ಮಧ್ಯಪ್ರದೇಶದಲ್ಲಿನ ಭ್ರಷ್ಟಾಚಾರದ ಬಗ್ಗೆ ಫೇಸ್‌ಬುಕ್ ನಲ್ಲಿ ದೂರಿದ್ದ ಬಿಜೆಪಿ ನಾಯಕನ ಅಮಾನತು
ಭೋಪಾಲ,ಮೇ 2: ಮಧ್ಯಪ್ರದೇಶದಲ್ಲಿಯ ಭ್ರಷ್ಟಾಚಾರದ ಕುರಿತು ಫೇಸ್‌ಬುಕ್ ಪೋಸ್ಟ್‌ಗಾಗಿ ಪಕ್ಷದ ಗ್ವಾಲಿಯರ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಹಾಗೂ ಗ್ವಾಲಿಯರ್ ವ್ಯಾಪಂ ಮೇಲಾ ಪ್ರಾಧಿಕಾರದ ಅಧ್ಯಕ್ಷ ರಾಜ್ ಛಡ್ಡಾರನ್ನು ಪಕ್ಷದಿಂದ ಅಮಾನತು ಗೊಳಿಸಿರುವ ಬಿಜೆಪಿಯು ಅವರಿಗೆ ಶೋಕಾಸ್ ನೋಟಿಸ್‌ನ್ನು ಜಾರಿಗೊಳಿಸಿದೆ. ಛಡ್ಡಾ ತನ್ನ ವಿವಾದಾತ್ಮಕ ಪೋಸ್ಟ್‌ನಲ್ಲಿ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಅವರ ಕಡೆಗೂ ಬೆಟ್ಟು ಮಾಡಿದ್ದರು.
‘‘ಮುಖ್ಯಮಂತ್ರಿಗಳೇ, ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಆಸ್ಪತ್ರೆಗಳ ಸ್ಥಿತಿ ಅಸಹನೀಯವಾಗಿದೆ. ದಯವಿಟ್ಟು ಇದರಲ್ಲಿ ಸುಧಾರಣೆಗಳನ್ನು ತನ್ನಿ ಅಥವಾ ಪಂಡಿತ್ ದೀನದಯಾಳ ಉಪಾಧ್ಯಾಯರ ಕನಸನ್ನು ನನಸಾಗಿಸಲು ಸರ್ವಸ್ವವನ್ನೂ ತ್ಯಾಗ ಮಾಡಿರುವ ನಮ್ಮಂತಹ ಪಕ್ಷ ಕಾರ್ಯಕರ್ತರನ್ನು ವಜಾ ಮಾಡಿ ’’ ಎಂದು ಛಡ್ಡಾ ತನ್ನ ಫೇಸಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.
ಈ ಪೋಸ್ಟ್‌ನಿಂದ ಆಕ್ರೋಶಗೊಂಡಿರುವ ಬಿಜೆಪಿ ಅವರನ್ನು ಅಮಾನತುಗೊಳಿಸಿ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದರೂ ಛಡ್ಡಾ ವಿಚಲಿರಾಗಿಲ್ಲ. ಅವರು ತನ್ನ ನಿಲುವಿನಿಂದ ಹಿಂದೆ ಸರಿದಿಲ್ಲ, ಜೊತೆಗೆ ದಾಳಿಯನ್ನೂ ಮುಂದುವರಿಸಿದ್ದಾರೆ.
‘‘ ಓ ದೇವರೇ, ನನ್ನ ಪಕ್ಷವನ್ನು ರಕ್ಷಿಸು. ಬಿಜೆಪಿ ತನ್ನ ವಿರುದ್ಧ ಕೆಲಸ ಮಾಡುತ್ತಿರುವವರಿಗೆ ಮಣೆ ಹಾಕುತ್ತಿದೆ ಮತ್ತು ತನಗಾಗಿ ತ್ಯಾಗ ಮಾಡಿದವರನ್ನು ಪಕ್ಷದಿಂದ ಹೊರಹಾಕುತ್ತಿದೆ’’ ಎಂದು ಶೋಕಾಸ್ ನೋಟಿಸ್ ಜಾರಿಯಾದ ಬಳಿಕ ಛಡ್ಡಾ ತನ್ನ ಫೇಸ್‌ಬುಕ್ ಪುಟದಲ್ಲಿ ಬರೆದಿದ್ದಾರೆ.
