×
Ad

ಬಾಹುಬಲಿ 2 : ಹಾಲಿವುಡ್ ತಂತ್ರಜ್ಞಾನ - ಬಾಲಿವುಡ್ ಮೆಲೋಡ್ರಾಮ

Update: 2017-04-30 10:32 IST

ಇತಿಹಾಸಕ್ಕೂ ಸೇರದ, ಪುರಾಣವೂ ಅಲ್ಲದ ಒಂದು ಫ್ಯಾಂಟಸಿ ಪಾತ್ರವನ್ನು ವೈಭವೀಕರಿಸಿ ಕಟ್ಟಿಕೊಟ್ಟಿರುವ ಚಿತ್ರ ‘ಬಾಹುಬಲಿ 2’. ಈ ಹಿಂದಿನ ಕತೆಯ ಮುಂದುವರಿದ ಭಾಗ ಇದು. ವರ್ತಮಾನದ ಸಂದರ್ಭದಲ್ಲಿ ಶ್ರೀಸಾಮಾನ್ಯನ ಮನಸ್ಸನ್ನು ಅರ್ಥ ಮಾಡಿಕೊಂಡವರಂತೆ ಪಾತ್ರಗಳನ್ನು, ದೃಶ್ಯಗಳನ್ನೂ, ಹೂಂಕಾರಗಳನ್ನ್ನೂ, ಅಬ್ಬರಗಳನ್ನೂ, ರೋಚಕತೆಯನ್ನೂ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ರಾಜವೌಳಿ. ವರ್ತಮಾನಕ್ಕೆ ಬೇಕಾಗಿರುವುದು ಇತಿಹಾಸವೂ ಅಲ್ಲ, ವಾಸ್ತವವೂ ಅಲ್ಲ, ರೋಚಕತೆ. ಸುಳ್ಳನ್ನು ಸತ್ಯವೆಂಬಂತೆ ಪರಿಭಾವಿಸಿ ಆಸ್ವಾದಿಸುವ ಜನರಿಗಾಗಿ 250 ಕೋಟಿ ರೂ.ಗಳನ್ನು ಬಾಹುಬಲಿ ಚಿತ್ರಕ್ಕೆ ಸುರಿಯಲಾಗಿದೆ. ಇದೊಂದು ಥರ, ನರೇಂದ್ರ ಮೋದಿ ಪ್ರಮಾಣ ವಚನದ ಸಂದರ್ಭದಲ್ಲಿ ಮಾಡಿದ ಭಾವಾವೇಶದ ಭಾಷಣಕ್ಕೆ ಕಾರ್ಪೊರೇಟ್ ಜನರು ಕೋಟಿಗಟ್ಲಳೆ ದುಡ್ಡು ಸುರಿದಂತೆ. ಶ್ರೀಸಾಮಾನ್ಯನಿಗೆ ವಾಸ್ತವ ಬೇಕಾಗಿಲ್ಲ. ಎಲ್ಲ ಪ್ರಜ್ಞೆಗಳನ್ನು ಪಕ್ಕಕ್ಕಿಟ್ಟು ಇಡೀ ದೇಶ ನರೇಂದ್ರಮೋದಿಯ ಭಾಷಣವನ್ನು ಆಸ್ವಾದಿಸಿದಂತೆ ಅಥವಾ ಆಸ್ವಾದಿಸುತ್ತಿರುವಂತೆ, ಬಾಹುಬಲಿ ಚಿತ್ರಕ್ಕೆ ದೇಶ ಮುಗಿ ಬಿದ್ದಿದೆ. ಅಥವಾ ಮಾಧ್ಯಮಗಳು ಅಂತಹದೊಂದು ವಾತಾವರಣವನ್ನು ಸೃಷ್ಟಿ ಮಾಡಲು ಯಶಸ್ವಿಯಾಗಿದೆ.

