×
Ad

2021ರ ವೇಳೆಗೆ ಪ್ರಯಾಣಿಕರಿಗೆ ದೃಢೀಕೃತ ಬರ್ತ್ ಒದಗಿಸಲು ರೈಲ್ವೆ ಇಲಾಖೆ ಪ್ರಯತ್ನ

Update: 2017-04-28 19:40 IST

ಹೊಸದಿಲ್ಲಿ,ಎ.28: ಸಂಚಾರ ನಿಬಿಡ ಮಾರ್ಗಗಳಲ್ಲಿ ಹೆಚ್ಚಿನ ರೈಲುಗಳನ್ನು ಓಡಿಸುವ ಇಲಾಖೆಯ ಯೋಜನೆ ಕಾರ್ಯಗತಗೊಂಡರೆ 2021ರ ವೇಳೆಗೆ ಪ್ರಯಾಣಿಕರು ತಮ್ಮ ಆಯ್ಕೆಯ ರೈಲುಗಳಲ್ಲಿ ದೃಢೀಕೃತ ಬರ್ತ್ ಲಭ್ಯವಾಗುವ ಬಗ್ಗೆ ಭರವಸೆ ಇಟ್ಟುಕೊಳ್ಳಬಹುದು.

 ಪ್ರಸಕ್ತ, ಹೆಚ್ಚಿನ ಮಾರ್ಗಗಳಲ್ಲಿ....ವಿಶೇಷವಾಗಿ ದಿಲ್ಲಿ-ಹೌರಾ ಮತ್ತು ದಿಲ್ಲಿ-ಮುಂಬೈ ಮಾರ್ಗಗಳಲ್ಲಿ ರೈಲುಗಳಲ್ಲಿ ಬರ್ತ್‌ಗಳಿಗೆ ಬೇಡಿಕೆ ಮತ್ತು ಪೂರೈಕೆಯಲ್ಲಿ ಅಗಾಧ ಅಂತರವಿದೆ. ಇದರಿಂದಾಗಿ ಹೆಚ್ಚಿನ ಪ್ರಯಾಣಿಕರು ವೇಟಿಂಗ್ ಲಿಸ್ಟ್‌ನಲ್ಲಿ ಟಿಕೆಟ್‌ಗಳನ್ನು ಖರೀದಿಸುವುದು ಅನಿವಾರ್ಯವಾಗಿದೆ. ಇಂತಹ ಪ್ರಯಾಣಿಕರ ಟಿಕೆಟ್‌ಗಳು ದೃಢಪಡದಿದ್ದರೆ ಅವರಿಗೆ ಪ್ರಯಾಣದ ಅವಕಾಶವನ್ನು ನಿರಾಕರಿಸಲಾಗುತ್ತದೆ.

ಬೇಡಿಕೆ ಮತು ಪೂರೈಕೆ ನಡುವಿನ ಅಂತರವನ್ನು ನಿವಾರಿಸಲು ಪ್ರಯಾಣಿಕರು ಹೆಚ್ಚಿರುವ ಮಾರ್ಗಗಳಲ್ಲಿ ಇನ್ನಷ್ಟು ಪ್ರಯಾಣಿಕ ರೈಲುಗಳನ್ನು ಓಡಿಸಲು ಇಲಾಖೆಯು ಯೋಜನೆಯನ್ನು ಹಾಕಿಕೊಂಡಿದೆ.

ಸರಕು ಸಾಗಾಣಿಕೆ ರೈಲುಗಳು ಅವುಗಳಿಗಾಗಿಯೇ ನಿರ್ಮಾಣಗೊಳ್ಳುತ್ತಿರುವ ಪ್ರತ್ಯೇಕ ಕಾರಿಡಾರ್‌ಗೆ ವರ್ಗಾವಣೆಗೊಂಡ ಬಳಿಕ ಮತ್ತು ವೇಗದ ರೈಲುಗಳ ಸಂಚಾರಕ್ಕಾಗಿ ದಿಲ್ಲಿ-ಹೌರಾ ಮತ್ತು ದಿಲ್ಲಿ-ಮುಂಬೈ ಮಾರ್ಗಗಳಲ್ಲಿ ಮೂಲಸೌಕರ್ಯಗಳು ಮೇಲ್ದರ್ಜೆಗೇರಿದ ಬಳಿಕ ದೃಢೀಕತ ಬರ್ತ್‌ಗಳನ್ನು ಒದಗಿಸುವುದು ಸಾಧ್ಯವಾಗಲಿದೆ ಎಂದು ಶುಕ್ರವಾರ ಇಲ್ಲಿ ಸಿಐಐ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ರೈಲ್ವೆ ಸಚಿವ ಸುರೇಶ ಪ್ರಭು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News