ಮುಸ್ಲಿಮರನ್ನು ಹಂದಿಗಳಿಗೆ ಹೋಲಿಸಿದ್ದ ಬಿಜೆಪಿ ಸಂಸದ : ವರದಿಯಲ್ಲಿ ಉಲ್ಲೇಖ
ಲಕ್ನೊ, ಎ.29: ಎಪ್ರಿಲ್ 20ರಂದು ನಡೆದಿದ್ದ ಸಹರಣ್‌ಪುರ ಹಿಂಸಾಚಾರ ಪ್ರಕರಣದ ಬಗ್ಗೆ ವಿಚಾರಣೆ ನಡೆಸಲು ಸ್ಥಳಕ್ಕೆ ಭೇಟಿ ನೀಡಿದ್ದ ಸಮಾಜವಾದಿ ಪಕ್ಷದ ನಿಯೋಗವೊಂದು ನೀಡಿರುವ ವರದಿಯಲ್ಲಿ, ಬಿಜೆಪಿ ಸಂಸದ ಮುಸ್ಲಿಮರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವುದಾಗಿ ತಿಳಿಸಲಾಗಿದೆ.
ನಾನು ಇಲ್ಲಿಯ ಕ್ಯಾಪ್ಟನ್ ಮತ್ತು ನಿಮಗೆ ಆದೇಶ ನೀಡುತ್ತಿದ್ದೇನೆ- ಈ ಹಂದಿಗಳಿಗೆ (ಮುಸ್ಲಿಮರಿಗೆ) ಗುಂಡಿಕ್ಕಿ. ರಾಜ್ಯದಲ್ಲಿ ಈಗ ನಮ್ಮದೇ ಆಡಳಿತವಿದೆ- ಹೀಗೆಂದು ಬಿಜೆಪಿ ಸಂಸದ ರಾಮ್ ಲಖನ್‌ಪಾಲ್ ಶರ್ಮ ಪೊಲೀಸರಿಗೆ ಸೂಚಿಸಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈ ಆದೇಶವನ್ನು ಪಾಲಿಸಲು ಪೊಲೀಸರು ನಿರಾಕರಿಸಿದಾಗ ಸಂಸದನ ಕಿರಿಯ ಸೋದರ ರಾಹುಲ್ ಲಖನ್‌ಪಾಲ್ ಶರ್ಮ ಸ್ಥಳದಲ್ಲಿದ್ದ ಕೆಲವು ಅಧಿಕಾರಿಗಳ ಕಾಲರ್‌ಪಟ್ಟಿ ಹಿಡಿದು ಅವರಿಗೆ ಬೆದರಿಕೆ ಹಾಕಿದ್ದರು . ಬಳಿಕ ಪಕ್ಷದ ಕಾರ್ಯಕರ್ತರು ಪೊಲೀಸರ ಮೇಲೆ ಹಲ್ಲೆಗೆ ಮುಂದಾದರು ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಜಿಲ್ಲಾಡಳಿತ ಅನುಮತಿ ನಿರಾಕರಿಸಿದ್ದರೂ ಸಂಸದ ರಾಮ್‌ಲಖನ್ ಶರ್ಮ ಮತ್ತವರ ಬೆಂಬಲಿಗರು ಡಾ. ಬಿ.ಆರ್. ಅಂಬೇಡ್ಕರ್ ಅವರ ಗೌರವಾರ್ಥ ಎಪ್ರಿಲ್ 20ರಂದು ಸಹರಣ್‌ಪುರದಲ್ಲಿ ರ್ಯಾಲಿಯೊಂದನ್ನು ಆಯೋಜಿಸಿದ್ದರು.ರ್ಯಾಲಿಯು ದುಧಾಲಿ ಗ್ರಾಮ ಪ್ರವೇಶಿಸಿದಾಗ ಬಿಜೆಪಿ ಕಾರ್ಯಕರ್ತರು ಮುಸ್ಲಿಮರ ವಿರುದ್ಧ ಅವಹೇಳನಕಾರಿ ಘೋಷಣೆ ಕೂಗತೊಡಗಿದರು. ಈ ಗ್ರಾಮದ ಜನಸಂಖ್ಯೆಯಲ್ಲಿ ಶೇ.85ರಷ್ಟು ಮುಸ್ಲಿಮರು ಮತ್ತು ಉಳಿದವರು ದಲಿತ ಸಮುದಾಯದವರು. ಈ ಸಂದರ್ಭ ಪೊಲೀಸರು ಮಧ್ಯಪ್ರವೇಶಿಸಲು ಯತ್ನಿಸಿದಾಗ ಉದ್ರಿಕ್ತಗೊಂಡ ಬಿಜೆಪಿ ಕಾರ್ಯಕರ್ತರು ಹಿಂಸಾಚಾರಕ್ಕೆ ಮುಂದಾಗಿ ವಾಹನ ಮತ್ತು ಸಾರ್ವಜನಿಕ ಆಸ್ತಿಗೆ ಬೆಂಕಿ ಹಚ್ಚಿದ್ದರು.
ಸಮಾಜವಾದಿ ಪಕ್ಷದ ಶಾಸಕ ಸಂಜಯ್ ಕುಮಾರ್ ಗರ್ಗ್ ಅಂದಿಪಿ ನ ಡಿಜಿಜಾವೇದ್ ಅಹ್ಮದ್ ಅವರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ ಬಳಿಕವಷ್ಟೇ ಪೊಲೀಸರು ಬಿಜೆಪಿ ಕಾರ್ಯಕರ್ತರ ವಿರುದ್ಧ ಕ್ರಮಕ್ಕೆ ಮುಂದಾದರು ಎಂಬುದು ನಿಯೋಗದ ಸದಸ್ಯರ ಹೇಳಿಕೆ. ಆದರೆ ಇದನ್ನು ನಿರಾಕರಿಸಿರುವ ಪೊಲೀಸರು, ಗಲಭೆಕೋರರ ವಿರುದ್ಧ ತಾವು ಸ್ವಯಂಪ್ರೇರಿತರಾಗಿ ಕ್ರಮಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾರೆ.