×
Ad

ಆಮಿರ್ ಖಾನ್ ರನ್ನು ಪರ್ಫೆಕ್ಷನಿಸ್ಟ್ ಮಾಡಿದ್ದು ಹಾಲಿವುಡ್ ನಿಂದ ಎತ್ತಿಕೊಂಡ ಈ 5 ಚಿತ್ರಗಳು !

Update: 2017-05-01 18:33 IST

ಆಮಿರ್ ಖಾನ್ !  
ಸದ್ಯ ಬಾಲಿವುಡ್ ನ ಅತ್ಯಂತ ಬೇಡಿಕೆಯ ನಟ, ನಿರ್ದೇಶಕ. ಪರ್ಫೆಕ್ಷನಿಸ್ಟ್ ಎಂಬ ಬಿರುದು ಪಡೆದಿರುವ ನಿರ್ಮಾಪಕ. ಬಾಲಿವುಡ್ ನ ಅತಿರಥ ಮಹಾರಥರ  ಕಾಲೆಳೆಯುವ ರಾಮ್ ಗೋಪಾಲ್ ವರ್ಮರಂತಹ ನಿರ್ದೇಶಕರಿಂದಲೇ ' ಗ್ರೇಟೆಸ್ಟ್ ಫಿಲ್ಮ್ ಮೇಕರ್ ಆಫ್ ಇಂಡಿಯಾ' ಎಂದು ಪ್ರಶಂಸೆ ಪಡೆದವರು. ತಮ್ಮ ಚಿತ್ರಗಳಿಗಾಗಿ ಆಮಿರ್ ಮಾಡುವ ತಯಾರಿ ಹಾಗು ಅದಕ್ಕಾಗಿ ಅವರು ಮಾಡುವ ತ್ಯಾಗ ಇವೆರಡೂ ಎಲ್ಲ ಚಿತ್ರ ಕಲಾವಿದರಿಗೆ ಮಾದರಿ.

ಇಂತಹ ಆಮಿರ್ ನಟಿಸಿರುವ ಕೆಲವು ಅತ್ಯಂತ ಪ್ರಮುಖ ಚಿತ್ರಗಳು ಹಾಲಿವುಡ್ ನಿಂದ ಕತೆ / ಐಡಿಯಾ ಎರವಲು ಪಡೆದವು ಎಂಬುದು ನಿಮಗೆ ಗೊತ್ತೇ ? ಇದು ಅಚ್ಚರಿಯ ವಿಷಯವಾದರೂ ಸತ್ಯ. ಅಂತಹ ಐದು ಚಿತ್ರಗಳ ಪಟ್ಟಿ ಇಲ್ಲಿದೆ :

ಜೋ ಜೀತಾ ವಹೀ ಸಿಖಂದರ್ - 

ಚಾಕಲೇಟ್ ಹೀರೊ ಆಮಿರ್ ಖಾನ್ , ಮುದ್ದು ಮೊಗದ ಆಯೇಷಾ ಝುಲ್ಕ , ಗ್ಲಾಮರಸ್ ಪೂಜಾ ಬೇಡಿ ಇದ್ದ ಮಜರೂಹ್ ಸುಲ್ತಾನ್ ಪುರಿ ಅರ್ಥಪೂರ್ಣ ಸಾಹಿತ್ಯ ಬರೆದಿದ್ದ , ಉದಿತ್ ನಾರಾಯಣ್ - ಕವಿತಾ ಕೃಷ್ಣಮೂರ್ತಿ ಜೋಡಿಯ ಸುಮಧುರ ಕಂಠದಲ್ಲಿ ಹಾಡುಗಳು ಮೂಡಿಬಂದಿದ್ದ ಸೂಪರ್ ಹಿಟ್ ಚಿತ್ರವಿದು. ಇವತ್ತಿಗೂ ಒಂದಿಡೀ ಪೀಳಿಗೆ ಈ ಚಿತ್ರವನ್ನು ನೆನಪಿಸಿಕೊಳ್ಳುತ್ತದೆ.

