವು ಸುದ್ದಿಗಾರರು ಸಂಪರ್ಕಿಸಿದಾಗ, ಈ ವಿಷಯವನ್ನು ದೊಡ್ಡದು ಮಾಡುವ ಅಗತ್ಯವಿಲ್ಲ. ಗುಡ್ಡ ಅಗೆದು ಇಲಿ ಹಿಡಿಯುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದಿದ್ದಾರಂತೆ.
ಒಂದು ವೇಳೆ ತನಗೆ ‘ಕೆಂಪೆಗೌಡ 2’ ಟೈಟಲ್ ಸಿಗಲಾರದೆಂಬ ಸುಳಿವು ಸಿಕ್ಕ ಬಳಿಕ, ಇನ್ನೊಂದು ಶೀರ್ಷಿಕೆಯನ್ನು ರಿಜಿಸ್ಟರ್ ಮಾಡಿಕೊಂಡಿದ್ದೇನೆ. ಇದು ‘ಹೆಬ್ಬುಲಿ’ಯ ಮುಂದುವರಿದ ಭಾಗವಾಗಲಿದೆ ಎಂದವರು ತಿಳಿಸಿದ್ದಾರೆ. ಚಿತ್ರ ಓಡುವುದು ಚಿತ್ರ ಕಥೆಯಿಂದಾಗಿಯೇ ಹೊರತು ಕೇವಲ ಟೈಟಲ್‌ನಿಂದಲ್ಲ ಎಂಬುದನ್ನು ನಾನು ಬಲ್ಲೆ ಎಂದವರು ವಿವಾದಕ್ಕೆ ಅಂತ್ಯಹಾಡಿದ್ದಾರೆ.