ಶತಮಾನಗಳ ಹಿಂದೆಯೇ ಬಸವಣ್ಣನವರು ಪ್ರಜಾಪ್ರಭುತ್ವದ ಕನಸು ಕಂಡಿದ್ದರು: ಪ್ರಧಾನಿ
ಹೊಸದಿಲ್ಲಿ,ಎ.29: ಬಸವ ಜಯಂತಿ ಅಂಗವಾಗಿ ಶನಿವಾರ ಇಲ್ಲಿಯ ವಿಜ್ಞಾನ ಭವನದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದಾರ್ಶನಿಕ ಬಸವಣ್ಣನವರ ವಚನಗಳ 23 ಭಾಷೆಗಳಲ್ಲಿ ಅನುವಾದಗಳನ್ನು ಲೋಕಾರ್ಪಣೆ ಗೊಳಿಸಿದರು. ಇದೇ ವೇಳೆ ಬಸವ ಸಮಿತಿಯ ಸುವರ್ಣ ಮಹೋತ್ಸವ ಆಚರಣೆಗೂ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತದ ಇತಿಹಾಸವು ಸೋಲು,ಬಡತನ ಅಥವಾ ವಸಾಹತುಶಾಹಿ ಮಾತ್ರ ಕುರಿತು ಅಲ್ಲ. ಭಾರತವು ಉತ್ತಮ ಆಡಳಿತ, ಅಹಿಂಸೆ ಮತ್ತು ಸತ್ಯಾಗ್ರಹದ ಸಂದೇಶವನ್ನೂ ನೀಡಿದೆ ಎಂದರು.
ಬಸವಣ್ಣನವರಿಗೆ ಪುಷ್ಪಾಂಜಲಿಗಳನು ಸಲ್ಲಿಸಿದ ಮೋದಿ, ಅವರು ಶತಮಾನಗಳ ಹಿಂದೆಯೇ ಪ್ರಜಾಪ್ರಭುತ್ವದ ಕನಸು ಕಂಡಿದ್ದರು. ಸಮಾಜದಲ್ಲಿ ಪರಿವರ್ತನೆಗಳನ್ನು ತಂದ ಇಂತಹ ಮಹಾನ್ ವ್ಯಕ್ತಿಗಳ ಆಶೀರ್ವಾದ ಈ ದೇಶಕ್ಕಿದೆ ಎಂದರು.
ಬಸವೇಶ್ವರರ ವಚನಗಳನ್ನು ಉತ್ತಮ ಆಡಳಿತದ ಬುನಾದಿ ಎಂದು ಬಣ್ಣಿಸಿದ ಅವರು, ವಸತಿ,ವಿದ್ಯುತ್ ಮತ್ತು ರಸ್ತೆಯಂತಹ ಅಭಿವೃದ್ಧಿಯ ಫಲಗಳು ಯಾವುದೇ ಭೇದವಿಲ್ಲದೆ ಎಲ್ಲರಿಗೂ ತಲುಪಬೇಕು. ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ನ ನಿಜವಾದ ಅರ್ಥ ಇದುವೇ ಆಗಿದೆ ಎಂದರು.
2015,ನವಂಬರ್‌ನಲ್ಲಿ ಲಂಡನ್‌ನಲ್ಲಿ ಬಸವೇಶ್ವರರ ಪುತ್ಥಳಿಯನ್ನು ತಾನು ಅನಾವರಣ ಗೊಳಿಸಿದ್ದ ಸಂದರ್ಭವನ್ನು ಅವರು ಸ್ಮರಿಸಿಕೊಂಡರು.
ತನ್ನ ಭಾಷಣದ ಬಳಿಕ ಪ್ರಧಾನಿಯವರು ಸಭಿಕರು ಕುಳಿತಿದ್ದಲ್ಲಿಗೆ ತೆರಳಿ ವಿಚಾರವಾದಿ, ಖ್ಯಾತ ಕನ್ನಡ ವಿದ್ವಾಂಸ ದಿ.ಎಂ.ಎಂ.ಕಲಬುರ್ಗಿ ಅವರ ಕುಟುಂಬ ಸದಸ್ಯರನ್ನು ಭೇಟಿ ಯಾದರು.