ಆದರೆ ಈ ಚಿತ್ರದ ಪ್ರಮುಖ ಆಕರ್ಷಣೆಯಾಗಿದ್ದ ಸೈಕ್ಲಿಂಗ್ ಭಾಗ ಸಂಪೂರ್ಣವಾಗಿ ಇಂಗ್ಲಿಷ್ ಚಿತ್ರ 'ಬ್ರೇಕಿಂಗ್ ಅವೇ ' ಯಿಂದ ' ಸ್ಫೂರ್ತಿ' ಪಡೆದಿದ್ದು ! ಈ ಚಿತ್ರ ನಿರ್ಮಿಸಿದ ನಾಸಿರ್ ಹುಸೇನ್ ಅವರ ಬಳಿ ಈ ಬಗ್ಗೆ ಕೇಳಿದಾಗ ನಾನು ಆ ಇಂಗ್ಲಿಷ್ ಚಿತ್ರವನ್ನು ನೋಡಿಯೇ ಇಲ್ಲ ಎಂದರು. ಎಂತಹ ಆಕಸ್ಮಿಕ ನೋಡಿ !

ಗುಲಾಮ್ -

ಹಾಲಿವುಡ್ ನ ಗಾಡ್ ಫಾದರ್ ಮರ್ಲಾನ್ ಬ್ರಾಂಡೋ ರಿಂದ ಕೇವಲ ಬಿಗ್ ಬಿ ಅಮಿತಾಭ್ ಮಾತ್ರ ' ಸ್ಫೂರ್ತಿ' ಪಡೆದಿದ್ದಾರೆ ಎಂದು ನೀವು ಭಾವಿಸಿದ್ದರೆ ಅದು ತಪ್ಪು. ಅವರ ಚಿತ್ರ ' ಆನ್ ದಿ ವಾಟರ್ ಫ್ರಾಂಟ್ ' ನಿಂದ ಎತ್ತಿಕೊಂಡ ಹಿಂದಿ ಸಿನಿಮಾ ಆಮಿರ್ ಅಭಿನಯದ ಸೂಪರ್ ಹಿಟ್ ಚಿತ್ರ ಗುಲಾಮ್ ! 

ಒಬ್ಬ ಉದಯೋನ್ಮುಖ ಬಾಕ್ಸರ್ ಒಂದು ಗೂಂಡಾ ಗ್ಯಾಂಗ್ ಗೆ ಕೆಲಸ ಮಾಡಲು ಪ್ರಾರಂಭಿಸುವುದು, ಬಳಿಕ ಕೊಲೆಯೊಂದಕ್ಕೆ ಆತ ಸಾಕ್ಷಿಯಾಗುವುದು, ಆತನ ಅಣ್ಣ ಅದೇ ಗ್ಯಾಂಗ್ ಗಾಗಿ ಕೆಲಸ ಮಾಡುವುದು - ಇವೆಲ್ಲ ಗುಲಾಮ್ ಚಿತ್ರದ ಅಂಶಗಳು ಅದೇ ಬ್ರಾಂಡೊನ  ' ಆನ್ ದಿ ವಾಟರ್ ಫ್ರಾಂಟ್ ' ನಲ್ಲಿ ಬಂದಿರುವುದು. ಬ್ರಾಂಡೊ ಆಮಿರ್ ರಂತೆ ಕಾರಿನಿಂದ ಇಳಿದು ಮಳೆಯಲ್ಲಿ ನೆನೆಯುತ್ತಾ ಹಾಡು ಹಾಡುವುದಿಲ್ಲ ಅಷ್ಟೇ . 

