'ಬಾಹುಬಲಿ 2' ಚಿತ್ರ ಆನ್ ಲೈನ್ ನಲ್ಲಿ ಸೋರಿಕೆ ?
ಮುಂಬೈ,ಮೇ5 : ಬಹು ನಿರೀಕ್ಷೆಯ ‘ಬಾಹುಬಲಿ 2- ದಿ ಕಂಕ್ಲೂಶನ್’ ಕಳೆದ ವಾರ ಬಿಡುಗಡೆಗೊಂಡಂದಿನಿಂದ ಎಲ್ಲಾ ದಾಖಲೆಗಳನ್ನು ಧೂಳೀಪಟಗೊಳಿಸಿ ಮುನ್ನುಗ್ಗುತ್ತಿರುವಂತೆಯೇ ಆಘಾತಕಾರಿ ಸುದ್ದಿಯೊಂದು ಬಂದಿದೆ. ಜನರು ಟಿಕೆಟ್ ಗೆ ಎಷ್ಟೇ ಬೆಲೆ ತೆತ್ತಾದರೂ ಈ ಚಲನಚಿತ್ರ ವೀಕ್ಷಿಸಲು ಹಾತೊರೆಯುತ್ತಿರುವಾಗ ಸ್ವಲ್ಪ ಹೊತ್ತಿನ ತನಕ ಈ ಬ್ಲಾಕ್ ಬಸ್ಟರ್ ಚಿತ್ರ ಆನ್ ಲೈನ್ ನಲ್ಲಿ ಸೋರಿಕೆಯಾಗಿತ್ತು ಎಂದು ತಿಳಿದು ಬಂದಿದೆ.
ಡೈಲಿಮೋಶನ್.ಕಾಂ ಎಂಬ ವೆಬ್ ತಾಣದಲ್ಲಿ ಈ ಚಿತ್ರ ಲೀಕ್ ಆಗಿತ್ತೆನ್ನಲಾಗಿದ್ದು ವೆಬ್ ಸೈಟ್ ನ ಟರ್ಮ್ಸ್ ಆಫ್ ಯೂಸ್ ನಿಯಮಾವಳಿಗಳ ಉಲ್ಲಂಘನೆಯ ಹಿನ್ನೆಲೆಯಲ್ಲಿ ಚಿತ್ರದ ವೀಡಿಯೋವನ್ನು ನಂತರ ಡಿಲೀಟ್ ಮಾಡಲಾಗಿತ್ತು.
ಕಳೆದ ವರ್ಷ ಆಮಿರ್ ಖಾನ್ ಅವರ ‘ದಂಗಲ್’ ಚಿತ್ರ ಬಿಡುಗಡೆಯಾದ ಸಮಯದಲ್ಲೇ ಅದನ್ನು ಫೇಸ್ ಬುಕ್ ನಲ್ಲಿ ಪಾಕಿಸ್ತಾನೀಯನೊಬ್ಬ ಲೀಕ್ ಮಾಡಿದ್ದ. ಅದನ್ನು ಅಲ್ಲಿಂದ ತೆಗೆಯುವಷ್ಟರ ಹೊತ್ತಿಗೆ ಕನಿಷ್ಠ 4 ಲಕ್ಷ ಜನರು ಚಿತ್ರವನ್ನು ಉಚಿತವಾಗಿ ವೀಕ್ಷಿಸಿಯಾಗಿತ್ತು.
ಸಾಮಾಜಿಕ ಜಾಲತಾಣಗಳು ಹೆಚ್ಚೆಚ್ಚು ಸಕ್ರಿಯವಾಗುತ್ತಿದ್ದಂತೆಯೇ ಚಿತ್ರಗಳ ಪೈರಸಿ ಪ್ರಕರಣಗಳೂ ಹೆಚ್ಚುತ್ತಿರುವುದು ಕಳವಳಕಾರಿಯಾಗಿದ್ದು ಸೈಬರ್ ಸೆಕ್ಯುರಿಟಿ ತಜ್ಞರು ಈ ಹಾವಳಿಗೆ ಅಂತ್ಯ ಹಾಡುವ ಅಗತ್ಯವಿದೆ.