ನಿಜಕ್ಕೂ ‘ಬಾಹುಬಲಿ’ ಚಿತ್ರಕ್ಕಾಗಿ 250 ಕೋಟಿ ರೂ. ಗಳನ್ನು ಯಾಕಾಗಿ ಸುರಿಯಲಾಗಿದೆ? ಈ ಚಿತ್ರ ಅಂತಿಮವಾಗಿ ಏನನ್ನು ಹೇಳುತ್ತದೆ? ಒಬ್ಬ ಕಾಲ್ಪನಿಕ ರಾಜನ ಶೌರ್ಯ ಮತ್ತು ಆ ರಾಜವೈಭವದ ಕುರುಡು ಆರಾಧನೆಯನ್ನು ಕೋಟಿ ಕೋಟಿ ಹಣವನ್ನು ಚೆಲ್ಲಿ ರಮ್ಯವಾಗಿ ರೋಚಕವಾಗಿ ಜನರ ಮೇಲೆ ಹೇರುವ ವರ್ತಮಾನದ ಅಗತ್ಯವೇನು? ಹಳೆಯದನ್ನೆಲ್ಲ ರೋಚಕವಾಗಿ, ರಮ್ಯವಾಗಿ ಹೇಳುವ ಸದ್ಯದ ರಾಜಕೀಯಕ್ಕೆ ಪೂರಕವಾಗಿ ಈ ಚಿತ್ರ ನಿರ್ಮಾಣವಾಗಿದೆಯೇ? ಇಡೀ ಚಿತ್ರ ಮುಗಿದ ಮೇಲೆ ನಮ್ಮ ಮನದಲ್ಲಿ ಈ ಪ್ರಶ್ನೆಗಳು ಸಾಲುಸಾಲಾಗಿ ಬಂದು ನಿಲ್ಲುತ್ತವೆ. ಹೊರತು, ಚಿತ್ರ ತನ್ನ ದೃಶ್ಯದ ಮೂಲಕವಾಗಲಿ, ಕತೆಯ ಮೂಲಕವಾಗಲಿ, ಪಾತ್ರಗಳ ಮೂಲಕವಾಗಿ ನಮ್ಮನ್ನು ಯಾವ ರೀತಿಯಲ್ಲೂ ಕಾಡುವುದಿಲ್ಲ. ಚಿತ್ರಮಂದಿರದಿಂದ ಹೊರ ಬಂದಾಗ ನಮ್ಮೆಳಗೆ ಚಿತ್ರದ ಪ್ರಸ್ತುತತೆಯ ಕುರಿತ ಪ್ರಶ್ನೆಗಳ ಹೊರತಾಗಿ ಏನೇನೂ ಉಳಿಯುವುದಿಲ್ಲ.

ಬಾಹುಬಲಿ ಭಾಗ 1ರಲ್ಲಿ ನಾಯಕ ತನ್ನ ಹುಟ್ಟಿನ ಮೂಲವನ್ನು ಹುಡುಕುತ್ತಾ ಮಹಿಷ್ಮತಿ ತಲುಪುತ್ತಾನೆ. ಅಲ್ಲಿ ತನ್ನ ತಂದೆ, ತಾಯಂದಿರಿಗೆ ಭಲ್ಲದೇವ(ರಾಣಾ ದಗ್ಗುಬಟ್ಟಿ) ಮತ್ತು ಆತನ ತಂದೆ ಬಿಜ್ಜಳದೇವ(ನಾಸೆರ್)ನಿಂದಾದ ಅನ್ಯಾಯ ತಿಳಿಯುತ್ತದೆ. ಚಿತ್ರ, ಬಾಹುಬಲಿಯನ್ನು ಕಟ್ಟಪ್ಪ ಯಾಕೆ ಕೊಂದ ಎನ್ನುವ ಪ್ರಶ್ನೆಯೊಂದಿಗೆ ಅರ್ಧದಲ್ಲೇ ನಿಲ್ಲುತ್ತದೆ. ಈ ಚಿತ್ರ ರಾಷ್ಟ್ರಪಶಸ್ತಿಯನ್ನು ಪಡೆದಿದ್ದು ಕಟ್ಟಪ್ಪ ಬಾಹುಬಲಿಯನ್ನು ಯಾಕೆ ಕೊಂದ ಎಂಬ ಪ್ರಶ್ನೆಗಿಂತಲೂ ಹೆಚ್ಚು ತೂಕ ಪಡೆಯಿತು. ಭಾರತೀಯ ಚಿತ್ರಕ್ಕೆ ಹೊಸತಾಗಿರುವ ಅದ್ಭುತ ದೃಶ್ಯವೈಭವವನ್ನು ಹ್ಜೊರತು ಪಡಿಸಿದಂತೆ, ಭಾಗ ಒಂದರ ಒಟ್ಟು ಕತೆಯಲ್ಲೂ ಹೊಸತನವಿರಲಿಲ್ಲ. ತಂದೆಯಿಂದ ಬೇರ್ಪಡುವ ಮಗ, ಬಳಿಕ ತನ್ನ ತಂದೆ ತಾಯಿಯನ್ನು ಹುಡುಕಿ, ಖಳರ ವಿರುದ್ಧ ಸೇಡು ತೀರಿಸುವ ಕತೆಗಳು ಎಲ್ಲ ಭಾಷೆಗಳಲ್ಲೂ ಸಾವಿರಾರು ಬಾರಿ ಬಂದು ಸವಕಲಾಗಿದೆ.

