ಮರಳಿ ಮಂಗಳೂರಿಗೆ

Update: 2017-05-03 04:30 GMT

ನಾದಿನಿಗೆ ಮದುವೆಯಾಗಿ ಗಂಡನ ಮನೆಗೆ ಹೋದಳು. ಜೂನ್ ತಿಂಗಳ ಕೊನೆಯ ವರೆಗೆ ಕಾಲೇಜಲ್ಲಿ ತರಗತಿಗಳು ಆ ದಿನಗಳಲ್ಲಿ ಪ್ರಾರಂಭವಾಗುತ್ತಿರಲಿಲ್ಲ. ವಿದ್ಯಾರ್ಥಿಗಳ ಸೇರ್ಪಡೆಗಳೆಲ್ಲಾ ಮುಗಿದು ಜುಲೈ 1ರಿಂದ ಸರಿಯಾಗಿ ಪಾಠ ಪ್ರವಚನಗಳು ಶುರುವಾಯಿತು. ನಾನೀಗ ಮಧ್ಯಾಹ್ನ ಕೋಟೆಕಾರಿಗೆ ಹೋಗಿ ಬರಲು ಸಾಧ್ಯವಿಲ್ಲ. ತಾಯ್ತನದ ಜವಾಬ್ದಾರಿ ನಿಭಾಯಿಸುವುದು ಒಬ್ಬ ಉದ್ಯೋಗಿ ಮಹಿಳೆಗೆ ಎಷ್ಟು ಕಷ್ಟ ಎನ್ನುವುದು ಅನುಭವಕ್ಕೆ ಬಂತು. ಬಹುಶಃ ಗಂಡಸರಿಗೆ ಇದು ಸುಲಭವಾಗಿ ಅರ್ಥವಾಗುವಂತಹುದು ಅಲ್ಲ. ಯಾಕೆಂದರೆ ಅನುಭವ ಜನ್ಯ ಸತ್ಯಗಳೇ ನಿಜವಾದ ತಿಳುವಳಿಕೆಯ ಜ್ಞಾನ ನೀಡಬಲ್ಲುದು. ಮಗುವಿಗೆ ರಾತ್ರಿ ಒಂದಿಷ್ಟು ಮೈ ಬೆಚ್ಚಗಿದ್ದರೆ ಬೆಳಗ್ಗೆ ಮಗುವನ್ನೆತ್ತಿಕೊಂಡು ಮಂಗಳೂರಿಗೆ ಹೊರಟೇ ಬಿಡುತ್ತಿದ್ದೆ. ನೇರವಾಗಿ ಉರ್ವಸ್ಟೋರ್‌ನ ಡಾ.ಎಂ.ಡಿ.ಕಾಮತ್‌ರಲ್ಲಿಗೆ ಬಂದು ತೋರಿಸುವವರೆಗೆ ನೆಮ್ಮದಿ ಇಲ್ಲ. ಅವರಿಂದ ಔಷಧಿ ಪಡಕೊಂಡು ಅಮ್ಮನ ಮನೆಗೆ ಹೋಗಿ ಮಗುವನ್ನು ಅಮ್ಮನಿಗೆ ಒಪ್ಪಿಸಿ, ಬೆಳಗ್ಗೆ ಅರ್ಧ ರಜೆ ಹಾಕಿ ಮಧ್ಯಾಹ್ನ ಕಾಲೇಜಿನ ಕರ್ತವ್ಯಕ್ಕೆ ಹಾಜರಾಗುತ್ತಿದ್ದೆ.

