''ಇಸ್ಲಾಂ ಧರ್ಮದ ಪ್ರಾರ್ಥನೆಯಲ್ಲಿ ಆಝಾನ್ ಅತಿಮುಖ್ಯ, ಆದರೆ ಧ್ವನಿವರ್ಧಕವಲ್ಲ''
ಚಂಡೀಗಢ ಮೇ 3: ಇಸ್ಲಾಂ ಧರ್ಮದ ಅವಿಭಾಜ್ಯ ಅಂಗ ಆಝಾನ್ ಆಗಿರುವುದು ನಿಸ್ಸಂಶಯವಾದರೂ ಅದನ್ನು ಧ್ವನಿವರ್ಧಕಗಳ ಮೂಲಕ ಕೇಳಿಸಬೇಕೆಂದೇನಿಲ್ಲ ಎಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಹೇಳಿದೆ.
ಆಝಾನ್ ಬಗ್ಗೆ ಸರಣಿ ಟ್ವೀಟುಗಳನ್ನು ಮಾಡಿ ವಿವಾದ ಸೃಷ್ಟಿಸಿದ್ದ ಹಿನ್ನೆಲೆ ಗಾಯಕ ಸೋನು ನಿಗಮ್ ವಿರುದ್ಧ ಕ್ರಿಮಿಲ್ ಪ್ರಕರಣ ದಾಖಲಿಸಬೇಕೆಂದು ಕೋರಿ ಹರ್ಯಾಣದ ಸೋನೆಪತ್ ನಿವಾಸಿ ಆಸ್ ಮುಹಮ್ಮದ್ ಎಂಬವರು ಸಲ್ಲಿಸಿದ ಅರ್ಜಿಯನ್ನು ಮಂಗಳವಾರ ವಿಚಾರಣೆಗೆ ಕೈಗೆತ್ತಿಕೊಂಡ ಜಸ್ಡಿಸ್ ಎಂಎಂಎಸ್ ಬೇಡಿ ಅವರ ಏಕ ಸದಸ್ಯ ಪೀಠವು ಮೇಲಿನಂತೆ ಹೇಳಿತು.
ಅರ್ಜಿದಾರರ ಅಪೀಲು ಪ್ರಚಾರ ಪಡೆಯುವ ಅಗ್ಗದ ತಂತ್ರವಾಗಿದೆ ಎಂದು ಅಭಿಪ್ರಾಯ ಪಟ್ಟ ಜಸ್ಟಿಸ್ ಬೇಡಿ, ಪ್ರತಿವಾದಿ ಸಂಖ್ಯೆ 4(ನಿಗಮ್) ಉಪಯೋಗಿಸಿದ ಕೆಲ ಪದಗಳನ್ನು ಪರಿಶೀಲಿಸಿದಾಗ ಟ್ವೀಟ್ ಸಂಖ್ಯೆ 4ರಲ್ಲಿ ಅವರು ಉಪಯೋಗಿಸಿದ 'ಗುಂಡಾಗರ್ದಿ' ಪದವು ಆಝಾನ್ ವಿಷಯಕ್ಕೆ ಸಂಬಂಧಿಸಿದ್ದಲ್ಲವಾಗಿದ್ದು ಬದಲಾಗಿ ಧ್ವನಿವರ್ಧಕಗಳು ಮತ್ತು ಆಂಪ್ಲಿಫೈಯರ್ ಗಳ ಬಳಕೆಗೆ ಸಂಬಂಧಿಸಿದ್ದಾಗಿತ್ತು ಎಂದು ಹೇಳಿದ್ದಾರೆ.
ಅರ್ಜಿದಾರ ಮುಹಮ್ಮದ್ ತಮ್ಮ ಅಪೀಲಿನಲ್ಲಿ ಸೋನು ನಿಗಮ್ ಅವರ ಟ್ವೀಟುಗಳು ಧಾರ್ಮಿಕ ವ್ಯವಹಾರಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯಕ್ಕಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಹಾಗೂ ಸಮುದಾಯದ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ದೂರಿದ್ದರು.
''ನಾನೊಬ್ಬ ಮುಸ್ಲಿಂ ಅಲ್ಲ ಆದರೂ ಪ್ರತೀದಿನ ಬೆಳಗ್ಗೆ ಆಝಾನ್ ನಿಂದ ನಾನು ಎಚ್ಚರಗೊಳ್ಳುತ್ತೇನೆ. ಇಂತಹ ಬಲವಂತದ ಧಾರ್ಮಿಕತೆ ಭಾರತದಲ್ಲಿ ಯಾವಾಗ ಅಂತ್ಯಗೊಳ್ಳುವುದು?'' ಎಂದು ಎಪ್ರಿಲ್ 17ರಂದು ಸೋನು ನಿಗಮ್ ಟ್ವೀಟ್ ಮಾಡಿದಾಗ ಭಾರೀ ರಾದ್ಧಾಂತ ಸೃಷ್ಟಿಯಾಗಿತ್ತಲ್ಲದೆ ಧಾರ್ಮಿಕ ನಾಯಕರೊಬ್ಬರು ಅವರ ವಿರುದ್ಧ ಫತ್ವಾ ಕೂಡ ಜಾರಿಗೊಳಿಸಿದ್ದರು.