ಅದನ್ನೇ ತಂತ್ರಜ್ಞಾನದ ಮೂಲಕ ವೈಭವೀಕರಿಸಿ, ಪ್ರೇಕ್ಷಕನನ್ನು ಬೆಚ್ಚಿ ಬೀಳಿಸುವ ಪ್ರಯತ್ನ ಮಾಡಿದ್ದರು. ರಾಜಪ್ರಭುತ್ವದ ಕುರುಡು ಆರಾಧನೆಗೆ, ಹುಸಿ ವೈಭವೀಕರಣಕ್ಕೆ ಸಂಗೀತ, ತಂತ್ರಜ್ಞಾನ ಎಲ್ಲವನ್ನೂ ಗರಿಷ್ಠ ರೀತಿಯಲ್ಲಿ ಬಳಸಿಕೊಂಡಿದ್ದರು. ಒಂದು ರೀತಿಯಲ್ಲಿ ಚಿತ್ರಕ್ಕಿಂತ ಅದರ ಬಂಗಾರದ ಚೌಕಟ್ಟೇ ಎಲ್ಲರನ್ನು ಸೆಳೆಯಿತು. ಇದೀಗ ಭಾಗ ಎರಡರಲ್ಲಿ ಅರ್ಧದಲ್ಲಿ ನಿಂತ ಚಿತ್ರವನ್ನು ರಾಜವೌಳಿ ಪೂರ್ಣಗೊಳಿಸಿದ್ದಾರೆ. ಈ ಚಿತ್ರದಲ್ಲೂ ಪ್ರಧಾನ ಭೂಮಿಕೆಯಲ್ಲಿ ಅಮರೇಂದ್ರ ಬಾಹುಬಲಿಯ ಕತೆಯೇ ಮುಂದುವರಿಯುತ್ತದೆ. ಇಲ್ಲಿ ಕುಂತಳ ದೇಶದ ರಾಜಕುಮಾರಿ ದೇವಸೇನಾ(ಅನುಷ್ಕಾ ಶೆಟ್ಟಿ) ಜೊತೆಗಿನ ಬಾಹುಬಲಿಯ ಪ್ರೇಮ ಕತೆಯೇ ಪ್ರಧಾನ ವಸ್ತು. ಬಾಹುಬಲಿ ರಾಜನಾಗದಂತೆ ತಡೆಯುವುದಕ್ಕೂ ಈ ಪ್ರೇಮವೇ ಕಾರಣವಾಗುತ್ತದೆ. ಭಲ್ಲಾ ಇದನ್ನು ಬಳಸಿಕ್ಡೊಂಡು ರಾಜಮಾತೆ(ಶಿವಗಾಮಿ)ಯ ಜೊತೆ ಅಮರೇಂದ್ರ ಬಾಹುಬಲಿಗೆ ವೈಷಮ್ಯವನ್ನು ತಂದಿಡುತ್ತಾನೆ. ಸಂಚಿನಿಂದಾಗಿ ಬಾಹುಬಲಿ ರಾಜಪದವಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಅಂತಿಮವಾಗಿ ರಾಜಮಾತೆಯ ಆದೇಶಕ್ಕನುಗುಣವಾಗಿ ಕಟಪ್ಪ, ಬಾಹುಬಲಿಯನ್ನು ಕೊಂದು ಹಾಕುತ್ತಾನೆ. ‘ಕಟ್ಟಪ್ಪ ಬಾಹುಬಲಿಯನ್ನು ಯಾಕೆ ಕೊಂದ?’ ಎಂಬ ಪ್ರಶ್ನೆಯನ್ನು ಮುಂದಿರಿಸಿಕೊಂಡು ಚಿತ್ರತಂಡ ಪಡೆದುಕೊಂಡ ಪ್ರಚಾರಕ್ಕೆ ಹೋಲಿಸಿದರೆ, ಪ್ರೇಕ್ಷಕನಿಗೆ ಪ್ರಶ್ನೆಗೆ ಸಿಕ್ಕ ಉತ್ತರ ನಿರಾಶೆ ತರುವುದರಲ್ಲಿ ಅನುಮಾನವಿಲ್ಲ.