ಮಳೆಗಾಲದ ಈ ಅವಧಿಯಲ್ಲಿ ಹೀಗೆ ಬಂದು ಹೋಗುವುದು ಸಾಮಾನ್ಯ ಎಂಬಂತಾದಾಗ ಡಾಕ್ಟರರೇ ನನಗೆ ತಮಾಷೆ ಮಾಡುತ್ತಿದ್ದರು. ಹೌದು ಯಾವ ಕಾರಣದಿಂದ ಜ್ವರ ಬಂದಿದೆ, ಕೆಮ್ಮು ಬರುತ್ತಿದೆ, ಯಾವ ಔಷಧ ಕೊಡಲಿ ಎನ್ನುವ ತಿಳುವಳಿಕೆ ಇಲ್ಲದ ನನಗೆ ಧೈರ್ಯ ನೀಡಿ ಬಿಟ್ಟು ಹೋಗು ನಾವಿದ್ದೇವೆ ಎನ್ನುವ ಹಿರಿಯರಿಲ್ಲದ ಮನೆಯಲ್ಲಿದ್ದ ನನಗೆ ಆತಂಕದೊಂದಿಗೆ ಮಗುವನ್ನು ಬಿಟ್ಟು ಬರಲು ಹೇಗೆ ಸಾಧ್ಯ? ಮನೆ ಮದ್ದು ಗೊತ್ತಿಲ್ಲದ ನನಗೆ ಡಾಕ್ಟರರೇ ಗತಿಯಾಗಿದ್ದರು. ಹೀಗೆ ಆಗಾಗ ನಡೆಯುತ್ತಿದ್ದುದರಿಂದ ಮಂಗಳೂರಲ್ಲೇ ಮನೆ ಮಾಡಬೇಕೆಂಬ ನಿರ್ಧಾರದೊಂದಿಗೆ ಅದೂ ಅಮ್ಮನ ಮನೆಗೆ ಹತ್ತಿರವಾಗಿರಬೇಕೆಂಬ ಷರತ್ತಿನೊಂದಿಗೆ ನಮ್ಮವರನ್ನು ಒಪ್ಪಿಸಿದೆ. ಈ ಬಗ್ಗೆ ಅತ್ತೆ ಮಾವನವರಲ್ಲಿ ಚರ್ಚಿಸುವ ಅಗತ್ಯ ನಮ್ಮಿಬ್ಬರಿಗೂ ಕಾಣಲಿಲ್ಲ. ಏನಿದ್ದರೂ ಇರುವುದು ಬಾಡಿಗೆ ಮನೆ. ಹೋಗುವುದೂ ಬಾಡಿಗೆ ಮನೆಗೆ. ಜೊತೆಗೆ ಅತ್ತೆ ಮಾವನವರನ್ನೂ ಕರೆದೊಯ್ಯುವ ಕರ್ತವ್ಯ ಇದ್ದೇ ಇದೆ ಎಂಬ ಹೊಣೆಗಾರಿಕೆಯಲ್ಲಿ ಆ ವಿಷಯ ಮೊದಲೇ ಹೇಳಿ ಅದು ನೆರೆಕರೆಯವರೊಂದಿಗೆ ಚರ್ಚೆಯ ವಿಷಯವಾಗಿ ಮಂಗಳೂರಿಗೆ ಹೋಗುವುದು ಬೇಡ ಎಂದು ಅತ್ತೆ ಮಾವ ಹೇಳಿದರೆ ಎಂಬ ಭಯ ಇದ್ದುದರಿಂದ ಇಬ್ಬರೂ ಈ ಬಗ್ಗೆ ಅವರಿಗೆ ಹೇಳದೆ ಉಳಿದೆವು.

