‘ಆಪ್’ ಬಿಕ್ಕಟ್ಟು ಶಮನಕ್ಕೆ ಕೇಜ್ರೀ ಸೂತ್ರ: ಕುಮಾರ್‌ಗೆ ಹೆಚ್ಚುವರಿ ಸ್ಥಾನಮಾನ, ಖಾನ್ ಅಮಾನತು

Update: 2017-05-03 14:50 GMT

ಹೊಸದಿಲ್ಲಿ, ಮೇ 3: ಕೇಜ್ರೀವಾಲ್ ಸೇರಿದಂತೆ ಪಕ್ಷದ ಮುಖಂಡರನ್ನು ಟೀಕಿಸಿದ್ದ ಕುಮಾರ್ ವಿಶ್ವಾಸ್‌ರನ್ನು ಸಮಾಧಾನಗೊಳಿಸಲು ‘ಆಪ್’ ಮುಖಂಡರು ಮುಂದಾಗಿದ್ದು ವಿಶ್ವಾಸ್‌ಗೆ ಹೊಸ ಅಧಿಕಾರವನ್ನು ನೀಡಲಾಗಿದೆ. ಅಲ್ಲದೆ ವಿಶ್ವಾಸ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದ ಶಾಸಕ ಅಮಾನುಲ್ಲಾ ಖಾನ್‌ರನ್ನು ಅಮಾನತುಗೊಳಿಸಲಾಗಿದೆ.

 ‘ಆಪ್’ ಪಕ್ಷದ ಅತ್ಯುನ್ನತ ಸಮಿತಿಯಾದ ರಾಜಕೀಯ ವ್ಯವಹಾರಗಳ ಸಮಿತಿ (ಪಿಎಸಿ) ಇಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ನೇತೃತ್ವದಲ್ಲಿ ಸಭೆ ಸೇರಿದ್ದು ಸಭೆಯಲ್ಲಿ ಕುಮಾರ್ ವಿಶ್ವಾಸ್ ಕೂಡಾ ಪಾಲ್ಗೊಂಡಿದ್ದರು. ಇದುವರೆಗೆ ಪಕ್ಷದ ಸಾಗರೋತ್ತರ ನಿಧಿ ವಿಭಾಗದ ಉಸ್ತುವಾರಿ ವಹಿಸುತ್ತಿದ್ದ ಕುಮಾರ್ ವಿಶ್ವಾಸ್‌ಗೆ ಹೆಚ್ಚುವರಿಯಾಗಿ ರಾಜಸ್ತಾನದಲ್ಲಿ ಪಕ್ಷದ ಉಸ್ತುವಾರಿ ವಹಿಸಿಕೊಡಲಾಯಿತು. ಅಲ್ಲದೆ ಕುಮಾರ್ ವಿಶ್ವಾಸ್‌ರನ್ನು ಟೀಕಿಸಿದ್ದ ಶಾಸಕ ಅಮಾನುಲ್ಲಾ ಖಾನ್‌ರನ್ನು ಪಕ್ಷದಿಂದ ಅಮಾನತುಗೊಳಿಸಲಾಯಿತು.

ಪಕ್ಷದ ಹಿತದೃಷ್ಟಿಯಿಂದ ಇಂತಹ ಮಾತುಕತೆ ಅಗತ್ಯವಿದೆ. ಪಕ್ಷದ ನಿರ್ಧಾರಕ್ಕೆ ಬದ್ಧನಾಗಿದ್ದೇನೆ ಎಂದು ಕುಮಾರ್ ವಿಶ್ವಾಸ್ ಹೇಳಿದರು. ಆದರೆ ಅಮಾನತು ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಲು ಈಗ ಸೂಕ್ತ ಮಯವಲ್ಲ ಎಂದು ಖಾನ್ ತಿಳಿಸಿದ್ದಾರೆ.

 ದಿಲ್ಲಿ ಮಹಾನಗರಪಾಲಿಕೆ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ಬಳಿಕ ಕುಮಾರ್ ವಿಶ್ವಾಸ್ ಪಕ್ಷದ ಮುಖಂಡರ ವಿರುದ್ಧ ಟೀಕಾ ಪ್ರಹಾರ ನಡೆಸಿ ಪಕ್ಷ ತ್ಯಜಿಸುವ ಸೂಚನೆ ನೀಡಿದ್ದರು. ಇವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಮುಖ್ಯಮಂತ್ರಿ ಕೇಜ್ರೀವಾಲ್ ಮತ್ತು ಉಪಮುಖ್ಯಮಂತ್ರಿ ಮನೀಷ್ ಸಿಸೊಡಿಯಾ ಹರಸಾಹಸ ಪಟ್ಟಿದ್ದರು. ಕುಮಾರ್ ವಿಶ್ವಾಸ್ ಮನೆಗೆ ತೆರಳಿದ್ದ ಕೇಜ್ರೀವಾಲ್ ಅಲ್ಲಿ ಒಂದು ರಾಜೀಸೂತ್ರ ಮುಂದಿಟ್ಟಿದ್ದು ಅದರಂತೆ ಅಮಾನುಲ್ಲಾ ಖಾನ್‌ರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ ಎಂದು ಹೇಳಲಾಗುತಿದೆ.

ಪಕ್ಷದ ನಾಯಕರನ್ನು ಟೀಕಿಸಿದ್ದ ಕುಮಾರ್ ವಿಶ್ವಾಸ್‌ಗೆ ಮತ್ತಷ್ಟು ಸ್ಥಾನಮಾನ ನೀಡಿ, ಇದೇ ರೀತಿ ವರ್ತಿಸಿದ ಅಮಾನುಲ್ಲಾ ಖಾನ್‌ರನ್ನು ಅಮಾನತುಗೊಳಿಸಿದ ಕ್ರಮ ಪಕ್ಷದ ಹಲವು ಮುಖಂಡರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಸದ್ಯಕ್ಕೆ ಆಮ್ ಆದ್ಮಿ ಪಕ್ಷದ ಆಂತರಿಕ ಬೇಗುದಿ ಶಮನವಾದಂತೆ ಕಂಡುಬಂದರೂ, ಇದು ಯಾವುದೇ ಕ್ಷಣದಲ್ಲಿ ಮತ್ತೆ ಸ್ಫೋಟಿಸಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News