2002ರ ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣ: ಅಪರಾಧಿಗಳಿಗೆ ಮರಣದಂಡನೆ ವಿಧಿಸಲು ಬಾಂಬೆ ಹೈಕೋರ್ಟ್ ನಕಾರ

Update: 2017-05-04 06:46 GMT

ಮುಂಬೈ, ಮೇ 4: ಅಹ್ಮದಾಬಾದ್ ನಗರದ ಸಮೀಪದ ರಂಧಿಕ್ಪುರ್ ಎಂಬ ಗ್ರಾಮದಲ್ಲಿ 2002ರ ಗುಜರಾತ್ ಗಲಭೆಗಳ ಸಂದರ್ಭ ಆಗ 19 ವರ್ಷದವಳಾಗಿದ್ದ ಬಿಲ್ಕಿಸ್ ಬಾನೋ ಎಂಬ ಗರ್ಭಿಣಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರಗೈದ ಪ್ರಕರಣದ ಹನ್ನೊಂದು ಮಂದಿ ಅಪರಾಧಿಗಳ ಪೈಕಿ ಮೂವರಿಗೆ ಮರಣದಂಡನೆ ವಿಧಿಸಲಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.

ಬಿಲ್ಕಿಸ್ ಬಾನೋಳ ಮೂರು ವರ್ಷದ ಪುತ್ರಿ ಸಹಿತ ಆಕೆಯ ಕುಟುಂಬದ 14 ಸದಸ್ಯರನ್ನು ಕೊಲೆಗೈದ ಆರೋಪವನ್ನೂ ಈ ಆರೋಪಿಗಳು ಎದುರಿಸುತ್ತಿದ್ದಾರೆ.

ಇದು ಅಪರೂಪದ ಪ್ರಕರಣಗಳಲ್ಲಿಯೇ ಅಪರೂಪವಾದದ್ದು ಎಂದು ಕಳೆದ ವರ್ಷ ನ್ಯಾಯಾಲಯಕ್ಕೆ ಹೇಳಿದ್ದ ಸಿಬಿಐ ಈ ಪ್ರಕರಣದಲ್ಲಿ ದೋಷಿಗಳೆಂದು ಘೋಷಿಸಲ್ಪಟ್ಟ ಮೂವರಿಗೆ ಗಲ್ಲು ಶಿಕೆ ವಿಧಿಸಿ ಕಠಿಣ ಸಂದೇಶ ಸಾರಬೇಕೆಂದು ಕೋರಿತ್ತು. ಆ ಮೂವರಾದ ಜಸ್ವಂತ್ ನಾಯ್, ಗೋವಿಂದ್ ನಾಯ್ ಹಾಗೂ ಸೈಲೇಶ್ ಭಟ್ಟ್ ಗರ್ಭಿಣಿಯಾಗಿದ್ದ ಬಿಲ್ಕಿಸ್, ಆಕೆಯ ಸಹೋದರಿ ಹಾಗೂ ತಾಯಿಯನ್ನು ಅತ್ಯಾಚಾರಗೈದ ಬಗ್ಗೆ ಸ್ಪಷ್ಟ ಪುರಾವೆಗಳಿವೆ ಎಂದು ಸಿಬಿಐ ಹೇಳಿಕೊಂಡಿತ್ತು.

ಆರೋಪಿಗಳಲ್ಲಿ ಸೈಲೇಶ್ ಎಂಬಾತ ಬಿಲ್ಕಿಸ್ ಕೈಯಲ್ಲಿದ್ದ ಆಕೆಯ ಮೂರು ವರ್ಷದ ಪುತ್ರಿಯನ್ನು ಬಲವಂತವಾಗಿ ಸೆಳೆದು ಆಕೆಯ ತಲೆಯನ್ನು ಕಲ್ಲಿನಿಂದ ಜಜ್ಜಿದ ಪರಿಣಾಮ ಮಗು ಸ್ಥಳದಲ್ಲಿಯೇ ಸಾವನ್ನಪ್ಪಿತ್ತು ಎಂದು ಆರೋಪಿಸಲಾಗಿತ್ತು. ಮಾರ್ಚ್ 3, 2002ರಂದು ನಡೆದ ಈ ಘಟನೆಯಲ್ಲಿ ಬಿಲ್ಕಿಸ್ ತಾಯಿ, ಸಹೋದರಿ ಸೇರಿದಂತೆ ಅವರ ಕುಟುಂಬದ 14 ಮಂದಿ ಹಾಗೂ ಅವರ ಗ್ರಾಮದ 17 ಮಂದಿಯನ್ನು ಹತ್ಯೆಗೈಯಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿ ಗುಜರಾತ್ ರಾಜ್ಯದ ಐವರು ಪೊಲೀಸ್ ಅಧಿಕಾರಿಗಳನ್ನು ದೋಷಮುಕ್ತಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನೂ ಸಿಬಿಐ ಪ್ರಶ್ನಿಸಿತ್ತು. ಪೊಲೀಸರು ಇದೀಗ ಅಪರಾಧಿಗಳೆಂದು ಘೋಷಿಸಲ್ಪಟ್ಟವರ ಜತೆ ಸೇರಿ ದಾಖಲೆಗಳನ್ನು ತಿದ್ದಿದ್ದರು ಎಂಬ ಆರೋಪವನ್ನು ಈ ಐವರು ಪೊಲೀಸರು ಹೊತ್ತಿದ್ದರು.

ಸಾಕ್ಷಿಗಳನ್ನು ಬೆದರಿಸಬಹುದೆಂಬ ಭಯದಿಂದ ಪ್ರಕರಣದ ವಿಚಾರಣೆಯನ್ನು ಗುಜರಾತ್ ಹೊರಗಿನ ನ್ಯಾಯಾಲಯದಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಜನವರಿ 2008ರ ತನ್ನ ತೀರ್ಪಿನಲ್ಲಿ ಮುಂಬೈಯ ವಿಚಾರಣಾ ನ್ಯಾಯಾಲಯವು 11 ಮಂದಿಯನ್ನು ದೋಷಿಗಳೆಂದು ಹೆಸರಿಸಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದರೂ ಅವರೆಲ್ಲರೂ ಅದರ ವಿರುದ್ಧ ಹೈಕೋರ್ಟಿನ ಮೊರೆ ಹೋಗಿದ್ದರು.

ಆದರೆ ಪ್ರಕರಣದ ತೀರ್ಪನ್ನು ಕಾದಿರಿಸಿದ್ದ ಹೈಕೋರ್ಟ್ ಅಪರಾಧಿಗಳ ಹೆಸರು ಹಾಗೂ ಅವರು ವಿಚಾರಣೆ ಸಂದರ್ಭ ಎಷ್ಟು ಸಮಯ ಜೈಲಿನಲ್ಲಿದ್ದರು ಎಂಬ ಬಗ್ಗೆ ಮಾಹಿತಿಯನ್ನು ಕೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News