ಈ ಕಡೆ ನನ್ನ ತಮ್ಮ ಅಂದರೆ ಊರೆಲ್ಲಾ ಪರಿಚಯ. ಮಾತ್ರವಲ್ಲ ಊರಲ್ಲಿ ಏನೇ ನಡೆದರೂ ಅವನಿಗೆ ಗೊತ್ತಿರುತ್ತಿತ್ತು ಎನ್ನುವುದೂ ಸತ್ಯವೇ. ಅವನಲ್ಲಿ ಮನೆ ಹುಡುಕಲು ಹೇಳಿದಾಗ ಕೊಟ್ಟಾರ ಕ್ರಾಸ್‌ನಿಂದ ಕೊಟ್ಟಾರಕ್ಕೆ ಹೋಗುವ ರಸ್ತೆಯಲ್ಲಿ ಬಿಜೈ ವಾರ್ಡಿನೊಳಗಿರುವಂತಹ ದಿನೇಶ್ ಬೇಕರಿಯ ಸಾಲಿನಲ್ಲಿದ್ದ ಒಂದು ಮನೆ ಬಿಡಾರವಾಗಿ ಸಿಕ್ಕಿತು. ಅಕ್ಟೋಬರ್ ತಿಂಗಳ ರಜೆಯ ವೇಳೆಗೆ ಮನೆ ಬದಲಾಯಿಸಿದೆವು. ಮನೆ ಬಿಟ್ಟು ಬರುವಾಗ ಅತ್ತವಳು ಝುಲೈಖಾ. ಅವಳ ಮನೆ ಮಂದಿಯ ಪ್ರೀತಿ ವಿಶ್ವಾಸಗಳೊಂದಿಗೆ ನೆರವಿನ ಋಣವನ್ನೂ ಹೊತ್ತುಕೊಂಡು ಉಳಿದ ಎಲ್ಲರ ಪ್ರೀತಿ, ಗೌರವಗಳಿಗೆ ಕೃತಜ್ಞರಾಗಿ ಮತ್ತೆ ನನ್ನ ಹುಟ್ಟೂರಿನ ಬಿಜೈ ಕಾಪಿಕಾಡು ಊರಿಗೇ ಬಂದೆವು. ಅಮ್ಮನ ಮನೆ ಉರ್ವಾಸ್ಟೋರ್ಸ್‌ನ ಪೂರ್ವಕ್ಕೆ ದಡ್ಡಲ್‌ಕಾಡ್ ಬಳಿಯಲ್ಲಿದ್ದ ನನ್ನ ಮನೆಗೆ ನಡಿಗೆಯ ದೂರ. ಮಗು ದೊಡ್ಡವಳಾಗಿ ಶಾಲೆ ಸೇರುವವರೆಗೆ ಅಮ್ಮನ ನೆರವು ಇದೆ ಎನ್ನುವ ಭರವಸೆಯೊಂದಿಗೆ ಬಂದುದು ಸುಳ್ಳಾಗಲಿಲ್ಲ. ನನ್ನ ಅಮ್ಮ, ಅಪ್ಪ, ತಂಗಿ, ತಮ್ಮನ ಪ್ರೀತಿಯ ಮಗುವಾಗಿ ನಮ್ಮ ಮಗಳು ಚುರುಕಾಗಿ ಬೆಳೆದಳು. ಮಾತು ಬಂದ ಬಳಿಕ ಈ ಮನೆಯಲ್ಲಿದ್ದ ಅಜ್ಜ, ಅಜ್ಜಿಯೂ ಪ್ರೀತಿಯವರಾಗಿ ಮೊಮ್ಮಗಳೊಂದಿಗೆ ಖುಷಿಯಾಗಿ ಇದ್ದರು.