ಅಷ್ಟೇ ಅಲ್ಲ, ಗುಲಾಮ್ ನ ಪಾತ್ರಧಾರಿಗಳ ಸ್ಟೈಲ್ ಹಾಲಿವುಡ್ ನ ' ರೆಬೆಲ್ ವಿದೌಟ್ ಎ ಕಾಸ್ ' ಚಿತ್ರದಿಂದಲೂ ' ಸ್ಫೂರ್ತಿ' ಪಡೆದಿದೆ.  ಅಂದ ಹಾಗೆ , ಶಾರುಖ್ ಹಾಗು ಪೂಜಾ ಭಟ್ ಜೋಡಿಯಲ್ಲಿ ಈ ಚಿತ್ರವನ್ನು ಮಹೇಶ್ ಭಟ್ ಮಾಡುವ ಪ್ಲ್ಯಾನ್ ಇತ್ತು. ಆದರೆ , ಮಹೇಶ್ ಭಟ್ ನಿರ್ದೇಶನವನ್ನೇ ಬಿಟ್ಟು ಬಿಟ್ಟರೆ, ಪೂಜಾ ಭಟ್ ಅಭಿನಯಕ್ಕೆ ತಿಲಾಂಜಲಿ ಇಟ್ಟು ನಿರ್ಮಾಪಕಿಯಾದರು. ಹಾಗಾಗಿ ಶಾರುಖ್ ಆ ಚಿತ್ರವನ್ನೇ ಬಿಟ್ಟು ಬಿಟ್ಟರು. 

ಅಕೇಲೇ ಹಮ್ ಅಕೇಲೇ ತುಮ್ - 

ಮೆರಿಲ್ ಸ್ಟ್ರೀಪ್ ಗೊತ್ತಲ್ಲ ? ಹಾಲಿವುಡ್ ನ ಸೂಪರ್ ಸ್ಟಾರ್ . ಆಕೆಯ 1979 ರ ಚಿತ್ರ ಕ್ರೆಮರ್ ವಿ/ಸ್ ಕ್ರೆಮರ್ ನಿಂದ ಎತ್ತಿಕೊಂಡ ಚಿತ್ರವೇ ಅಕೇಲೇ ಹಮ್ ಅಕೇಲೇ ತುಮ್ . ಕ್ರೆಮರ್ ವಿ/ಸ್ ಕ್ರೆಮರ್ ಶ್ರೇಷ್ಠ ಚಿತ್ರ, ನಟ, ನಟಿ ಸಹಿತ ಐದು ಆಸ್ಕರ್ ಪ್ರಶಸ್ತಿಗಳನ್ನು ಬಾಚಿಕೊಂಡ ಚಿತ್ರ. ಅದನ್ನೇ ಭಟ್ಟಿ ಇಳಿಸಿ ಮೂಡಿ ಬಂದ ಚಿತ್ರ ಅಕೇಲೇ ಹಮ್ ಅಕೇಲೇ ತುಮ್ . 

ಹಿಂದಿ ಚಿತ್ರವನ್ನು ಸ್ವಲ್ಪ ಬೇರೆ ಎಂದು ಸಾಬೀತುಪಡಿಸಲು ಚಿತ್ರಕತೆಯಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಲಾಗಿತ್ತು. ಆದರೆ ಸಂಗೀತ ನಿರ್ದೇಶಕ ಅನು ಮಲಿಕ್ ಎಲ್ಲ ಹಾಡುಗಳಿಗೂ ಅಲ್ಲಲ್ಲಿಂದ ಎತ್ತಿಕೊಂಡ ಟ್ಯೂನ್ ಗಳನ್ನೇ ಬಳಸಿ ಯಾವ ಸಬೂಬು ಉಳಿಯದಂತೆ ನೋಡಿಕೊಂಡರು. ಸಾಲದ್ದಕ್ಕೆ ಖ್ಯಾತ ಗೀತ ರಚನೆಕಾರ ಮಜರೂಹ್ ಸುಲ್ತಾನ್ ಪುರಿ ತಾನು ಬರೆದ ಹಾಡನ್ನು ಮಲಿಕ್ ಮನಸೋ ಇಚ್ಛೆ ಬದಲಾಯಿಸುತ್ತಿದ್ದಾರೆ ಎಂದು ಕೋಪಗೊಂಡು ತಾನೇ ಬರೆದ  ಹಿಟ್ ಹಾಡು ' ರಾಜಾ ಕೋ ರಾಣಿ ಸೆ ಪ್ಯಾರ್ ಹೋಗಯಾ ' ತನ್ನದು ಎಂದು ಹೇಳಬಾರದು ಎಂದು ಹೇಳಿದ್ದರು. 

