ಮೊದಲ ದಿನವೇ ದಾಖಲೆ ಪುಡಿಗಟ್ಟಿದ ಬಾಹುಬಲಿ-2
ಮುಂಬೈ: ದೇಶಾದ್ಯಂತ 6500 ಪರದೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿ ಹೌಸ್‌ಫುಲ್ ಪ್ರದರ್ಶನ ಕಂಡ ಬಾಹುಬಲಿ-2, ಮೊದಲ ದಿನವೇ ಈ ಹಿಂದಿನ ಎಲ್ಲ ಬಾಕ್ಸ್ ಆಫೀಸ್ ದಾಖಲೆಗಳನ್ನು ಪುಡಿಗಟ್ಟಿದೆ. ಇದು ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ಗಳಿಕೆಯ ಚಿತ್ರ ಎಂಬ ದಾಖಲೆ ಬರೆಯುವ ಎಲ್ಲ ಲಕ್ಷಣಗಳಿವೆ. ಬಹುತೇಕ ಎಲ್ಲ ಚಿತ್ರಮಂದಿರಗಳ ಹೊರಗೆ ಸಾಲು ಸಾಲು ಕಾಯುತ್ತಿದ್ದರು. ಇಂದಿನ ಬಾಹುಬಲಿ ಗಳಿಕೆ 2017ರಲ್ಲಿ ಬಿಡುಗಡೆಗೊಂಡ ಚಿತ್ರವೊಂದು ಗಳಿಸಿದ ಅತಿಹೆಚ್ಚು ಆದಾಯವಾಗಿದ್ದು, ಇದುವರೆಗೆ ರಯೀಸ್‌ನ 20.42 ಕೋಟಿ ರೂಪಾಯಿ ಗಳಿಕೆ ದಾಖಲೆಯಾಗಿತ್ತು.
ಚಿತ್ರೋದ್ಯಮ ವಿಶ್ಲೇಷಕ ತರಣ್ ಆದರ್ಶ್ ಅವರ ಪ್ರಕಾರ, "ಬಾಹುಬಲಿ-2 ಗೇಮ್‌ಚೇಂಜರ್ ಆಗುವುದರಲ್ಲಿ ಸಂಶಯವೇ ಇಲ್ಲ. ಥಿಯೇಟರ್‌ಗಳ ಹೊರಗೆ ಜನಸಾಗರ ಇದೆ...ಹೌಸ್‌ಫುಲ್ ಎಂಬ ಫಲಕಗಳು ಎಲ್ಲೆಡೆ ರಾರಾಜಿಸುತ್ತಿವೆ". "ಅಂತರರಾಷ್ಟ್ರೀಯ ಗುಣಮಟ್ಟದ ನೈಜ ಭಾರತೀಯ ಪೌರಾಣಿಕ ಚಿತ್ರ, ಚಿತ್ರಕಥೆ, ನಟನೆ, ಭಾವನೆ, ಆಕ್ಷನ್, ಸಂಗೀತ ಎಲ್ಲವೂ ಅದ್ಭುತ" ಎಂದು ರಮೇಶ್ ಬಾಲಾ ಟ್ವೀಟ್ ಮಾಡಿದ್ದಾರೆ.
ಬಾಹುಬಲಿ-2 ಚಿತ್ರ, ಅಮೀರ್‌ಖಾನ್ ಅವರ ದಂಗಲ್ ಚಿತ್ರದ ದಾಖಲೆಯನ್ನು ಅಳಿಸಿಹಾಕಿದೆ ಎಂದು ಬುಕ್‌ಮೈಶೋ ದೃಢಪಡಿಸಿದೆ. ಬಾಹುಬಲಿ-2 ಚಿತ್ರದ ಮುಂಗಡ ಬುಕ್ಕಿಂಗ್‌ಗೆ ಅಭೂತಪೂರ್ವ ದಟ್ಟಣೆ ಇದೆ. ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಟಿಕೆಟ್ ಮಾರಾಟ ಮಾಡಿದ್ದೇವೆ. ದಕ್ಷಿಣ ಭಾರತದಲ್ಲಿ ಜನ ಚಿತ್ರ ನೋಡಲು ಮುಗಿಬೀಳುತ್ತಿದ್ದು, ಉತ್ತರದಲ್ಲೂ ಅದ್ಭುತ ಸ್ಪಂದನೆ ದೊರಕಿದೆ ಎಂದು ಸಿಓಓ ಆಶಿಶ್ ಸಕ್ಸೇನಾ ಹೇಳಿದ್ದಾರೆ.
ಬಿಡುಗಡೆಯ ಮೊದಲ ಮೂರು ದಿನದಲ್ಲೇ ಚಿತ್ರದ ಗಳಿಕೆ 200 ಕೋಟಿ ದಾಟಿದರೆ ಆಶ್ಚರ್ಯವಿಲ್ಲ ಎಂದು ಚಿತ್ರ ವಿತರಕ ಅಕ್ಷಯ್ ರಾಠಿ ಹೇಳಿದ್ದಾರೆ. ಮೊದಲ ದಿನವೇ 70 ಕೋಟಿ ಗಳಿಸುವ ಸೂಚನೆ ಇದೆ. ಚಿತ್ರ 230 ಕೋಟಿಗೂ ಅಧಿಕ ಆದಾಯ ತರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ದಕ್ಷಿಣ ಭಾರತ ಹಾಗೂ ಬಾಲಿವುಡ್‌ನಲ್ಲಿ ಚಿತ್ರಕ್ಕೆ ಮೆಚ್ಚುಗೆಯ ಸುರಿಮಳೆ ಹರಿದು ಬರುತ್ತಿದೆ. "ಹೆಚ್ಚಿನದೇನೂ ಹೇಳಬೇಖಿಲ್ಲ. ಇದು ಎಲ್ಲ ನಿಯಮ ಮುರಿದಿದ್ದು, ಪ್ರತಿಯೊಂದನ್ನೂ ಮರುವ್ಯಾಖ್ಯಾನ ಮಾಡಿದೆ. ಇದು ಕೇವಲ ಚಿತ್ರವಲ್ಲ; ಸಡಗರ" ಎಂದು ನಾನಿ ಬಣ್ಣಿಸಿದ್ದಾರೆ.
ಚಿತ್ರದ ಹಕ್ಕುಗಳ ಮಾರಾಟಕ್ಕೆ ಪೂರ್ವದಲ್ಲೇ ಸುಮಾರು 350 ಕೋಟಿ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ ಎಂದು ಚಿತ್ರೋದ್ಯಮ ವಿಶ್ಲೇಷಕರು ಅಂದಾಜಿಸಿದ್ದಾರೆ.