ದಿನೇಶ್ ಬೇಕರಿಯ ಪಕ್ಕದಲ್ಲಿ ಅವರದೇ ಆದ ಸಣ್ಣ ಅಂಗಡಿ. ಹಿಂಬದಿಯಲ್ಲಿ ಅವರ ಮನೆ. ಆ ಮನೆಯಲ್ಲಿ ಬೇಕರಿಯ ಮಾಲಕರು ಹಾಗೂ ಅವರ ಮಡದಿ ಮಕ್ಕಳು ಹಾಗೂ ಬೇಕರಿಯಲ್ಲಿ ಬ್ರೆಡ್ಡು ತಯಾರಿಸುವ ಕೆಲಸದಲ್ಲಿದ್ದ ಅವರ ಸಂಬಂಧಿಗಳಿಬ್ಬರು ಜೊತೆಯಾಗಿದ್ದರು. ಈ ಅಂಗಡಿಗೆ ಪಕ್ಕದಲ್ಲಿದ್ದ ಸಣ್ಣ ಮನೆಯಲ್ಲಿ ತಾಯಿ ಮಗಳ ಒಂದು ಸಂಸಾರ. ಅದರ ಪಕ್ಕದಲ್ಲಿದ್ದು ಖಾಲಿಯಾದ ಮನೆಯನ್ನು ತಮ್ಮ ಮುಂಗಡ ಕೊಟ್ಟು ನಮಗಾಗಿ ಕಾದಿರಿಸಿದ. ನಮ್ಮ ಮನೆ ಹಾಗೂ ಧಣಿಗಳ ಮನೆಯ ನಡುವೆ ಒಬ್ಬರು ನಡೆದಾಡಬಹುದಾದ ಸಣ್ಣ ಓಣಿ ಹಿತ್ತಲ ಕಡೆಗೆ ಹೋಗುವುದಕ್ಕೆ. ಆ ಓಣಿಗೆ ತಾಗಿದಂತೆ ಇದ್ದ ವಿಶಾಲವಾದ ಮನೆ ಹಾಗೂ ಅಂಗಳ ಉತ್ತರ ದಿಕ್ಕಿಗೆ ಇದ್ದು ಅದು ಧಣಿಗಳ ಮನೆಯಾಗಿತ್ತು. ಧಣಿಗಳು ಸ್ಟೇಟ್‌ಬ್ಯಾಂಕ್‌ನ ಬಳಿಯಲ್ಲಿರುವ ಮಾರ್ಕೆಟಿನ ಒಳಗೆ ಎರಡು ಫ್ಯಾನ್ಸಿ ಅಂಗಡಿಗಳ ಮಾಲಕರಾಗಿದ್ದರು. ಧಣಿ ನಾರಾಯಣ ಹಾಗೂ ಅವರ ಮಡದಿ ಲಕ್ಷ್ಮೀ ಇಬ್ಬರೂ ಈ ಅಂಗಡಿಗಳನ್ನು ನೋಡಿಕೊಳ್ಳುತ್ತಿದ್ದರು.

ಅವರ ಮನೆಯಲ್ಲಿ ನಾರಾಯಣರ ತಾಯಿ ಹಾಗೂ ಚಿಕ್ಕ ಮಗು ಮತ್ತು ಮನೆಕೆಲಸ ಹಾಗೂ ಮನೆ ನೋಡಿಕೊಳ್ಳುವುದಕ್ಕಿದ್ದ ಹೆಣ್ಣು ಮಗಳೊಬ್ಬಳಿದ್ದಳು. ಇನ್ನೊಬ್ಬ ಹುಡುಗ ಸಂತ ಅಲೋಶಿಯಸ್‌ನ ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದ. ಧಣಿಗಳ ಮನೆಯ ಪೂರ್ವದಿಕ್ಕಿನ ಕೆಲವು ಕೋಣೆಗಳನ್ನು ಪ್ರತ್ಯೇಕ ಮನೆಯಾಗಿಸಿ ಅದನ್ನೂ ಬಾಡಿಗೆಗೆ ಕೊಟ್ಟಿದ್ದರು. ಈ ಮನೆಯಲ್ಲಿದ್ದವರು ನಮ್ಮ ಮನೆಯ ಬಲಗಡೆಯಲ್ಲಿದ್ದ ಮನೆಯ ಬೇಬಿಯಕ್ಕನ ತಮ್ಮನ ಸಂಸಾರ. ಈ ಎರಡೂ ಮನೆಯ ಹೆಣ್ಣು ಮಕ್ಕಳು ಲೇಡಿಹಿಲ್ ವಿಕ್ಟೋರಿಯಾ ಗರ್ಲ್ಸ್ ಹೈಸ್ಕೂಲಿನ ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದರು. ದೊಡ್ಡ ಹುಡುಗರಿಬ್ಬರು ಸಂತ ಅಲೋಶಿಯಸ್ ಹೈಸ್ಕೂಲಿಗೆ ಹೋಗುತ್ತಿದ್ದರು. ದಿನೇಶ್ ಬೇಕರಿಯವರ ಮಕ್ಕಳು ಕಾಪಿಕಾಡು ಮುನಿಸಿ ಪಲ್ ಶಾಲೆಗೆ ಹೋಗುತ್ತಿದ್ದರು. ನಾನು ಕಲಿತ ಶಾಲೆ ಎಂಬ ಹೆಮ್ಮೆ ನನಗೆ.