ಅವರ ದಾಳಿ ಅಷ್ಟಕ್ಕೇ ನಿಂತಿಲ್ಲ. ಪಕ್ಷವು ವ್ಯಕ್ತಿಗಿಂತ ದೊಡ್ಡದು ಮತ್ತು ದೇಶವು ಪಕ್ಷಕ್ಕಿಂತ ದೊಡ್ಡದು ಎಂದು ಅವರು ಹೇಳುತ್ತಾರೆ. ಆದರೆ ತಮ್ಮನ್ನೇ ಪಕ್ಷ ಮತ್ತು ದೇಶವೆಂದು ಅವರು ಭಾವಿಸಿದ್ದಾರೆ ಎಂದಿರುವ ಛಡ್ಡಾ, ನೀವು ಬಡವರಿಗೆ ಆಸ್ಪತ್ರೆಗಳ ಬಾಗಿಲುಗಳನ್ನು ಮುಚ್ಚಿದರೆ ಮತ್ತು ಕೋಟ್ಯಂತರ ರೂ.ವೌಲ್ಯದ ಟೆಂಟ್‌ನಡಿ ಪಂಡಿತ ದೀನದಯಾಳರಿಗೆ ಶ್ರದ್ಧಾಂಜಲಿಗಳನ್ನು ಅರ್ಪಿಸಿದರೆ ಅದು ನೀವು ಅವರಿಗೆ ಮಾಡುವ ಅವಮಾನವಾಗು ತ್ತದೆ....ಅಷ್ಟೇ ಎಂದೂ ಕುಟುಕಿದ್ದಾರೆ.
ಪಕ್ಷದ ಯಾವುದೇ ಕಾರ್ಯಕರ್ತರು ಅಥವಾ ನಾಯಕರು ಪಕ್ಷಕ್ಕಿಂತ ದೊಡ್ಡವರಲ್ಲ. ಹೀಗಾಗಿ ಛಡ್ಡಾ ವಿರುದ್ಧ ಪಕ್ಷದ ಕ್ರಮ ಸಮರ್ಥನೀಯವಾಗಿದೆ ಎಂದು ಮಧ್ಯಪ್ರದೇಶ ಬಿಜೆಪಿ ವಕ್ತಾರ ರಜನೀಶ್ ಅಗರವಾಲ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಆದರೆ ಛಡ್ಡಾ ಅವರ ಫೇಸ್‌ಬುಕ್ ಪೋಸ್ಟ್ ಮತ್ತು ಮುಖ್ಯಮಂತ್ರಿಗಳ ವಿರುದ್ಧ ನೇರದಾಳಿಯು ಕಣಜದ ಗೂಡನ್ನು ಕೆದಕಿದೆ. ಅವರ ಆರೋಪಗಳನ್ನು ಸಮರ್ಥಿಸಿ ಅವರ ಫೇಸ್‌ಬುಕ್ ಪೇಜ್‌ನಲ್ಲಿ ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಸುಮಾರು 300 ಜನರು ಈ ಪೋಸ್ಟ್‌ನ್ನು ಲೈಕ್ ಮಾಡಿದ್ದರೆ, 32 ಜನರು ಶೇರ್ ಮಾಡಿಕೊಂಡಿದ್ದಾರೆ. 100ಕ್ಕೂ ಅಧಿಕ ಜನರು ತಮ್ಮ ಕಮೆಂಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಪೈಕಿ ಕೆಲವರು ಮಾತ್ರ ಛಡ್ಡಾರ ಅಭಿಪ್ರಾಯಗಳ್ನು ಒಪ್ಪಿಕೊಂಡಿಲ್ಲ. ಕೆಲವು ಕಮೆಂಟ್‌ಗಳು ಮುಖ್ಯಮಂತ್ರಿಗಳನ್ನು ತೀವ್ರ ತರಾಟೆಗೆತ್ತಿಕೊಂಡಿವೆ, ಕೆಲವು ಅವರ ಪತ್ನಿಯನ್ನೂ ಬಿಟ್ಟಿಲ್ಲ...!