ರಂಗ್ ದೇ ಬಸಂತಿ -

ಅತ್ಯಂತ ಯಶಸ್ವಿಯೂ ಅಷ್ಟೇ ಚರ್ಚೆಗೆ ಗ್ರಾಸವಾದ ಚಿತ್ರವೂ ಆಗಿತ್ತು 2006 ರಲ್ಲಿ ಬಿಡುಗಡೆಯಾದ ರಂಗ್ ದೇ ಬಸಂತಿ. ರಾಕೇಶ್ ಓಂ ಪ್ರಕಾಶ್ ಮೆಹ್ರಾ ನಿರ್ದೇಶನದ ಈ ಚಿತ್ರಕ್ಕೆ 90 ರ ದಶಕದಲ್ಲಿ ಕಮಲೇಶ್ ದ್ವಿವೇದಿ ಕತೆ ಬರೆದಿದ್ದರು. ಮೊದಲು ಆಹುತಿ , ಬಳಿಕ ಯಂಗ್ ಗನ್ಸ್ ಆಫ್ ಇಂಡಿಯಾ ಹೆಸರಲ್ಲಿ ಈ ಚಿತ್ರ ನಿರ್ಮಾಣವಾಗಬೇಕಿತ್ತು. 

ಆದರೆ ಬಿಡುಗಡೆಯಾಗುವಾಗ ಇದರಲ್ಲಿ ಹಲವಾರು ಬದಲಾವಣೆಗಳಾದವು. 1948 ರ ಚಿತ್ರ ' ಆಲ್ ಮೈ ಸನ್ಸ್ ' ಚಿತ್ರದಿಂದ ಕತೆಯ ಅಂಶಗಳನ್ನು ಇದು ಎತ್ತಿಕೊಂಡಿತ್ತು. ಶ್ರೀಮಂತ ಕುಟುಂಬವೊಂದರ ಮಾಲಕತ್ವದ ಕಂಪೆನಿ ತಯಾರಿಸಿದ ಕಳಪೆ ಉಪಕರಣಗಳಿಂದಾಗಿ ದ್ವಿತೀಯ ಮಹಾಯುದ್ಧದಲ್ಲಿ 21 ಪೈಲಟ್ ಗಳು ಬಲಿಯಾಗುವ ಕತೆ ಅದರಲ್ಲಿತ್ತು. 

ಘಜನಿ -

2000 ದಲ್ಲಿ ಬಿಡುಗಡೆಯಾದ ಕ್ರಿಸ್ಟೋಫರ್ ನೊಲಾನ್ ಅವರ ಚಿತ್ರ ' ಮೆಮೆಂಟೊ' ಹಾಲಿವುಡ್ ನಲ್ಲಿ ಹೊಸ ಗಾಳಿ ತಂದಿತ್ತು. ಕೇವಲ ಒಂದು ಪೋಲಾರಾಯ್ಡ್ ಕ್ಯಾಮರ ಹಾಗು ದುರ್ಬಲ ಸಾಕ್ಷ್ಯಗಳನ್ನು ಇಟ್ಟುಕೊಂಡು ತನ್ನ ಪತ್ನಿಯ ಹಂತಕನನ್ನ ಹುಡುಕುವ ಆಗಾಗ ಮರೆಯುವ ರೋಗ ಇರುವ ವ್ಯಕ್ತಿಯ ಕುರಿತ ಚಿತ್ರ ಅದು. 