ರಸ್ತೆ ಬದಿಯ ಮನೆ ಎಂಬ ಕಾರಣಕ್ಕೆ ಒಂದು ರೀತಿಯಲ್ಲಿ ಭಯ. ಯಾಕೆಂದರೆ ಓದು ಬರಹ ತಿಳಿಯದ ಮಾವ ಬಾಗಿಲು ತೆರೆದಿಟ್ಟುಕೊಂಡೇ ಒಳ ಕೋಣೆಯಲ್ಲಿ ಎಲೆ ಅಡಿಕೆ ಗುದ್ದಿಕೊಂಡು ಕೂತರೆ ಅದನ್ನೇ ಕಾಯುತ್ತಾ ಅತ್ತೆಯೂ ಅಲ್ಲೇ ಕುಳಿತುಕೊಳ್ಳುವ ಸ್ವಭಾವ. ಆದರೆ ರಸ್ತೆ ಬದಿಯಿಂದ ಯಾರೂ ಮನೆಯೊಳಗೆ ನುಗ್ಗದಂತೆ ದಿನೇಶ್ ಬೇಕರಿಯವರ ಮನೆಯವರು, ಬೇಬಿಯಕ್ಕ ನೋಡಿಕೊಳ್ಳುತ್ತಲೇ ಇರುತ್ತಿದ್ದರು. ಬೇಬಿಯಕ್ಕನಿಗೆ ಮಗಳು ಶಮಿನಾ ಶಾಲೆಗೆ ಹೋದ ಮೇಲೆ ಅವಳು ಸಂಜೆ ಬರುವವರೆಗೆ ವಿರಾಮ. ಎಲ್ಲರಲ್ಲೂ ಮಾತನಾಡುವ ಸ್ವಭಾವದವರಾದ ಅವರು ಮನೆಯೊಳಗಿನ ಸಿಟ್‌ಔಟಲ್ಲೇ ಕುಳಿತುಕೊಂಡು ದಾರಿಯಲ್ಲಿ ಹೋಗುವವರನ್ನು ಕರೆದು ಮಾತಾಡಿಸುತ್ತಿದ್ದರು. ಬೇಬಿಯಕ್ಕ ಮುಂಬೈಯಲ್ಲಿದ್ದವರು. ಅವರ ಗಂಡ ಇಂಜಿನಿಯರ್ ಆಗಿದ್ದರು. ಆಗೆಲ್ಲಾ ಇಂಜಿನಿಯರ್ ಎನ್ನುವುದು ಬಹಳ ಅಪರೂಪದ ವೃತ್ತಿ. ಅದರಲ್ಲೂ ಮಂಗಳೂರಲ್ಲಿ ಇಂಜಿನಿಯರ್‌ಗಳಿಗೆ ಸಂಬಂಧಿಸಿದ ಕೆಲಸಗಳೇ ಇಲ್ಲ ಎಂದರೂ ಸರಿಯೇ. ಅವರ ಮನೆಯಲ್ಲಿ ಅವರ ಪತಿ ಜವಾಹರಲಾಲ್ ನೆಹರೂರವರಿಂದ ಗೌರವ ಹಾಗೂ ಹಸ್ತಲಾಘವ ಪಡೆದುಕೊಂಡ ಭಾವಚಿತ್ರವಿತ್ತು. ದೇವಾಡಿಗ ಸಮುದಾಯಕ್ಕೆ ಸೇರಿದ ಅವರು ಅವರ ಸಮಾಜದ ಮೊದಲ ಇಂಜಿನಿಯರ್ ಆಗಿದ್ದರು ಎಂಬ ನೆನಪು.

