‘ಗೋರಕ್ಷಕರ’ ಹಿಂಸಾಚಾರಕ್ಕೆ ಪೊಲೀಸರು ಹೊಣೆಗಾರರಲ್ಲ: ಸುಪ್ರೀಂ
ಹೊಸದಿಲ್ಲಿ, ಮೇ 3: ಗೋ ರಕ್ಷಣೆಯ ಹೆಸರಲ್ಲಿ ನಡೆಯುವ ಯಾವುದೇ ಘಟನೆಗಳಿಗೆ ಪೊಲೀಸ್ ಅಧಿಕಾರಿಗಳನ್ನು ವೈಯಕ್ತಿಕವಾಗಿ ಹೊಣೆಗಾರರನ್ನಾಗಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ಸಾಮಾಜಿಕ ಕಾರ್ಯಕರ್ತ ತೆಹ್‌ಸೀನ್ ಎಸ್.ಪೂನಾವಾಲಾ ಅವರ ಪರವಾಗಿ ವಕೀಲ ಸಂಜಯ್ ಹೆಗ್ಡೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಪೀಠವೊಂದು , ಈ ಬಗ್ಗೆ ರಾಜ್ಯ ಸರಕಾರ ಗಮನ ಹರಿಸಬೇಕು. ಈಗ ಯಾವುದೇ ಆದೇಶ ನೀಡಲು ನಾವು ಬಯಸುವುದಿಲ್ಲ ಎಂದು ತಿಳಿಸಿತು.
ಒಂದು ಪ್ರದೇಶದಲ್ಲಿ ಗೋ ರಕ್ಷಣೆಯ ಕಾರಣ ನೀಡಿ ಹಲ್ಲೆಯಂತ ಘಟನೆ ನಡೆದರೆ ಅಲ್ಲಿಯ ಪೊಲೀಸ್ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಬೇಕು ಎಂದು ಸಂಜಯ್ ಹೆಗ್ಡೆ ಹೇಳಿದರು. ಕೆಲವು ರಾಜ್ಯಗಳು ಗೋ ರಕ್ಷಣೆ ಮಾಡುವ ಗೋರಕ್ಷಕರಿಗೆ ಕಾನೂನು ಕ್ರಮದಿಂದ ವಿನಾಯಿತಿ ನೀಡುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸಂದರ್ಭ ಅವರು ವಾದ ಮಂಡಿಸುತ್ತಿದ್ದರು. ಈ ವೇಳೆ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಹೆಸರನ್ನು ಉಲ್ಲೇಖಿಸಲು ಯತ್ನಿಸಿದಾಗ ಪೀಠವು ಅಸಮ್ಮತಿ ಸೂಚಿಸಿತು.
ರಾಜಸ್ತಾನ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳನ್ನು ಪ್ರತಿನಿಧಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ಮಾತನಾಡಿ, ವಕೀಲ ಹೆಗ್ಡೆಯವರಿಗೆ ಮಾಧ್ಯಮಗಳಲ್ಲಿ ಸುದ್ದಿಯಾಗುವ ಆಸೆಯಿದೆ ಎಂದು ಛೇಡಿಸಿದರು. ಇದಕ್ಕೆ ಉತ್ತರಿಸಿದ ಸಂಜಯ್ ಹೆಗ್ಡೆ, ಗೋ ರಕ್ಷಣೆಯ ಹೆಸರಲ್ಲಿ ನಡೆಯುತ್ತಿರುವ ಘಟನೆಗಳೆಲ್ಲಾ ಪ್ರಥಮ ಪುಟದ ಸುದ್ದಿಯಾಗಿದೆ ಎಂದು ಇದಿರೇಟು ನೀಡಿದರು.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಬಗ್ಗೆ ಆರು ತಿಂಗಳೊಳಗೆ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ನ್ಯಾಯಾಲಯವು ಕೇಂದ್ರ ಸರಕಾರ, ರಾಜಸ್ತಾನ, ಮಹಾರಾಷ್ಟ್ರ, ಗುಜರಾತ್, ಉ.ಪ್ರದೇಶ ಮತ್ತು ಜಾರ್ಖಂಡ್ ರಾಜ್ಯಗಳಿಗೆ ಸೂಚಿಸಿತು.
ಈ ಮಧ್ಯೆ, ಗೋ ವಧೆಯನ್ನು ತಡೆಯುವ ಗೋರಕ್ಷಕರಿಗೆ ಕಾನೂನು ಕ್ರಮದಿಂದ ವಿನಾಯಿತಿ ನೀಡುವ ಕ್ರಮವನ್ನು ಕರ್ನಾಟಕ ಸರಕಾರ ಸಮರ್ಥಿಸಿಕೊಂಡಿರುವುದು ಗಮನಾರ್ಹವಾಗಿದೆ. ಈ ಬಗ್ಗೆ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿರುವ ಕರ್ನಾಟಕ ಸರಕಾರ, ಗೋ ಹತ್ಯೆಯನ್ನು ತಡೆಯುವ ‘ಸದುದ್ದೇಶದಿಂದ’ ನಡೆಸುವ ಕಾರ್ಯಕ್ಕೆ ಮಾತ್ರ ಕಾನೂನಿನ ಬೆಂಬಲವಿದೆ. ಆದರೆ ಸಮುದಾಯದ ನಡುವಿನ ಸಾಮರಸ್ಯ ಕದಡುವ ಯಾವುದೇ ಕಾರ್ಯಕ್ಕೆ ಕಾನೂನಿನ ಬೆಂಬಲವಿಲ್ಲ ಎಂದು ಸ್ಪಷ್ಟಪಡಿಸಿದೆ.
ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಉ.ಪ್ರದೇಶ ಮತ್ತು ಜಾರ್ಖಂಡ್ ರಾಜ್ಯ ಸರಕಾರಗಳು ಗೋ ರಕ್ಷಣೆಯ ಕಾರ್ಯಕ್ಕೆ ಕಾನೂನಿನ ಸಮರ್ಥನೆ ನೀಡಿರುವುದನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕೆಂದು ಕೋರಿ ತೆಹ್‌ಸೀನ್ ಎಸ್.ಪೂನಾವಾಲಾ ಮತ್ತು ಇತರ ಇಬ್ಬರು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.