2005 ರಲ್ಲಿ ಇದೇ ಕತೆಯಿಟ್ಟುಕೊಂಡು ತಮಿಳಿನಲ್ಲಿ ಮುರುಗದಾಸ್ ಘಜನಿ ಮಾಡಿದರು. 2008 ರಲ್ಲಿ ಅದೇ ಘಜನಿಯ ಹಿಂದಿ ಅವತರಣಿಕೆ ಬಂತು. ವಿಶೇಷ ಎಂದರೆ ಈ ಬಗ್ಗೆ ಆಮಿರ್ ರಲ್ಲಿ ಕೇಳಿದಾಗ ಈ ಹಿಂದೆ ಜೋ ಜೀತಾ ವಹೀ ಸಿಖಂದರ್ ಕುರಿತು ಅವರ ಚಿಕ್ಕಪ್ಪ ನಾಸಿರ್ ಹುಸೇನ್ ಏನು ಹೇಳಿದ್ದರೋ ಅದನ್ನೇ ಆಮಿರ್ ಹೇಳಿದರು. ಎಂಥಾ ಆಕಸ್ಮಿಕ ! 

ಲಗಾನ್ - 

ಭಾರತದ ಸಿನಿಮಾ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಅತ್ಯುತ್ತಮ ಚಿತ್ರಗಳಲ್ಲಿ ಒಂದು ಲಗಾನ್ . ಇದನ್ನು ಮೆಚ್ಚದವರು, ಮತ್ತೆ ಮತ್ತೆ ನೋಡದವರು ಬಹಳ ಕಡಿಮೆ ಮಂದಿ. ಈ ಚಿತ್ರವೂ ಒಂದಲ್ಲ ಎರಡು ಚಿತ್ರಗಳಿಂದ ' ಸ್ಫೂರ್ತಿ' ಪಡೆದಿದೆ. 1981 ರಲ್ಲಿ ಸಿಲ್ವೆಸ್ಟರ್ ಸ್ಟಾಲನ್ ನಟಿಸಿದ್ದ 'ಎಸ್ಕೇಪ್ ಟು ವಿಕ್ಟರಿ ' ಅಥವಾ 'ವಿಕ್ಟರಿ' ಚಿತ್ರ ಬಂದಿತ್ತು. 

ಇದರಲ್ಲಿ ದ್ವಿತೀಯ ವಿಶ್ವ ಯುದ್ಧದ ಸಂದರ್ಭದಲ್ಲಿ ಜರ್ಮನಿಯ ಕ್ಯಾಮ್ಪ್ ಒಂದರಲ್ಲಿ ಕೈದಿಗಳು ಜರ್ಮನ್ ಸೈನಿಕರನ್ನು ಫುಟ್ಬಾಲ್ ಪಂದ್ಯವೊಂದರಲ್ಲಿ ಸೋಲಿಸಿ ಬಿಡುಗಡೆ ಭಾಗ್ಯ ಪಡೆಯುವ ಕತೆ ಇದರಲ್ಲಿತ್ತು. ಫುಟ್ಬಾಲ್ ದಂತಕತೆ ಪೇಲೆ , ಇಂಗ್ಲಿಷ್ ಫುಟ್ ಬಾಲರ್ ಬಾಬ್ ಮೂರ್ ಸಹಿತ 15 ಅಂತಾರಾಷ್ಟ್ರೀಯ ಫುಟ್ಬಾಲ್ ಆಟಗಾರರು ನಟಿಸಿದ್ದರು. 

ಇದಕ್ಕೂ ಮೊದಲು 1962 ರಲ್ಲೂ ಇದೇ ರೀತಿಯ ಕತೆಯಿಟ್ಟುಕೊಂಡು ಒಂದು ಹಂಗೇರಿಯನ್ ಸಿನಿಮಾ ಬಂದಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News