ಗಂಡನನ್ನು ಸಣ್ಣ ಪ್ರಾಯದಲ್ಲೇ ಕಳೆದುಕೊಂಡ ಬೇಬಿಯಕ್ಕ ಇದ್ದ ಒಬ್ಬಳೇ ಮಗಳ ವಿದ್ಯಾಭ್ಯಾಸಕ್ಕಾಗಿ ತವರೂರು ಮಂಗಳೂರಿಗೆ ಬಂದಿದ್ದರು. ಸ್ನೇಹ ಸ್ವಭಾವದ ಬೇಬಿಯಕ್ಕ ಒಳ್ಳೆಯ ಮಾತುಗಾತಿ. ಹಾಗೆಯೇ ಅಪರೂಪಕ್ಕೆ ನನಗೆ ವಿರಾಮ ಸಿಕ್ಕಿದಾಗ ತನ್ನ ಬದುಕಿನ ಒಳ್ಳೆಯ ದಿನಗಳ ಕುರಿತು, ಮುಂಬೈಯ ಬದುಕಿನ ಕುರಿತು ಮಾತಾಡುತ್ತಿದ್ದರು. ಅವರಿಗೆ ನಾವು ಶಿಕ್ಷಕರು, ಉಪನ್ಯಾಸಕರು ಎಂಬ ಬಗ್ಗೆ ಗೌರವವಿತ್ತು. ಅವರ ಬಂಧುಗಳಾದ ಪಿ.ಕೆ.ಮೊಯ್ಲಿಯವರು ಸುರತ್ಕಲ್‌ನ ಗೋವಿಂದ ದಾಸ ಕಾಲೇಜಲ್ಲಿ ಉಪನ್ಯಾಸಕರಾಗಿದ್ದರು. ಅವರ ಮನೆಗೆ ಬಂದಾಗ ಅವರನ್ನು ಪರಿಚಯ ಮಾಡಿಕೊಂಡಿದ್ದೆವು. ನಮ್ಮ ಸಾಲಿನ ಮನೆಗಳ ಎದುರು ದೊಡ್ಡದಾದ ಹಿತ್ತಲು ಮತ್ತು ಬಹಳ ಚಂದದ ದೊಡ್ಡ ಬಂಗ್ಲೆಯಂತಹ ಮನೆಯೊಂದಿತ್ತು. ಈಗಲೂ ಇದೆ.

ಅದು ಬಹು ವರ್ಷಗಳ ಮೊದಲು ಅಂದರೆ ನಾನು ಕಾಪಿಕಾಡು ಶಾಲೆಯಲ್ಲಿ ಓದುವಾಗ ನನ್ನ ತರಗತಿಯಲ್ಲಿದ್ದ ವಿಜಯಾ ಮತ್ತು ವಿವೇಕ ಎನ್ನುವವರ ಮನೆಯಾಗಿತ್ತು. ಅವರ ತಂದೆ ಆರ್.ಕೆ. ಗುರ್ಜರ್ ಬಹಳ ಶ್ರೀಮಂತರು. ಆ ಕಾಲದಲ್ಲಿ ಕಾಪಿಕಾಡು ರಸ್ತೆಯಲ್ಲಿ ಬೆರಳೆಣಿಕೆಯಲ್ಲಿ ಓಡಾಡುತ್ತಿದ್ದ ಕಾರುಗಳಲ್ಲಿ ಒಂದು ಅವರದ್ದಾಗಿತ್ತು. ಮುಂದೆ ಆರ್.ಕೆ. ಗುರ್ಜರ್‌ರವರು ಆ ಮನೆ ಹಿತ್ತಲನ್ನು ಮಾರಾಟ ಮಾಡಿದ್ದರು. ನಾವೀಗ ಇಲ್ಲಿಗೆ ಬಂದ ವೇಳೆಯಲ್ಲಿ ಅದನ್ನು ಮುಸ್ಲಿಮರು ಖರೀದಿಸಿದ್ದರು. ಅವರು ನಮ್ಮೂರಿನ ಮುಸ್ಲಿಮರಂತೆ ಇರಲಿಲ್ಲ ಎನ್ನುವುದು ನಮ್ಮ ದೂರದಿಂದ ನೋಡಿದ ಗ್ರಹಿಕೆ. ಅವರ ಮನೆಯಲ್ಲಿ ಬಹುದೊಡ್ಡ ಕಾರು ಇದ್ದು ಮನೆ ಮಂದಿ ಕಾರಲ್ಲಿ ಕುಳಿತು ಹೊರಡುವಾಗ ಎಲ್ಲರೂ ಕುತೂಹಲದಿಂದ ಕಾದು ನೋಡುತ್ತಿದ್ದರು. ನನಗಂತಹ ಸ್ವಭಾವವೂ, ಅವಕಾಶವೂ ಎರಡೂ ಇಲ್ಲವಾದರೂ ಎರಡೂವರೆ ವರ್ಷಗಳ ಕಾಲ ಅಲ್ಲೇ ಇದ್ದಾಗ ಕಾಣದಿರಲು ಸಾಧ್ಯವೇ? ನೋಡುವ ಸಂದರ್ಭ ಸಿಕ್ಕಿದಾಗ ಆ ಮನೆಯ ಮಹಿಳೆಯರು ಹಾಗೂ ಪುರುಷರು ಬಹಳ ಸುಂದರಾಂಗರು ಎನ್ನುವುದು ಖಚಿತವಾಯಿತು.