 ಅಂತಿಮವಾಗಿ ಬಾಹುಬಲಿಯ ಪುತ್ರ ಮಹೇಂದ್ರ ಬಾಹುಬಲಿ ತನ್ನ ಬೆಂಬಲಿಗರ ಜೊತೆಗೆ ಮಹಿಷ್ಮತಿಯ ವಿರುದ್ಧ ದಾಳಿ ನಡೆಸಿ ತಾಯಿಯನ್ನು ಬಿಡುಗಡೆ ಮಾಡಿ, ಭಲ್ಲಾನನ್ನು ಕೊಂದು ರಾಜನಾಗುತ್ತಾನೆ. ಭಾಗ 1ಕ್ಕೆ ಹೋಲಿಸಿದರೆ ಈ ಚಿತ್ರದ ಕತೆ ಹೆಚ್ಚು ಸಹ್ಯವಾಗಿದೆ. ಹಾಲಿವುಡ್ ತಂತ್ರಜ್ಞಾನಗಳನ್ನು, ಗ್ರಾಫಿಕ್ಸ್‌ಗಳನ್ನು ಬಳಸಿಕೊಂಡು ಸಾಹಸ, ಯುದ್ಧ ದೃಶ್ಯಗಳೆಲ್ಲವನ್ನೂ ನಿರ್ದೇಶಕ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ. ಚಿತ್ರವನ್ನು ಹಿಡಿದು ನಿಲ್ಲಿಸುವುದೂ ಆ ತಂತ್ರಜ್ಞಾನವೇ ಆಗಿದೆ. ಅನುಷ್ಕಾ ಶೆಟ್ಟಿ-ಬಾಹುಬಲಿ ಪ್ರೇಮದ ದೃಶ್ಯಗಳು ಹಿತವಾಗಿವೆ. ಆದರೆ ಬಾಹುಬಲಿಯ ಸಾವಿನ ಬಳಿಕ ಚಿತ್ರ ತನ್ನ ವೇಗವನ್ನು ಕಳೆದುಕೊಳ್ಳುತ್ತದೆ. ಮುಂದೇನು ನಡೆಯುತ್ತದೆ ಎನ್ನುವುದನ್ನು ಪ್ರೇಕ್ಷಕ ಸುಲಭದಲ್ಲಿ ಊಹಿಸಬಲ್ಲವನಾದ ಕಾರಣ, ತಂತ್ರಜ್ಞಾನಗಳ ಮೂಲಕ ಅತಿಮಾನುಷ ಸಾಹಸಗಳಿಂದಲೇ ಪ್ರೇಕ್ಷಕನನ್ನು ತೃಪ್ತಿಪಡಿಸಲು ನಿರ್ದೇಶಕರು ಹವಣಿಸಿದ್ದಾರೆ. ಎಂ. ಎಂ. ಕೀರವಾಣಿಯ ಸಂಗೀತ ಚಿತ್ರದ ಅಬ್ಬರ ಆವೇಶಗಳಿಗೆ ಪೂರಕವಾಗಿದೆ.

ಮುಖ್ಯವಾಗಿ ಚಿತ್ರದ ಕೊರತೆಯೇ ಕತೆ. ಕೆ. ವಿ. ವಿಜಯೇಂದ್ರ ಪ್ರಸಾದ್ ತನ್ನ ಮಿತಿಯಲ್ಲಿ ಕತೆಯನ್ನು ಗರಿಷ್ಠ ಮಟ್ಟದಲ್ಲಿ ಎಳೆದಿದ್ದಾರೆ. ದಗ್ಗುಭಟ್ಟಿಯ ಭಲ್ಲಾ ಪಾತ್ರದ ಮುಂದೆ ಈ ಬಾರಿಯೂ ಅಮರೇಂದ್ರ ಬಾಹುಬಲಿ ಮತ್ತು ಮಹೇಂದ್ರ ಬಾಹುಬಲಿಯಾಗಿ ಪ್ರಭಾ ನೀರಸವಾಗಿ ಕಾಣುತ್ತಾನೆ. ರಾಜಮಾತೆ ಶಿವಗಾಮಿಯ ಪಾತ್ರಕ್ಕೆ ಬೇಕಾದ ಮೆಲೋಡ್ರಾಮಗಳಿಗೆ ರಮ್ಯಾಕೃಷ್ಣ ಹೊಂದಿಕೊಳ್ಳುತ್ತಾರೆ. ಸಾಹಸ ಸನ್ನಿವೇಶಗಳಲ್ಲಿ ಅನುಷ್ಕಾ, ಪ್ರಭಾ ಮಿಂಚುತ್ತಾರೆ. ಇರುವುದರಲ್ಲಿ ಒಂದೇ ಒಂದು ಭಾವುಕ ಪೋಷಕ ಪಾತ್ರ ಕಟ್ಟಪ್ಪ(ಸತ್ಯರಾಜ್)ನದು. ಪರವಾಗಿಲ್ಲ ಎನಿಸುವಂತೆ ನಟಿಸಿದ್ದಾರೆ. ಹಾಲಿವುಡ್ ಮಾದರಿಯ ತಂತ್ರಜ್ಞಾನವನ್ನು ಬಳಸಿಕೊಂಡು ಭಾರತೀಯ ಚಿತ್ರಗಳನ್ನೂ ಮಾಡಬಹುದು ಎನ್ನುವುದನ್ನು ಭಾಗಶಃ ರಾಜವೌಳಿ ಸಾಧಿಸಿದ್ದಾರೆ. ಆದರೆ ಅಷ್ಟಕ್ಕೆ ಮಾತ್ರ ನಾವು ಈ ಚಿತ್ರವನ್ನು ಬೆನ್‌ಹರ್, ಟೆನ್‌ಕಮಾಂಡ್‌ಮೆಂಟ್ಸನಂತಹ ಚಿತ್ರದ ಜೊತೆಗೆ ಹೋಲಿಸುವಂತಿಲ್ಲ.

