ಜಡ್ಜ್ ಕರ್ಣನ್ ರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲು ಸುಪ್ರೀಂ ಹುಕುಂ
ಹೊಸದಿಲ್ಲಿ, ಮೇ 1: ಕೋಲ್ಕತಾದ ಹೈಕೋರ್ಟ್ ನ ವಿವಾದಾತ್ಮಕ ನ್ಯಾಯಾಧೀಶ ನ್ಯಾಯ ಮೂರ್ತಿ ಸಿ.ಎಸ್ ಕರ್ಣನ್ ಅವರ ಮಾನಸಿಕ ಆರೋಗ್ಯದ ಬಗ್ಗೆ ತಿಳಿಯಲು ಅವರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸುವಂತೆ ಸುಪ್ರೀಂ ಕೋರ್ಟ್ ಇಂದು ಆದೇಶ ನೀಡಿದೆ.
ಸಿ.ಎಸ್ ಕರ್ಣನ್ ಅವರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲು ಕೋಲ್ಕತಾದ ಸರಕಾರಿ ಆಸ್ಪತ್ರೆಯ ವೈದ್ಯಕೀಯ ಮಂಡಳಿಯನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಮೇ 4ರಂದು ಕರ್ಣನ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ವೈದ್ಯಕೀಯ ಮಂಡಳಿಗೆ ಸಹಾಯ ನೀಡಲು ಪೊಲೀಸರ ತಂಡವನ್ನು ರಚಿಸುವಂತೆ ಪಶ್ಚಿಮ ಬಂಗಾಳದ ಡಿಜಿಪಿಗೆ ಇದೇ ವೇಳೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೇಹಾರ್ ನೇತೃತ್ವದ ಸುಪ್ರೀಂ ಕೋರ್ಟ್ ನ 7 ಜಡ್ಜ್ ಗಳ ನ್ಯಾಯಪೀಠ ಸೂಚಿಸಿದೆ.
ನ್ಯಾಯ ಮೂರ್ತಿ ಕರ್ಣನ್ ವಿರುಧ್ದ ಫೆಬ್ರವರಿ 8ರಂದು ನ್ಯಾಯಾಂಗ ನಿಂದೆನೆಯ ಆರೋಪದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಆರಂಭಿಸಿತ್ತು.ಆ ಬಳಿಕ ಅವರು ನೀಡಿದ್ದ ಅದೇಶಗಳನ್ನು ಪಾಲಿಸದಿರುವಂತೆ ಸುಪ್ರೀಂ ಕೋರ್ಟ್ ಇದೇ ವೇಳೆ ಎಲ್ಲ ನ್ಯಾಯಾಲಯಗಳಿಗೂ ಆದೇಶ ನೀಡಿದೆ
ಮೇ 8ರಂದು ಕರ್ಣನ್ ಆರೋಗ್ಯದ ಬಗ್ಗೆ ವರದಿ ನೀಡುವಂತೆ ವೈದ್ಯಕೀಯ ಮಂಡಳಿಗೆ ಹೇಳಿರುವ ಸುಪ್ರೀಂ ಕೋರ್ಟ್ ಮೇ 9ರಂದು ವೈದ್ಯಕೀಯ ವರದಿಯ ಪರಿಶೀಲನೆಗೆ ದಿನ ನಿಗದಿಪಡಿಸಿದೆ.
ನ್ಯಾ.ಕರ್ಣನ್ ಜೂನ್ ನಲ್ಲಿ ನಿವೃತ್ತರಾಗಲಿದ್ದಾರೆ. ಆದರೆ ಇದಕ್ಕೂ ಮೊದಲೇ ಅವರ ನ್ಯಾಯಾಂಗ ಮತ್ತು ಆಡಳಿತಾತ್ಮಕ ಅಧಿಕಾರವನ್ನು ಸುಪ್ರೀಂ ಕೋರ್ಟ್ ಹಿಂಪಡೆದಿದೆ.