ಹಾಗೆಯೇ ಅವರ ಮನೆಯಲ್ಲಿ ಅಪರೂಪಕ್ಕೊಮ್ಮೊಮ್ಮೆ ಸಂಗೀತ ಕಛೇರಿ ಅಂದರೆ ಖವ್ವಾಲಿಯಂತಹ ಕಾರ್ಯಕ್ರಮಗಳು ನಡೆಯುತ್ತಿತ್ತು. ಅವರು ಯಾರು ಎಲ್ಲಿಯವರು ಎಂಬ ಊರಿನ ಸಾಮಾನ್ಯ ಜನರ ಕುತೂಹಲದ ಪ್ರಶ್ನೆಗೆ ಉತ್ತರ ಮಾತ್ರ ಸಿಕ್ಕಿರಲಿಲ್ಲ. ಸಿಕ್ಕಿದರೂ ಸಿಕ್ಕಿರಬಹುದು. ನನಗೆ ತಿಳಿದಿರಲಿಲ್ಲ. ಅವರ ವಿಶಾಲವಾದ ಹಿತ್ತಿಲಿಗೆ ಭಾರೀ ಕೌಂಪೌಂಡ್ ಇದ್ದು, ಹಿಂಭಾಗ ಎಲ್ಲವೂ ಕ್ರಿಶ್ಚಿಯನ್ನರಿಗೆ ಸೇರಿತ್ತು. ಅಲ್ಲಿ ಒಂದು ಮನೆ ರೇಗೋ ಎನ್ನುವವರದ್ದಾಗಿದ್ದು ಅವರು ಸಂತ ಅಲೋಶಿಯಸ್ ಕಾಲೇಜಲ್ಲಿ ಕ್ಲಾರ್ಕ್ ಆಗಿದ್ದರೆಂಬ ನೆನಪು. ಅವರ ಅಣ್ಣ ಅತ್ತಿಗೆ ಇಬ್ಬರೂ ತೀರಿಕೊಂಡಿದ್ದು ಅವರ ಮೂರು ಮಕ್ಕಳನ್ನು ಇವರು ನೋಡಿಕೊಳ್ಳುತ್ತಿದ್ದರು. ಮದುವೆಯಾಗದೆ ಇದ್ದ ಇವರು ಹಾಗೂ ಇವರ ತಮ್ಮ ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದವರು ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊತ್ತಿದ್ದರು. ಸಿಂತಿಯಾ, ಲೀನಾ ಮತ್ತು ವಿನ್ಸಿ ಅಕ್ಕ ತಂಗಿಯರ ನಡುವಿನ ಹುಡುಗ. ಶಾಲೆಗೆ ಹೋಗುತ್ತಿದ್ದುದರ ಜೊತೆಗೆ ಮನೆಯಂಗಳದ ಮಲ್ಲಿಗೆ ತೋಟದಲ್ಲಿ ಬೆಳಗ್ಗೆ ಸಂಜೆ ಕೆಲಸ ಮಾಡುತ್ತಿದ್ದರು.