ಯಾಕೆಂದರೆ ಅಂತಿಮವಾಗಿ ಒಂದು ಸಿನೆಮಾ ಪ್ರೇಕ್ಷಕರ ಜೊತೆಗೆ ನಡೆಸುವ ಸಂವಾದ, ಚಿತ್ರಮಂದಿರದಿಂದ ಹೊರಗೆ ಬಂದ ಬಳಿಕವೂ ಉಳಿಯಬೇಕು. ಅಂತಹ ಒಂದು ಸಂವಾದವನ್ನು ಈ ಚಿತ್ರದಿಂದ ನಿರೀಕ್ಷಿಸುವಂತಿಲ್ಲ. ಇತಿಹಾಸ ಮತ್ತು ವಾಸ್ತವದ ಕುರಿತಂತೆ ನಮ್ಮಿಳಗಿನ ವಿಸ್ಮತಿಗೆ ತೊಟ್ಟಿಲು ಹಾಕಿ ತೂಗುವ ಉದ್ದೇಶವನ್ನಷ್ಟೇ ಈ ಚಿತ್ರ ಹೊಂದಿದೆ. ಅದು ಸದ್ಯದ ರಾಜಕಾರಣವೂ ಹೌದು ಎನ್ನುವುದನ್ನು ನಾವು ಅರಿತುಕೊಂಡಾಗ, ಈ ಚಿತ್ರ ಸಿನೆಮಾದ ಅಭಿರುಚಿಯ ಮೇಲೆ ಮಾಡುವ ಆಘಾತ ನಮಗೆ ಮನವರಿಕೆಯಾಗಬಹುದು. ಈ ದೇಶದಲ್ಲಿ ಪುರಾಣ, ಇತಿಹಾಸ, ಫ್ಯಾಂಟಸಿ ನಡುವಿನ ಪರದೆ ನಿಧಾನಕ್ಕೆ ಇಲ್ಲವಾಗುತ್ತಾ ಹೋಗುತ್ತಿದೆ. ಬಹುಶಃ ಮುಂದಿನ ದಿನಗಳಲ್ಲಿ ಬಿಜೆಪಿ ಮತ್ತು ಸಂಘಪರಿವಾರದ ನಾಯಕರು ಈ ಬಾಹುಬಲಿಯ ಕತೆಯನ್ನು ಇತಿಹಾಸ ಪಠ್ಯದಲ್ಲಿ ಸೇರಿಸುವುದಕ್ಕೆ ಆದೇಶಿಸಿದರೆ ಅಚ್ಚರಿಯೇನೂ ಇಲ್ಲ. ಇದೇ ಸಂದರ್ಭದಲ್ಲಿ ಈ ಬಾಹುಬಲಿಯ ಅಬ್ಬರದಲ್ಲಿ, ತನ್ನ ಸೋದರನ ಜೊತೆ ಯುದ್ಧದಲ್ಲಿ ಗೆದ್ದೂ, ವಿರಾಗಿಯಾಗಿ ಕಾಡು ಸೇರುವ ನಿಜ ಬಾಹುಬಲಿಯನ್ನು ಹೊಸ ತಲೆಮಾರು ಮರೆತೇ ಬಿಟ್ಟರೆ ಅಚ್ಚರಿಯೇನೂ ಇಲ್ಲ.

ರೇಟಿಂಗ್: **1/2

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News