ಮದುವೆಯಾಗುವ ಹುಡುಗಿಯನ್ನು ಭೇಟಿಯಾಗಿದ್ದೇ ಅಪರಾಧ: ಗುಂಡಿಕ್ಕಿ ಭಾವೀ ವರನ ಕೊಲೆ
ಪಾಟ್ನಾ, ಮೇ 2: ಇನ್ನೊಂದು ತಿಂಗಳಲ್ಲಿ ತಾನು ಮದುವೆಯಾಗಲಿರುವ ಹುಡುಗಿಯನ್ನು ಸಂಪ್ರದಾಯಕ್ಕೆ ವಿರುದ್ಧವಾಗಿ ಭೇಟಿ ಮಾಡಿದ ತಪ್ಪಿಗಾಗಿ ಭಾವೀ ವರನೊಬ್ಬನನ್ನು ಗುಂಡಿಕ್ಕಿ ಸಾಯಿಸಿದ ಘಟನೆ ಕೈಮೂರ್ ಜಿಲ್ಲೆಯ ಡಂಡಂ ಗ್ರಾಮದಿಂದ ಸೋಮವಾರ ವರದಿಯಾಗಿದೆ.
ತನ್ನ ಕೈ ಹಿಡಿಯಲಿರುವ ಯುವತಿಯನ್ನು ಆಕೆಯ ಮನೆಯಲ್ಲಿ ಮನೀಶ್ ಪಟೇಲ್ ಮಾತನಾಡಿಸುತ್ತಿದ್ದ ವೇಳೆಗೆ ಸಿಟ್ಟುಗೊಂಡ ಆಕೆಯ ಇಬ್ಬರು ಮಾವಂದಿರು ಮನೀಶ್ ಜತೆ ಜಗಳವಾಡಿ ತಮ್ಮಲ್ಲಿದ್ದ ಪಿಸ್ತೂಲಿನಿಂದ ಆತನ ಎದೆಗೆ ಗುಂಡಿಕ್ಕಿದ್ದರು. ಮನೀಶ್ ನನ್ನು ಭಾವೀ ಪತ್ನಿ ಹಾಗೂ ಆಕೆಯ ತಂದೆ ಕೂಡಲೇ ಭಬುವಾ ಎಂಬಲ್ಲಿನ ಸರಕಾರಿ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ.
ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಮನೀಶ್ ಸಾವನ್ನಪ್ಪಿದ್ದಾನೆಂದು ಆತನ ಕುಟುಂಬ ದೂರಿದೆ. ಮನೀಶ್ ಮೃತದೇಹವನ್ನು ಕೊಂಡು ಹೋಗುವಾಗ ಭಬುವಾದಲ್ಲಿನ ಜಯಪ್ರಕಾಶ್ ಚೌಕ್ ಸಮೀಪ ಕೊಲೆ ಹಾಗೂ ಆಸ್ಪತ್ರೆಯ ನಿರ್ಲಕ್ಷ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಫಲವಾಗಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪೊಲೀಸರು ಸ್ಥಳಕ್ಕೆ ಧಾವಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಯಿತು.
ಮನೀಶ್ ತಂದೆ ನೀಡಿದ ದೂರಿನನ್ವಯ ಪೊಲೀಸರು ಯುವತಿಯ ಇಬ್ಬರು ಮಾವಂದಿರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.