ಈ ಮಕ್ಕಳು ನನ್ನ ಮಗಳನ್ನು ತುಂಬಾ ಹಚ್ಚಿಕೊಂಡಿದ್ದರು. ಸಂಜೆ ಶಾಲೆ, ಕಾಲೇಜು ಮುಗಿಸಿ ಮನೆಗೆ ಬಂದು ಮಗುವನ್ನು ಮಾತನಾಡಿಸಿಕೊಂಡು ಹೋಗುವ ರೂಢಿ ಇಟ್ಟುಕೊಂಡಿದ್ದರು. ತಾಯಿಯಿಲ್ಲದ ಮಕ್ಕಳಿಗೆ ತಿಂಡಿ ತಿನಿಸು ಮಾಡಿಕೊಂಡು ತಿನ್ನಲು ಗೊತ್ತಿಲ್ಲದ ದಿನಗಳು. ನನಗೂ ಅವರನ್ನು ಕಂಡರೆ ಪ್ರೀತಿಯೊಂದಿಗೆ ಕನಿಕರ. ಹಬ್ಬದ ದಿನಗಳಲ್ಲಿ ಸುತ್ತಲಿನ ಎಲ್ಲರೂ ಹಿಂದೂಗಳಿದ್ದುದರಿಂದ ಅವರಿಗೆಲ್ಲಾ ಹಂಚುವ ಸಂದರ್ಭಗಳು ಕಡಿಮೆ. ಆದ್ದರಿಂದ ಈ ಮಕ್ಕಳನ್ನು ಮನೆಗೆ ಊಟಕ್ಕೆ ಕರೆಯುತ್ತಿದ್ದೆ. ಹಾಗೆಯೇ ಹಬ್ಬದ ಅಡುಗೆ ಅವರಿಗೆ ನೀಡಿ ಸಂತೋಷ ಪಡುತ್ತಿದ್ದೆವು. ಅವರೂ ನನಗೆ ಮಲ್ಲಿಗೆ, ಗುಲಾಬಿ, ಜಾಜಿ ಎಂದು ಯಾವಾಗಲೂ ಹೂ ಕಟ್ಟಿ ತಂದು ತಮ್ಮ ಪ್ರೀತಿ ವ್ಯಕ್ತಪಡಿಸುತ್ತಿದ್ದರು.

ಜೊತೆಗೆ ಅವರ ಮನೆಯಲ್ಲಿ ಪಪ್ಪಾಯಿ, ಹಲಸು, ಮಾವಿನ ಹಣ್ಣುಗಳಿದ್ದು ಖರೀದಿಸುವುದರ ಜೊತೆಗೆ ಉಚಿತವಾಗಿಯೂ ತಂದು ಕೊಡುತ್ತಿದ್ದರು. ಹಾಗೆಯೇ ನನ್ನ ಮಗಳನ್ನು ಅವರ ಮನೆಗೂ ಎತ್ತಿಕೊಂಡು ಹೋಗುತ್ತಿದ್ದರು. ಮಾತು ಬರುವ ವೇಳೆಗೆ ನನ್ನ ಮಗಳು ಅವರನ್ನು ‘‘ಪುಪ್ಪಕ್ಕ’’ ಅಂದರೆ ಹೂವು ಕೊಡುವ ಅಕ್ಕನವರು ಎಂದು ಕರೆಯುತ್ತಿದ್ದಳು. ಕೋಟೆಕಾರಿನಲ್ಲಿ ನೂರ್‌ಜಹಾನ್ ಮತ್ತು ಝುಲೈಖಾ ನನ್ನ ಮಗಳ ಆರೈಕೆಗೆ ದೊರಕಿದರೆ ಇಲ್ಲಿ ಸಿಂತಿಯಾ ಮತ್ತು ಲೀನಾ ನನ್ನ ಮಗಳನ್ನು ಎತ್ತಿ ಆಡಿಸಲು ಸಿಕ್ಕಿದರು. ಪ್ರೀತಿ, ವಿಶ್ವಾಸಗಳಿಗೆ ಜಾತಿ ಧರ್ಮಗಳು ಅಡ್ಡಿಯಾಗುವುದಿಲ್ಲ ಎಂಬ ನನ್ನ ತಿಳುವಳಿಕೆಗೆ ಈ ಊರಿನಲ್ಲಿಯೂ ಸಮರ್ಥನೆ ದೊರೆಯಿತು.

Writer - ಚಂದ್ರಕಲಾ ನಂದಾವರ

contributor

Editor - ಚಂದ್ರಕಲಾ ನಂದಾವರ

contributor

Similar News